ನವದೆಹಲಿ ,ಡಿ. 31: ನವದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನ ನಿನ್ನೆ ಸಂಜೆ ಇಂದೋರ್ನಲ್ಲಿ ತುರ್ತಾಗಿ ಲ್ಯಾಂಡ್ ಆಗಿದೆ. ಆ ವಿಮಾನದಲ್ಲಿದ್ದ ಕಂದಮ್ಮನಿಗೆ ಉಸಿರಾಟದ ತೊಂದರೆ (hydrocephalus) ಕಾಣಿಸಿಕೊಂಡಿದ್ದರಿಂದ ಆ ಮಗುವಿನ ಪೋಷಕರು ಪೈಲಟ್ಗೆ ವಿಷಯ ತಿಳಿಸಿದರು. ಹೀಗಾಗಿ, ಮಗುವಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸುವ ಸಲುವಾಗಿ ಇಂದೋರ್ನಲ್ಲೇ Indigo ವಿಮಾನವನ್ನು ಇಳಿಸಲಾಯಿತು. ಆದರೂ ಆ ಮಗುವನ್ನು ಬದುಕಿಸಲು ಸಾಧ್ಯವಾಗಲಿಲ್ಲ. ವಿಮಾನ ಲ್ಯಾಂಡ್ ಆಗುವ ಮೊದಲೇ ಮಗು ಸಾವನ್ನಪ್ಪಿತ್ತು.
ನಿನ್ನೆ ಸಂಜೆ ಇಂಡಿಗೋ ವಿಮಾನದಲ್ಲಿ ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ದಂಪತಿಯ 7 ತಿಂಗಳ ಗಂಡು ಮಗುವಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಹೈಡ್ರೋಸೆಫಲಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಬೇಕಾಗಿತ್ತು. ಹೀಗಾಗಿ, ಪೈಲಟ್ಗೆ ವಿಷಯ ತಿಳಿಸಲಾಯಿತು. ನಿನ್ನೆ ಸಂಜೆ 5.55ಕ್ಕೆ ಬೆಂಗಳೂರಿಗೆ ಹೊರಟಿದ್ದ ವಿಮಾನವನ್ನು ಇಂದೋರ್ನಲ್ಲಿಯೇ ಇಳಿಸಲಾಯಿತು. ತಕ್ಷಣ ವಿಮಾನ ನಿಲ್ದಾಣದಿಂದ ಆ್ಯಂಬುಲೆನ್ಸ್ನಲ್ಲಿ ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟರಲ್ಲಿ ಮಗುವಿನ ಉಸಿರಾಟ ನಿಂತಿತ್ತು.
ಗೋರಖ್ಪುರ ಮೂಲದ ದುರ್ಗೇಶ್ ಜೈಸ್ವಾಲ್ ಮತ್ತು ಅನು ಜೈಸ್ವಾಲ್ ಅವರ 7 ತಿಂಗಳ ಮಗ ದೇವ್ ಜೈಸ್ವಾಲ್ಗೆ ವಿಮಾನದಲ್ಲಿ ತೀವ್ರ ಅನಾರೋಗ್ಯ ಕಾಣಿಸಿಕೊಂಡಿತ್ತು. ಆ ಮಗುವನ್ನು ಉಳಿಸಲು ಪೈಲಟ್ ಬೆಂಗಳೂರಿನ ಬದಲು ಇಂದೋರ್ನಲ್ಲೇ ವಿಮಾನವನ್ನು ಲ್ಯಾಂಡ್ ಮಾಡಿದರು. ಆದರೂ ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ. ಆಸ್ಪತ್ರೆಗೆ ಕೊಂಡೊಯ್ಯುವ ಮೊದಲೇ ಮಗು ಸಾವನ್ನಪ್ಪಿತು.
ವಿಪರ್ಯಾಸವೆಂದರೆ, hydrocephalus ಎಂಬ ಮೆದುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿಗೆ ಚಿಕಿತ್ಸೆ ಕೊಡಿಸಲೆಂದೇ ಪೋಷಕರು ಬೆಂಗಳೂರಿಗೆ ಕರೆದುಕೊಂಡು ಬರುತ್ತಿದ್ದರು. ಆದರೆ, ಮಾರ್ಗಮಧ್ಯದಲ್ಲೇ ಮಗು ಸಾವನ್ನಪ್ಪಿತು.