ಬೆಂಗಳೂರು,ಸೆ. 23: ರಾಜ್ಯ ಸರ್ಕಾರದ ಕೃಷಿ ವಿರೋಧಿ ನೀತಿ ಹಾಗೂ ಕಾಯ್ದೆಗಳನ್ನ ವಿರೋಧಿಸಿ ವಿವಿಧ ರೈತ ಸಂಘಟನೆಗಳು ಸೆ. 28ರಂದು ಕರ್ನಾಟಕ ಬಂದ್ಗೆ ಕರೆ ನೀಡಿವೆ. ಸದ್ಯ ಒಂದು ಸಂಘಟನೆಗಳು ಈ ಬಂದ್ಗೆ ಬೆಂಬಲ ಸೂಚಿಸಿವೆ. ಅಖಿಲ ಭಾರತ ರೈತ ಸಂಘರ್ಷ ಸಮಿತಿ ಈ ಬಂದ್ಗೆ ನಿರ್ಧಾರ ಮಾಡಿದೆ ಎಂದು ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ಧಾರೆ. ಸೆ. 25ರಂದು ಕರೆ ನೀಡಲಾಗಿರುವ ಭಾರತ್ ಬಂದ್ ಜೊತೆಗೆ ಕರ್ನಾಟಕಲ್ಲೂ ಬಂದ್ ಆಚರಿಸಲು ಈ ಮೊದಲು ರೈತ ಸಂಘಟನೆಗಳು ಯೋಜಿಸಿದ್ದವು. ಆದರೆ, 25ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಮಾಡಬೇಕೆಂದು ತೀರ್ಮಾನಿಸಲಾಗಿದೆ ಎಂದು ನಾಗೇಂದ್ರ ಅವರು ಸ್ಪಷ್ಟಪಡಿಸಿದ್ದಾರೆ.
ಆದರೆ, ಹಸಿರು ಸೇನೆ, ಕಬ್ಬು ಬೆಳೆಗಾರರ ಸಂಘ ಮೊದಲಾದ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿ ಬಂದ್ ನಿರ್ಧಾರ ತೆಗೆದುಕೊಂಡಂತಿಲ್ಲ. ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ಸೆ. 28ರಂದು ಕರ್ನಾಟಕ ಬಂದ್ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸೆ. 25ರಂದು ಭಾರತ್ ಬಂದ್ಗೆ ಬೆಂಬಲ ನೀಡುತ್ತೇವೆ. ರೈತ ಸಂಘದಿಂದ ಆ ದಿನ ರಸ್ತೆ ತಡೆ, ಜೈ ಭರೋ ಕಾರ್ಯ ಮಾಡುತ್ತೇವೆ. ಐಕ್ಯ ಸಮಿತಿ ಹೋರಾಟದ ಕೆಲ ಸದಸ್ಯರು ಸೆ. 28ರಂದು ಬಂದ್ ಮಾಡಲು ಅಭಿಪ್ರಾಯ ನೀಡಿದ್ದಾರೆ. ಆ ಬಗ್ಗೆ ಇನ್ನೂ ಚರ್ಚೆ ಆಗಬೇಕು ಎಂದು ಕುರುಬೂರು ಶಾಂತಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈ ವಿಚಾರವನ್ನು ಪ್ರಸ್ತಾಪಿಸಿದಾಗ, ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು, ಬಂದ್ ಬಗ್ಗೆ ಕುರುಬೂರು ಶಾಂತಕುಮಾರ್ ಅವರಿಗೆ ಮಾಹಿತಿ ಇಲ್ಲ. ಅವರನ್ನ ಒಪ್ಪಿಸುತ್ತೇವೆ ಎಂದಿದ್ದಾರೆ.
ಇದೇ ವೇಳೆ, ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ತಮ್ಮ ಬಣದೊಂದಿಗೆ ಪ್ರತಿಭಟನೆ ನಡೆಸಿದ್ದ ಕೋಡಿಹಳ್ಳಿ ಚಂದ್ರಶೇಖರ್ ಅವರು ಸೆ. 28ರ ಕರ್ನಾಟಕ ಬಂದ್ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ ಎಂದು ಹೇಳಿದ್ದಾರೆ. ಆದರೆ, ಸೆ. 25ರಂದು ಕರ್ನಾಟಕ ಬಂದ್ ಇರುವುದಿಲ್ಲ. ಕೇವಲ ಹೆದ್ದಾರಿ ಬಂದ್ ಮಾತ್ರ ಮಾಡಲಾಗುತ್ತದೆ. ಆದರೆ, ಸೆ. 28ರ ಕರ್ನಾಟಕ ಬಂದ್ ಬಗ್ಗೆ ನಾಳೆ ಸ್ಪಷ್ಟನೆ ನೀಡುತ್ತೇನೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ರೈತ ಸಂಘಟನೆಗಳೊಗೆ ಒಡಕು ಇರುವುದು ಸ್ಪಷ್ಟವಾಗಿದ್ದರೂ ಮೂಲಗಳ ಪ್ರಕಾರ ಸೆ. 28ರಂದು ಕರ್ನಾಟಕ ಬಂದ್ಗೆ ಬಹುತೇಕ ಎಲ್ಲಾ ರೈತ, ಕಾರ್ಮಿಕ ಮತ್ತು ದಲಿತ ಸಂಘಟನೆಗಳು ಬೆಂಬಲ ನೀಡುವ ಸಾಧ್ಯತೆ ಇದೆ. ನಾಳೆ ಈ ಬಗ್ಗೆ ಅಂತಿಮ ಚಿತ್ರಣ ಸಿಗುವ ನಿರೀಕ್ಷೆ ಇದೆ.ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿರುವುದು ರಾಜ್ಯದ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕಾಯ್ದೆಗಳು ರೈತ ವಿರೋಧಿಯಾಗಿದ್ದು, ರೈತರ ಬೆನ್ನೆಲುಬು ಮುರಿಯುತ್ತವೆ ಎಂದು ವಿವಿಧ ರೈತ ಸಂಘಟನೆಗಳ ಮುಖಂಡರು ಪ್ರತಿಭಟಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದಲೂ ಪ್ರತಿಭಟನೆ ನಡೆಯುತ್ತಿದೆ. ಮೊನ್ನೆ ಯೋಗೇಂದ್ರ ಯಾದವ್ ಮೊದಲಾದ ರಾಷ್ಟ್ರಮಟ್ಟದ ಮುಖಂಡರು ಪ್ರತಿಭಟನಾ ಸ್ಥಳಕ್ಕೆ ಬಂದು ಭಾಷಣ ಮಾಡಿ ಹೋಗಿದ್ದರು.