ಬೆಳ್ತಂಗಡಿ: ಜಾನುವಾರು ಸಾಗಾಟದ ನೆಪವೊಡ್ಡಿ ಬೆಳ್ತಂಗಡಿ ತಾಲೂಕಿನ
ಮೇಲಂತಬೆಟ್ಟುವಿನಲ್ಲಿ ತಂಡವೊಂದು ಕಾನೂನು ಕೈಗೆತ್ತಿಕೊಂಡು ಅಮಾಯಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಖಂಡನೀಯ.
ಇತ್ತೀಚೆಗೆ ಜಿಲ್ಲಾ ವ್ಯಾಪ್ತಿಯಲ್ಲಿ ಗೋವಿನ ಹೆಸರಿನಲ್ಲಿ, ಕಪೋಲಕಲ್ಪಿತ ಲವ್ ಜಿಹಾದ್ ಹೆಸರಿನಲ್ಲಿ ಮುಸ್ಲಿಂ ಸಮಾಜದ ಯುವಕರು ಹಾಗೂ ಸಮುದಾಯದವರನ್ನು ಗುರಿಯಾಗಿರಿಸಿ ನಿರಂತರ ನೈತಿಕ ಪೊಲೀಸ್ ಗಿರಿ ಹೆಚ್ಚುತ್ತಿದೆ.
ಇಂತಹಾ ಘಟನೆಗಳನ್ನು ಪೊಲೀಸ್ ಇಲಾಖೆ ಮಟ್ಟಹಾಕಬೇಕು ಎಂದು ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ನಾಯಕರ ಬಳಗ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದೆ.
ಬೆಳ್ತಂಗಡಿ ಠಾಣೆಯಲ್ಲಿ ಗುರುವಾರ ಸಂಜೆಯೇ ಸಬ್ ಇನ್ಸ್‌ಪೆಕ್ಟರ್ ನಂದಕುಮಾರ್ ಅವರನ್ನು ಭೇಟಿ ಮಾಡಿದ ರಾಜ್ಯ ಸಮಿತಿ ಸದಸ್ಯರನ್ನೂ ಒಳಗೊಂಡ ನಿಯೋಗ ಈ ಮನವಿ ಮೂಲಕ ಆಗ್ರಹ ವ್ಯಕ್ತಪಡಿಸಿತು
ತಾಲೂಕಿನಲ್ಲಿ ಯಾರಿಂದಲೋ ಕುಮ್ಮಕ್ಕು ಪಡೆದಂತಿರುವ
ತಂಡಗಳು ಮುಸ್ಲಿಂ ಎಂಬ ಕಾರಣಕ್ಕೆ ಹಲವು ಕಡೆ ಹಿಂಸೆ ನೀಡುತ್ತಿರುವುದು, ಸುಳ್ಳು ಕೇಸುಗಳಾಗುವಂತೆ ಕಥೆ ಸೃಷ್ಟಿಸಿ ಅಮಾಯಕರನ್ನು ವ್ಯವಸ್ಥಿತವಾಗಿ ಜೈಲಿಗೆ ತಳ್ಳುವ ಘಟನೆಗಳು ಮರುಕಳಿಸುತ್ತಲೇ ಇವೆ. ಇದರಿಂದಾಗಿ ಸಾರ್ವಜನಿಕರು ಭಯದಿಂದ ಇರುವಂತಾಗಿದೆ. ಅದರ ಮುಂದುವರಿದ ಭಾಗವೆಂಬಂತೆ ಮೇಲಂತಬೆಟ್ಟು ಘಟನೆಯೂ ನಡೆದಿದೆ.
ಮುಸಲ್ಮಾನರ ಪವಿತ್ರ ರಂಝಾನ್ ಹಬ್ಬ ಸಮೀಪಿಸುತ್ತಿದ್ದಂತೆ ಕೋಮು ಸಂಘರ್ಷ ಸೃಷ್ಟಿಸುವ ಹುನ್ನಾರ ಇದರ ಹಿಂದೆ ಅಡಗಿರುವಂತಿದೆ. ಆದುದರಿಂದ ನಿನ್ನೆ ನಡೆದ ಅಮಾಯಕರ ಮೇಲಿನ ಹಲ್ಲೆ ಪ್ರಕರಣದ ದುಷ್ಕರ್ಮಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಇಂತಹಾ ಪ್ರಕರಣ ಮರುಕಳಿಸದಂತೆ ಸಂಬಂಧಪಟ್ಟ ಸಂಘಟನೆಗಳ ಮುಖಂಡರಿಗೆ ಸೂಕ್ತ ಎಚ್ಚರಿಕೆ ನೀಡಬೇಕು ಎಂದು ಆಗ್ರಹಿಸಿತು.
ಮೇಲಂತಬೆಟ್ಟು ಘಟನೆಯಲ್ಲಿ
ಆರೋಪಿಗಳ ಮೇಲೆ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿದೆ. ಆದರೆ ಕೊಲೆಯತ್ನದಂತಹಾ ಸೆಕ್ಷನ್ ಗಳನ್ನು ಬಳಸದೇ ಇರುವುದರಿಂದ ಅವರು ಸುಲಭದಲ್ಲಿ ಇದರಿಂದ ಹೊರಬರಲಿದ್ದಾರೆ. ಕಾನೂನನ್ನು ಕೈಗೆತ್ತಿಕೊಂಡು ಪೊಲೀಸರು ನಾಚುವಂತೆ ಮೆರೆದ ಈ ತಂಡದಮೇಲೆ ಈ ರೀತಿಯ ಮೃದು ಧೋರಣೆ ಸರಿಯಾದ ಕ್ರಮ ಅಲ್ಲ. ಅಲ್ಲದೆ ಬೆಳ್ತಂಗಡಿ ತಾಲೂಕಿನಾದ್ಯಂತ ಮಿತಿ ಮೀರುತ್ತಿರುವ ಈ ಅಕ್ರಮಗಳಿಗೆ ಕಡಿವಾಣ ಹಾಕದಿದ್ದರೆ ಮುಂದಕ್ಕೆ ಎಸ್ಸೆಸ್ಸೆಫ್ ದ.ಕನ್ನಡ ಜಿಲ್ಲಾ ಸಮಿತಿಯು ಸಂಘಟಿತ ಹೋರಾಟವನ್ನು ನಡೆಸಲಿದೆ ಎಂದು ಪೊಲೀಸ್ ಇಲಾಖೆಗೆ ಮನವರಿಕೆ ಮಾಡಿದರು.
ನಿಯೋಗದಲ್ಲಿ ಎಸ್ಸೆಸ್ಸೆಫ್ ರಾಜ್ಯ ಸದಸ್ಯರೂ,ಜಿಲ್ಲಾ ಕಾರ್ಯದರ್ಶಿಯಾದ ಮುಹಮ್ಮದ್ ಅಲಿ ತುರ್ಕಳಿಕೆ, ರಾಜ್ಯ ಸದಸ್ಯರೂ ಜಿಲ್ಲಾ ಕೋಶಾಧಿಕಾರಿ ಎಂ.ಶರೀಫ್ ಬೆರ್ಕಳ, ಜಿಲ್ಲಾ ಕಾರ್ಯದರ್ಶಿಗಳಾದ ಇಕ್ಬಾಲ್ ಮಾಚಾರ್,ಮುಸ್ತಫಾ ಉರುವಾಲುಪದವು, ಜಿಲ್ಲಾ ಸದಸ್ಯ ಶರೀಫ್ ನಾವೂರು,ಬೆಳ್ತಂಗಡಿ ಡಿವಿಷನ್ ಅಧ್ಯಕ್ಷ ಹಾರಿಸ್ ಕುಕ್ಕುಡಿ,
ಡಿವಿಷನ್ ಪ್ರಧಾನ ಕಾರ್ಯದರ್ಶಿ ತೌಫಿಕ್ ವೇಣೂರು, ಕೋಶಾಧಿಕಾರಿ ಝಮೀರ್ ಸಅದಿ ಲಾಯಿಲ, ಕಾರ್ಯದರ್ಶಿ ಯೂಸುಫ್ ಮದನಿ ಕೊಯ್ಯೂರು, ಡಿವಿಷನ್ ನಾಯಕ ಹಕೀಂ ಕಕ್ಕಿಂಜೆ ಇವರು ಉಪಸ್ಥಿತರಿದ್ದರು.