‘ಹರ್ಡ್ ಇಮ್ಯುನಿಟಿ ಹೆಚ್ಚಾಗುವವರೆಗೂ ಕೊರೊನಾ ವೈರಸ್ ಸೋಂಕು ವರ್ಷ ಪೂರ್ತಿ ಹರಡುತ್ತಿರುತ್ತದೆ. ಹಾಗಾಗಿ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಎಲ್ಲ ರೀತಿಯ ವೈಯಕ್ತಿಕ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದನ್ನು ತಪ್ಪಿಸಬೇಕು ಹಾಗೂ ಶುಚಿತ್ವ ಕಾಪಾಡಿಕೊಳ್ಳುವಂತಹ ಕ್ರಮಗಳನ್ನು ಪಾಲಿಸುವ ಮೂಲಕ ಕೊರೊನಾ ಸೋಂಕಿನೊಂದಿಗೆ ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು
ವಾಷಿಂಗ್ಟನ್: ಕೆಮ್ಮು, ನೆಗಡಿ, ಜ್ವರದಂತೆಯೇ ಕೊರೋನಾ ಸೋಂಕು ಕೂಡ ಸೀಸನಲ್ ಆರೋಗ್ಯ ಸಮಸ್ಯೆಯಾಗಲಿದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಕೊರೋನಾ ವೈರಸ್ ಕುರಿತಂತೆ ಸತತ ಸಂಶೋಧನೆ ನಡೆಸುತ್ತಿರುವ ಲೆಬನಾನ್‌ನ ಬೈರೂತ್ ಅಮೆರಿಕನ್ ವಿಶ್ವವಿದ್ಯಾಲಯ ಈ ಬಗ್ಗೆ ಕೆಲ ಮಹತ್ವದ ಸಂಗತಿಗಳನ್ನು ಹೊರಹಾಕಿದೆ. ಈ ಹೊಸ ಅಧ್ಯಯನದ ಮೂಲಕ ಕೊರೋನಾಸೋಂಕು ಕೆಮ್ಮು, ನೆಗಡಿ, ಜ್ವರದಂತೆಯೇ ಸೀಸನಲ್ ಆರೋಗ್ಯ ಸಮಸ್ಯೆಯಾಗಲಿದೆ ಎಂದು ಹೇಳಿದ್ದಾರೆ.
ಜರ್ನಲ್ ಫ್ರಂಟಿಯರ್ಸ್ ಇನ್ ಪಬ್ಲಿಕ್ ಹೆಲ್ತ್ ಎಂಬ ಪತ್ರಿಕೆಯಲ್ಲಿ ಈ ಹೊಸ ಅಧ್ಯಯನ ಪ್ರಬಂಧ ಪ್ರಕಟವಾಗಿದ್ದು, ‘ಸಮುದಾಯದಲ್ಲಿ ರೋಗನಿರೋಧಕ ಶಕ್ತಿ (ಹರ್ಡ್ ಇಮ್ಯುನಿಟಿ) ಹೆಚ್ಚಾದರೆ, ಸಮಶೀತೋಷ್ಣ ಹೊಂದಿರುವ ರಾಷ್ಟ್ರಗಳಲ್ಲಿ ಕೊರೊನಾ ವೈರಸ್, ಋತುಮಾನಕ್ಕೆ ತಕ್ಕಂತೆ ಕಾಣಿಸಿಕೊಳ್ಳುವ (ಸೀಸನಲ್ ವೈರಸ್) ವೈರಸ್‌ಗಳಾಗಬಹುದು. ಅಲ್ಲಿವರೆಗೂ ಎಲ್ಲ ಕಾಲದಲ್ಲೂ ಕೊರೊನಾ ವೈರಸ್ ಸೋಂಕು ಹರಡುತ್ತಲೇ ಇರುತ್ತದೆ. ಸಮುದಾಯದಲ್ಲಿರುವ ಬಹುಪಾಲು ಜನರಲ್ಲಿ ಕೊರೊನಾ ವೈರಸ್ ಎದುರಿಸುವಂತಹ ರೋಗನಿರೋಧಕ ಶಕ್ತಿ ಉತ್ಪತ್ತಿಯಾದರೆ, ಸೋಂಕು ಹರಡುವ ಪ್ರಮಾಣವೂ ಗಣನೀಯವಾಗಿ ಕ್ಷೀಣಿಸಬಹುದು. ಈ ಮೂಲಕ ಕೊರೊನಾ ವೈರಸ್ ವಾತಾವರಣದ ಏರಿಳಿತಗಳಿಗೆ ಅನುಗುಣವಾಗಿ ಸೀಸನಲ್ ವೈರಸ್ ಆಗಿ ಉಳಿದುಕೊಳ್ಳಬಹುದು ಎಂದು ಅಧ್ಯಯನದಲ್ಲಿ ಶಂಕಿಸಲಾಗಿದೆ.
ಆದಾಗ್ಯೂ, ಫ್ಲೂ (ಜ್ವರ)ನಂತಹ ಇತರೆ ಉಸಿರಾಟದ ವೈರಸ್‌ಗಳಿಗೆ ಹೋಲಿಸಿದರೆ, ವಿಜ್ಞಾನಿಗಳು ಕೋವಿಡ್-19 ಹೆಚ್ಚಿನ ಪ್ರಮಾಣದ ಪ್ರಸರಣ ಸಾಮರ್ಥ್ಯವನ್ನು ಹೊಂದಿದೆ ಎಂದೂ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಮುನ್ನೆಚ್ಚರಿಕೆ, ಮುಂಜಾಗ್ರತೆ ಅತ್ಯಗತ್ಯ
ಲೆಬನಾನ್ ಬೈರೂತ್ ಅಮೆರಿಕನ್ ವಿಶ್ವವಿದ್ಯಾಲಯದ ಹಿರಿಯ ಲೇಖಕ ಹಸನ್ ಝರಕೆತ್ ಇದೇ ವಿಚಾರವಾಗಿ ಮಾತನಾಡಿದ್ದು, ‘ಸಮುದಾಯದಲ್ಲಿ ‘ಹರ್ಡ್ ಇಮ್ಯುನಿಟಿ ಹೆಚ್ಚಾಗುವವರೆಗೂ ಕೊರೊನಾ ವೈರಸ್ ಸೋಂಕು ವರ್ಷ ಪೂರ್ತಿ ಹರಡುತ್ತಿರುತ್ತದೆ. ಹಾಗಾಗಿ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಎಲ್ಲ ರೀತಿಯ ವೈಯಕ್ತಿಕ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದನ್ನು ತಪ್ಪಿಸಬೇಕು ಹಾಗೂ ಶುಚಿತ್ವ ಕಾಪಾಡಿಕೊಳ್ಳುವಂತಹ ಕ್ರಮಗಳನ್ನು ಪಾಲಿಸುವ ಮೂಲಕ ಕೊರೊನಾ ಸೋಂಕಿನೊಂದಿಗೆ ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.