ಬೆಂಗಳೂರು,ಮಾ.21:-ಮಕ್ಕಳ ಭವಿಷ್ಯ ರೂಪಿಸುವ ಜೊತೆಗೆ ಅವರ ಯೋಗಕ್ಷೇಮ ಮುಖ್ಯವಾಗಿದೆ. ಈ ದೃಷ್ಟಿಯಿಂದ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಆರೋಗ್ಯ ಇಲಾಖೆಯ ಸಲಹೆಯಂತೆ ಶಾಲಾ,ಕಾಲೇಜುಗಳ ಮುಚ್ಚಳದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಕೊರೊನಾ 2ನೇ ಅಲೆ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಆರೋಗ್ಯ ಇಲಾಖೆಯಿಂದ ಸರ್ಕಾರಕ್ಕೆ ಸಲಹೆ ಬಂದಿದೆ. ಮಕ್ಕಳ ಆರೋಗ್ಯದ ಕಡೆ ನಾವು ಗಮನ ಕೊಡಬೇಕಾಗಿದೆ. ಅವರ ಭವಿಷ್ಯದ ದೃಷ್ಟಿಯಿಂದ ಸಿಎಂ ಜೊತೆ ಚರ್ಚಿಸಿ, ಶಾಲಾಕಾಲೇಜುಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಜಾತ್ರೆ, ಸಮಾರಂಭಗಳಿಗೆ ಯಾವುದೇ ರಿಯಾಯ್ತಿ ಇಲ್ಲ. ಯುವಕರು ಅನಗತ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಕೊರೊನಾ ನಿಯಂತ್ರಿಸಲು ಸ್ವಯಂ ನಿರ್ಬಂಧ ಹಾಕಿಕೊಳ್ಳುವುದು ಸೂಕ್ತವಾಗಿದೆ. ಜಾತ್ರೆ, ಸಮಾರಂಭಗಳನ್ನು ಆದಷ್ಟು ಕಡಿಮೆ ಮಾಡಿ ಹಿರಿಯರು ಮತ್ತು ಮಕ್ಕಳ ಆರೋಗ್ಯ ಬಹುಮುಖ್ಯವಾಗಿದೆ.
ಹೀಗಾಗಿ ಅವರ ಆರೋಗ್ಯವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಕೊರೊನಾ ಪ್ರಕರಣಗಳು ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿವೆ. ಹೀಗಾಗಿ ಜನರ ನಡವಳಿಕೆಗಳು ಕೂಡ ಬದಲಾಗಬೇಕು. ಕೊರೊನಾ ಸೋಂಕಿಗೆ ಲಸಿಕೆ ಕೊಡಬಹುದು. ಪರಿಸ್ಥಿತಿ ಕೈ ಮೀರಿದರೆ ಏನು ಮಾಡಲು ಆಗುವುದಿಲ್ಲ.
ನೀವು ಸುರಕ್ಷಿತವಾಗಿದ್ದು, ನಿಮ್ಮವರನ್ನು ಸುರಕ್ಷಿತವಾಗಿ ನೋಡಿಕೊಳ್ಳುವ ಹೊಣೆಗಾರಿಕೆ ನಿಮ್ಮ ಮೇಲಿದೆ. ಎಚ್ಚರ ತಪ್ಪಿದರೆ ನೀವೆ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಹೊರರಾಜ್ಯಗಳಿಂದ ಬರುತ್ತಿರುವವರಿಂದ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ.
ಗಡಿಭಾಗಗಳಲ್ಲಿ ತಪಾಸಣೆ ನಡೆಸಿ ನೆಗೆಟಿವ್ ವರದಿ ಇದ್ದವರನ್ನು ಮಾತ್ರ ಪ್ರವೇಶಿಸಲು ಅವಕಾಶ ಕಲ್ಪಿಸಿ ಕೊಡಲಾಗುವುದು ಎಂದರು. ಕೊರೊನಾ ಮೊದಲ ಅಲೆಯ ಅಪಾಯಗಳನ್ನು ನಾವು ಈಗಾಗಲೇ ಎದುರಿಸಿದ್ದೇವೆ.
2ನೇ ಅಲೆಯ ಅಪಾಯಗಳನ್ನು ಎದುರಿಸುವುದಕ್ಕಿಂತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಮುಖ್ಯ. ಸರ್ಕಾರದ ಆರೋಗ್ಯ ಮಾರ್ಗಸೂಚಿಗಳನ್ನುಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಅವರು ಮನವಿ ಮಾಡಿದರು.