janadhvani

Kannada Online News Paper

ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಸಚಿವ ಕೆ.ಎಸ್. ಈಶ್ವರಪ್ಪ-ಬಿ.ಎಸ್.ವೈ ಕೆಂಡಾಮಂಡಲ

ಬೆಂಗಳೂರು,ಏ.1: ತಮ್ಮ ವಿರುದ್ಧ ತಿರುಗಿ ಬಿದ್ದಿರುವ ಗ್ರಾಮೀಣಾಭಿವೃದ್ಧಿ ಸಚಿವರ ವಿರುದ್ಧ ಕೆಂಡಮಂಡಲವಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅಗತ್ಯಬಿದ್ದರೆ ಸಚಿವ ಸ್ಥಾನದಿಂದ ಕೈಬಿಡುವುದಾಗಿ ಕೆ.ಎಸ್. ಈಶ್ವರಪ್ಪ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ ಯಡಿಯೂರಪ್ಪ ನಡೆಯಿಂದ ಇನ್ನಷ್ಟು ಆಕ್ರೋಶಗೊಂಡಿರುವ ಸಚಿವ ಕೆ.ಎಸ್. ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ತಮ್ಮ ವಿರುದ್ದ ದೂರು ಆರೋಪ‌ ಹಿನ್ನಲೆಯಲ್ಲಿ ತಾಜ್ ವೆಸ್ಟಂಡ್ ಹೋಟೇಲಿ‌ನಲ್ಲಿ‌ ಮುಖ್ಯಮಂತ್ರಿ ಅವರು ಸಚಿವರ ಜತೆ ರಹಸ್ಯ ಸಭೆ ನಡೆಸಿದರು. ಸಚಿವರಾದ ಬಸವರಾಜ್ ಬೊಮ್ಮಾಯಿ, ಆರ್.ಅಶೋಕ್, ಡಾ.ಸುಧಾಕರ್, ಬಿ.ಸಿ.ಪಾಟೀಲ್, ಶಾಸಕ ಎಂ.ಪಿ.ರೇಣುಕಾಚಾರ್ಯ ಮತ್ತಿತರರು ಭಾಗವಹಿಸಿದ್ದರು.

ತಾವು ನಿಭಾಯಿಸುತ್ತಿರುವ ಗ್ರಾಮೀಣಾಭಿವೃದ್ಧಿ ಖಾತೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಸ್ತಕ್ಷೇಪ ಮಾಡುತ್ತಿದ್ದು ಅವರ ವಿರುದ್ಧ ಕ್ರಮ‌ಕೈಗೊಳ್ಳುವಂತೆ ರಾಜ್ಯಪಾಲರಿಗೆ ದೂರು ನೀಡಿದ ಸಚಿವ ಈಶ್ವರಪ್ಪ ವಿರುದ್ಧ ಸಚಿವ ಸಂಪುಟದ ಹಲವು ಸಚಿವರು,ಶಾಸಕರು ತಿರುಗಿ ಬಿದ್ದಿದ್ದಾರೆ. ನಾವು ಮಂತ್ರಿಗಳಾಗಲು ‌ಯಡಿಯೂರಪ್ಪ ಕಾರಣ ಎಂಬುದರಿಂದ ಹಿಡಿದು, ತಮಗಿರುವ ಅಧಿಕಾರವನ್ನು ಬಳಸಿ ಯಾರ ಖಾತೆಗಾದರೂ ಅವರು ಕೈ ಹಾಕಬಹುದು ಎಂಬಲ್ಲಿಯ ತನಕ ಇವರೆಲ್ಲಾ ಮಾತನಾಡಿದ್ದಾರೆ. ಈ ಬೆಳವಣಿಗೆ ನಂತರ ಈಶ್ವರಪ್ಪ ಅವರು ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಸಜ್ಜಾಗಬೇಕಿದೆ.

ಇದಾಗದಿದ್ದರೆ ಯಡಿಯೂರಪ್ಪ ಅವರ ಆಕ್ರೋಶದಿಂದ ಬಚಾವಾಗಲು ವರಿಷ್ಟರ ನೆರವು ಬಯಸಬೇಕಿದೆ. ಈ‌ ಹಿಂದೆ ಈಶ್ವರಪ್ಪ ಅವರ ಜತೆ, ಜತೆಗೇ ಉಪಮುಖ್ಯಮಂತ್ರಿ‌ ಹುದ್ದೆ ಅಲಂಕರಿಸಿದ್ದ ಹಾಲಿ ಕಂದಾಯ ಸಚಿವ ಆರ್.ಅಶೋಕ್: ನಾವು ಮಂತ್ರಿಗಳಾಗಿರುವುದು ಯಡಿಯೂರಪ್ಪ ಅವರ ವಿವೇಚನಾ ಅಧಿಕಾರದಿಂದ ಎಂದು ಈಶ್ವರಪ್ಪ ಅವರನ್ನು ಚುಚ್ಚಿದ್ದಾರೆ.

ಯಡಿಯೂರಪ್ಪ ಅವರು ಬಯಸಿದ್ದರಿಂದ ನಾವು ಅವರ ಸಂಪುಟದಲ್ಲಿದ್ದೇವೆ. ಹೀಗಾಗಿ ಈಶ್ವರಪ್ಪ ಅವರು ತಮ್ಮ‌ ಭಾವನೆಯನ್ನು ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಿಕೊಳ್ಳಬೇಕಿತ್ತು ಎಂದಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಯಿ ಮಾತನಾಡಿ, ನಮ್ಮ ಎಲ್ಲರ ಅಭಿಪ್ರಾಯ ಒಂದೆ ಇದೆ. ಆಡಳಿತ ನಡೆಸುವಾಗ ಮುಖ್ಯಮಂತ್ರಿ ಅವರಿಗೆ ಪರಮಾಧಿಕಾರವಿದೆ. ಕೋವಿಡ್ ಸೋಂಕು, ಪ್ರವಾಹದ ಸಮಸ್ಯೆಗಳಿತ್ತು.

ಕೋವಿಡ್ ಸಂಧರ್ಭದಲ್ಲಿ ಹಣಕಾಸಿನ ತೊಂದರೆ ಇತ್ತು ಯಾವುದೇ ಸಹಾಯ ಮಾಡಲು ಆಗಿಲ್ಲ. ಅಭಿವೃದ್ಧಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅಗತ್ಯಕ್ಕೆ ತಕ್ಕಂತೆ ಹಣ ಬಿಡುಗಡೆ ಮಾಡಿದ್ದಾರೆ. ಈಶ್ವರಪ್ಪ ಅವರಿಗೆ ಆಕ್ಷೇಪ ಇದ್ದರೆ ಮುಖ್ಯಮಂತ್ರಿಗಳ ಜೊತೆಗೆ ಕೂತು ಚರ್ಚೆ ಮಾಡಿಕೊಳ್ಳಬೇಕು. ಇಷ್ಟಕ್ಕೆ ರಾಜ್ಯಪಾಲರ ಬಳಿ ಹೋಗುವ ಅವಶ್ಯಕತೆ ಇರಲಿಲ್ಲ ಎಂದರು. ಅರೋಗ್ಯ ಸಚಿವ ಡಿ.ಸುಧಾಕರ್ ಅವರು ಮಾತನಾಡಿ, ಮುಖ್ಯಮಂತ್ರಿಗಳು ಬಯಸಿದಾಗ ಯಾರ ಸಚಿವರ ಖಾತೆಯನ್ನಾದರೂ ಪರಿಶೀಲಿಸಬಹುದು. ಇದಕ್ಕೆ ಆಕ್ಷೇಪ ಸಲ್ಲಿಸುವುದು ಸರಿಯಲ್ಲ ಎಂದಿದ್ದಾರೆ.

ಹೀಗೆ ಅವರು ಪರಿಶೀಲನೆ ನಡೆಸಿ ವಿಶೇಷ ಅನುದಾನ ಬಿಡುಗಡೆ ಮಾಡಲು‌ ನಿರ್ಧರಿಸಿದರೆ ಮಾಡಬಹುದು. ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಬೇಕೆಂದು ಬಯಸಿದರೂ ಮಾಡಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಯಡಿಯೂರಪ್ಪ ಅವರು ಪಕ್ಷದ ಶಾಸಕರು ಮತ್ತು ಹೈಕಮಾಂಡ್ ಬಯಸಿದ್ದರಿಂದ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಈಶ್ವರಪ್ಪ ಮಾತುಕತೆಯ ಮೂಲಕ ಐದು ನಿಮಿಷದಲ್ಲಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಿತ್ತು ಎಂದಿದ್ದಾರೆ.

ಕೃಷಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ. ಈಶ್ವರಪ್ಪ ಅವರು ಹಿರಿಯ ನಾಯಕರು. ಅವರು ರಾಜ್ಯಪಾಲರ ಅಂಗಳಕ್ಕೆ ಆಡಳಿತ ವಿಚಾರಗಳನ್ನು ತೆಗೆದುಕೊಂಡು ಹೋಗಿರುವುದು ಸರಿಯಲ್ಲ. ಮುಖ್ಯಮಂತ್ರಿ ಅವರನ್ನು ಅಪರಾಧಿ ಸ್ಥಾನದಲ್ಲಿ ನೋಡುವವರಿಗೆ ಆಹಾರ ಮಾಡುವುದು ಬೇಡ ಎಂದರು.

ಎ ಎಸ್ ಪಾಟೀಲ್ ನಡಹಳ್ಳಿ ಮಾತನಾಡಿ, ಸರ್ಕಾರದ ನೇತೃತ್ವ ವಹಿಸಿಕೊಂಡಿರುವ ಯಡಿಯೂರಪ್ಪ ಅವರ ಸರ್ಕಾರ ಬಂದಾಗ ಅನುದಾನ ಬಿಡುಗಡೆ ಮಾಡುವಂತೆ ಕೋರಿದ್ದೇವು. ಈಶ್ವರಪ್ಪ ಅವರಿಗೆ ಅನುದಾನ ಬಿಡುಗಡೆ ಮಾಡುವಂತೆ ಕೋರಿದ್ದೇವು. ಆದರೆ ಅವರು ಸ್ಪಂದಿಸಲಿಲ್ಲ. ಯಡಿಯೂರಪ್ಪ ಅವರು ಅನುದಾನ ನೀಡಿದ್ದಾರೆ ಇದರಲ್ಲಿ ತಪ್ಪೇನು ಎಂದರು.

error: Content is protected !! Not allowed copy content from janadhvani.com