ಮಂಗಳೂರು: ಭಾನುವಾರ ನಗರದ ವೆನ್ಲಾಕ್ ಕೋವಿಡ್ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ವ್ಯಕ್ತಿಯನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪುತ್ತೂರು ದರ್ಬೆ ನಿವಾಸಿ ದೇವರಾಜ್ ಎಂಬ ವ್ಯಕ್ತಿ ಸ್ವಇಚ್ಛೆಯಿಂದ ಜುಲೈ 1ರಂದು ಕೋವಿಡ್ 19 ರೋಗ ಲಕ್ಷಣಗಳು ಇದೆ ಎಂಬ ಕಾರಣ ಆಸ್ಪತ್ರೆಗೆ ಬಂದ ವ್ಯಕ್ತಿಯನ್ನು ವಾರ್ಡ್ ಒಂದರಲ್ಲಿ ದಾಖಲಿಸಿಕೊಂಡ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಭಾನುವಾರ ಈತನಿಗೆ ಕೋವಿಡ್ 19 ದೃಢ ಪಟ್ಟಿದೆ. ನಂತರ ಸುಮಾರು 4 ಗಂಟೆಯ ಸಮಯ ವೆನ್ ಲಾಕ್ ಆಸ್ಪತ್ರೆಯ ಕೋವಿಡ್ ಬ್ಲಾಕ್ ನಿಂದ ತಪ್ಪಿಸಿಕೊಂಡು ಹೋಗಿದ್ದ ಈತನ ಮೇಲೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಹುಡುಕಾಟ ನಡೆಸಲಾಗಿತ್ತು.
ಈ ಬಗ್ಗೆ ಟ್ವೀಟ್ ಮಾಡಿರುವ ಪೊಲೀಸ್ ಕಮಿಷನರ್ ವಿಕಾಶ್ ಕುಮಾರ್ ಅವರು, ಕಾನ್ ಸ್ಟೇಬಲ್ ಗಳಾದ ಶಂಕರಪ್ಪ ಲಮಾಣಿ ಹಾಗೂ ಶಂಕರಪ್ಪ ನಂದಿಯಾಳ್ ಅವರು ಪರಾರಿಯಾಗಿದ್ದ ಕೊರೊನಾ ಸೋಂಕಿತನನ್ನು ಪತ್ತೆಹಚ್ಚುವ ಮೂಲಕ ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಮೂಲಕ ಕೊರೊನಾ ಸೋಂಕಿತ ಮತ್ತಷ್ಟು ಜನರಿಗೆ ಸೋಂಕು ಹರಡುವುದನ್ನು ತಪ್ಪಿಸಿದಂತಾಗಿದೆ ಎಂದು ಶ್ಲಾಘಿಸಿದ್ದಾರೆ.