ಬೆಂಗಳೂರು,ಡಿ.15: ವಿಧಾನ ಪರಿಷತ್ನಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡನೆಗೆ ಅವಕಾಶ ನೀಡದೆ ಏಕಾಏಕಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ ಬಿಜೆಪಿ ನಾಯಕರು ಆಕ್ರೋಶಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಾಗಿತ್ತು. ಅವಿಶ್ವಾಸ ಗೊತ್ತುವಳಿ ನಿರ್ಣಯ ಹಾಗೂ ಗೋಹತ್ಯೆ ನಿಷೇಧ ಮಸೂದೆ ಬಗ್ಗೆ ಚರ್ಚಿಸಲು ಇಂದು ವಿಧಾನ ಪರಿಷತ್ ಮರು ಕಲಾಪ ನಡೆಸಲಾಗಿತ್ತು. ಆದರೆ, ಇಂದಿನ ಕಲಾಪ ಅಕ್ಷರಶಃ ರಣರಂಗವಾಗಿ ಬದಲಾಗಿತ್ತು.
ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಬಿಜೆಪಿಗೆ ಜೆಡಿಎಸ್ ಕೂಡ ಬೆಂಬಲ ನೀಡಿತ್ತು. ಆದರೆ, ಕಲಾಪದ ಆರಂಭಕ್ಕೂ ಮುನ್ನ ಉಪಸಭಾಪತಿ ಧರ್ಮೇ ಗೌಡರನ್ನು ಸಭಾಪತಿ ಪೀಠದಲ್ಲಿ ಕೂರಿಸಿ, ಸಭಾಪತಿಗಳನ್ನು ಕಲಾಪದ ಒಳಗೆ ಬಾರದಂತೆ ತಡೆಯೊಡ್ಡಿ ಹೈಡ್ರಾಮಾ ಸೃಷ್ಟಿಸಿದ್ದ ಬಿಜೆಪಿಗೆ ಕಾಂಗ್ರೆಸ್ ಮತ್ತೊಮ್ಮೆ ಶಾಕ್ ನೀಡಿದೆ. ಇಂದು ಹೊಸ ಸಭಾಪತಿಯನ್ನು ಆಯ್ಕೆ ಮಾಡಿ, ಗೋಹತ್ಯೆ ನಿಷೇಧ ಕಾಯ್ದೆಯನ್ನು ಪಾಸ್ ಮಾಡಿಕೊಳ್ಳುವ ಪ್ಲಾನ್ ಮಾಡಿದ್ದ ಬಿಜೆಪಿಗೆ ಕಾಂಗ್ರೆಸ್ ಮತ್ತೊಮ್ಮೆ ನಿರಾಸೆ ಮೂಡಿಸಿದೆ. ಮತ್ತೊಮ್ಮೆ ಅನಿರ್ದಿಷ್ಟಾವಧಿಗೆ ಕಲಾಪವನ್ನು ಮುಂದೂಡಿರುವುದರಿಂದ ಬಿಜೆಪಿ ಕೈಕೈ ಹಿಸುಕಿಕೊಳ್ಳುವಂತಾಗಿದೆ.
ಇಂದು ಜೆಡಿಎಸ್ ಬೆಂಬಲದೊಂದಿಗೆ ಹೊಸ ಸಭಾಪತಿ ಆಯ್ಕೆ ಮಾಡಿ, ಗೋಹತ್ಯೆ ನಿಷೇಧ ಕಾಯ್ದೆಯನ್ನು ಪಾಸ್ ಮಾಡಿಕೊಳ್ಳಲು ಪ್ಲಾನ್ ಮಾಡಿದ್ದ ಬಿಜೆಪಿಯ ಯೋಚನೆಯನ್ನು ತಲೆಕೆಳಗು ಮಾಡಿದ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಮತ್ತೊಮ್ಮೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ.
ಇದಾದ ಬಳಿಕ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರ ಜೊತೆ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಚರ್ಚೆ ನಡೆಸಿದ್ದಾರೆ. ಇಂದಿನ ಕಲಾಪ ಆರಂಭವಾದ ಒಂದೇ ಸೆಕೆಂಡ್ಗೆ ಕಲಾಪ ಮುಕ್ತಾಯವಾಗಿದೆ. ಕಲಾಪದಲ್ಲಿ ಗಲಾಟೆ ಗದ್ದಲ ನಡೆದ ಹಿನ್ನೆಲೆಯಲ್ಲಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಇದರಿಂದ ಕಲಾಪ ಆರಂಭಕ್ಕೂ ಮುನ್ನ ಉಪ ಸಭಾಪತಿಯನ್ನು ಪೀಠದಲ್ಲಿ ಕೂರಿಸಿ ಗಲಾಟೆ ಮಾಡಿದ್ದ ಬಿಜೆಪಿ, ಜೆಡಿಎಸ್ ಸದಸ್ಯರಿಗೆ ಸಭಾಪತಿಗಳು ದೊಡ್ಡ ಶಾಕ್ ಕೊಟ್ಟಿದ್ದಾರೆ.
ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಹಿನ್ನೆಲೆಯಲ್ಲಿ ಸಭಾಪತಿ ವಿರುದ್ಧ ರಾಜ್ಯಪಾಲರಿಗೆ ದೂರು ಕೊಡಲು ಬಿಜೆಪಿ ನಿರ್ಧಾರ ಮಾಡಿದೆ. ಇತ್ತ ಬಿಜೆಪಿ ಜೆಡಿಎಸ್ ಸದಸ್ಯರ ವಿರುದ್ಧವೂ ಕಾಂಗ್ರೆಸ್ ದೂರು ಕೊಡಲು ನಿರ್ಧಾರ ಮಾಡಿದೆ. ಕಲಾಪ ಆರಂಭಕ್ಕೂ ಮುನ್ನ ಉಪಸಭಾಪತಿಯನ್ನು ಪೀಠದಲ್ಲಿ ಕೂರಿಸಿದ್ದು ಕಾನೂನು ಬಾಹಿರ ಎಂದು ದೂರು ಕೊಡಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಇಂದು ಎರಡು ಪಕ್ಷಗಳಿಂದ ರಾಜ್ಯಪಾಲರಿಗೆ ದೂರು ಕೊಡಲು ಸಿದ್ದತೆ ನಡೆಸಿವೆ. ಇಂದು ಮಧ್ಯಾಹ್ನ ರಾಜ್ಯಪಾಲರನ್ನು ಭೇಟಿಯಾಗಿ ದೂರು ಕೊಡಲು ಬಿಜೆಪಿ ನಿರ್ಧರಿಸಿದೆ.
ವಿಧಾನ ಪರಿಷತ್ ಸಭಾಂಗಣದಲ್ಲೇ ಕೈ -ಕೈ ಮಿಲಾಯಿಸಿದ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಕಲಾಪದಲ್ಲಿ ಹೈಡ್ರಾಮಾ ಸೃಷ್ಟಿಸಿದರು. ಇಂದು ವಿಧಾನ ಪರಿಷತ್ ಕಲಾಪ ಆರಂಭಕ್ಕೂ ಮುನ್ನ ಉಪ ಸಭಾಪತಿಗಳು ಪೀಠದಲ್ಲಿ ಕುಳಿತಿರುವುದಕ್ಕೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು. ಉಪ ಸಭಾಪತಿ ಧರ್ಮೇಗೌಡರಿಗೆ ಕಾಂಗ್ರೆಸ್ ಸದಸ್ಯರು ಮುತ್ತಿಗೆ ಹಾಕಲು ಹೋಗುತ್ತಿದ್ದಂತೆ ಅವರ ಸುತ್ತ ಆವರಿಸಿದ ಬಿಜೆಪಿ ಸದಸ್ಯರು ಗಲಾಟೆ ಮಾಡಿದರು. ಇದರಿಂದ ಕಲಾಪದಲ್ಲಿ ಹೈಡ್ರಾಮ ನಡೆಯಿತು. ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಯವರನ್ನು ಒಳಗೆ ಬರಲು ಬಿಡದ ಬಿಜೆಪಿ ಸದಸ್ಯರು ಬಾಗಿಲು ಬಳಿ ಅಡ್ಡಲಾಗಿ ನಿಂತು ವಿರೋಧಿಸಿದರು. ಇದೇ ವೇಳೆ ಸಭಾಪತಿಗೆ ಪೀಠ ಬಿಡದೆ ಕುಳಿತಿದ್ದ ಉಪ ಸಭಾಪತಿಯನ್ನು ಕಾಂಗ್ರೆಸ್ ಸದಸ್ಯರು ಕೆಳಗೆ ಎಳೆದು ತಂದರು. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಗಲಾಟೆ ಗದ್ದಲ ನಡೆಯಿತು.
ಸಭಾಪತಿಗಳ ಪೀಠ ಕಾಯುತ್ತಾ ನಿಂತ ಕಾಂಗ್ರೆಸ್ ಸದಸ್ಯರು ಸಭಾಪತಿ ಪೀಠದಲ್ಲಿದ್ದ ಗ್ಲಾಸ್ ಬಿಸಾಡಿ ಗಲಾಟೆಯೆಬ್ಬಿಸಿದರು. ಆ ಗಲಾಟೆ ನಿಯಂತ್ರಿಸಲು ಮಾರ್ಷಲ್ಗಳು ಹರಸಾಹಸ ಪಟ್ಟರು. ಕಾಂಗ್ರೆಸ್ ಸದಸ್ಯರೊಬ್ಬರನ್ನು ಪೀಠದ ಮೇಲೆ ಕೂರಿಸಿ, ಅವರನ್ನು ಸುತ್ತುವರೆದು ಬೇರೆ ಯಾರಿಗೂ ಅವಕಾಶ ಕೊಡದೆ ಕಾಂಗ್ರೆಸ್ ಸದಸ್ಯರು ಗಲಾಟೆ ಮಾಡಿದರು. ಕಾಂಗ್ರೆಸ್ ಸದಸ್ಯರೇ ಹೊರಗೆ ತೆರಳಿ ಸಭಾಪತಿಗಳನ್ನು ಒಳಗೆ ಕರೆದುಕೊಂಡು ಬಂದರು. ಕಾಂಗ್ರೆಸ್ ಸದಸ್ಯರ ರಕ್ಷಣೆಯಲ್ಲಿ ಕಲಾಪದ ಒಳಗೆ ತೆರಳಿದ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಇದರಿಂದ ಮತ್ತೊಮ್ಮೆ ಬಿಜೆಪಿಗೆ ಭಾರೀ ನಿರಾಸೆಯಾದಂತಾಗಿದೆ