janadhvani

Kannada Online News Paper

ಇಂದಿನಿಂದ ವೇಳಾಪಟ್ಟಿ ಅನುಸಾರ ರೈಲು ಸಂಚಾರ ಆರಂಭ

ನವದೆಹಲಿ: ದೀರ್ಘಕಾಲದ ಲಾಕ್‌ಡೌನ್‌ ನಂತರ, ಜೂನ್‌ 1ರಿಂದ ವೇಳಾಪಟ್ಟಿ ಅನುಸಾರ 200 ರೈಲುಗಳು ಸಂಚರಿಸಲಿವೆ. ಮೊದಲ ದಿನವೇ 1.45 ಲಕ್ಷ ಮಂದಿ ಪ್ರಯಾಣ ಬೆಳೆಸಲಿದ್ದಾರೆ.ಮೊದಲ ದಿನವೇ ಸರಿಸುಮಾರು 1.45 ಲಕ್ಷ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಿದ್ದಾರೆ ಎಂದು ರೈಲ್ವೆ ಹೇಳಿತ್ತು. ಜೂನ್ 1ರಿಂದ 30ರವರೆಗೆ 26 ಲಕ್ಷಕ್ಕಿಂತಲೂ ಹೆಚ್ಚು ಮುಂಗಡ ಟಿಕೆಟ್ ಕಾಯ್ದಿರಿಸಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ಈ ಎಲ್ಲ ಪ್ರಯಾಣಿಕರು ರೈಲು ಹೊರಡುವ 90 ನಿಮಿಷಕ್ಕೂ ಮೊದಲೇ ನಿಲ್ದಾಣದಲ್ಲಿ ಇರಬೇಕು. ಅಂತರ ಕಾಯ್ದುಕೊಳ್ಳುವುದು, ಆರೋಗ್ಯ ತಪಾಸಣೆ, ಮಾಸ್ಕ್‌ ಧರಿಸುವುದು ಹಾಗೂ ಆರೋಗ್ಯ ಸೇತು ಆ್ಯಪ್‌ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಪ್ರಯಾಣಿಕರು ಮನೆಯಿಂದಲೇ ಆಹಾರ ಮತ್ತು ನೀರು ತರಬೇಕು ಎಂದು ಭಾರತೀಯ ರೈಲ್ವೆ ಇಲಾಖೆ ಸೂಚನೆ ನೀಡಿದೆ.

ಮೊದಲ ರೈಲು ಮಹಾನಗರಿ ಎಕ್ಸ್‌ಪ್ರೆಸ್ ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ‌ನಿಂದ ಉತ್ತರ ಪ್ರದೇಶದ ವಾರಣಾಸಿಗೆ ಪ್ರಯಾಣ ಬೆಳೆಸಿದೆ.ಮೊದಲ ರೈಲು 01092 ಸಿಎಸ್‌ಎಂಟಿ ಮುಂಬೈ- ವಾರಣಾಸಿ ವಿಶೇಷ ರೈಲು 2020 ಜೂನ್ 1ರಂದು 00.10ಕ್ಕೆ ಹೊರಟಿದೆ ಎಂದು ಸೆಂಟ್ರಲ್ ರೈಲ್ವೆ ಟ್ವೀಟಿಸಿದೆ.

ಮೇ 12ರಂದು ಆರಂಭವಾದ 15 ಜೋಡಿ ವಿಶೇಷ ರಾಜಧಾನಿ ಎಕ್ಸ್‌ಪ್ರೆಸ್ ಮತ್ತು ಮೇ.1ರಂದು ಸಂಚಾರ ಆರಂಭಿಸಿ ವಲಸೆ ಕಾರ್ಮಿಕರನ್ನು ಕರೆದೊಯ್ಯುವ ಶ್ರಮಿಕ್ ಎಕ್ಸ್‌ಪ್ರೆಸ್ ಹೊರತಾಗಿ ಈ ಪ್ರಯಾಣಿಕರ ರೈಲು ಸಂಚರಿಸಲಿದೆ.

ರೈಲ್ವೆ ಸಚಿವಾಲಯ ಮತ್ತು ಮಹಾರಾಷ್ಟ್ರ ಸರ್ಕಾರ ಪರಸ್ಪರ ಮಾತುಕತೆ ನಡೆಸಿದ್ದು, ಮಹಾರಾಷ್ಟ್ರದಿಂದ ಬರುವ ಮತ್ತು ಹೋಗುವ ವಿಶೇಷ ರೈಲುಗಳು ನಿಗದಿತ ವೇಳಾಪಟ್ಟಿಯಲ್ಲೇ ಸಂಚರಿಸಲಿದೆ ಎಂದು ರೈಲ್ವೆ ಹೇಳಿದೆ. ಹೆಚ್ಚುವರಿ ನಿಲುಗಡೆ ನೀಡಬೇಕು ಎಂದು ಮಹಾರಾಷ್ಟ್ರ ಸರ್ಕಾರ ಒತ್ತಾಯಿಸಿತ್ತು.

ರೈಲಿನಲ್ಲಿ ಜನಜಂಗುಳಿ ಇರದಂತೆ ಮಾಡಲು ಕಾಯ್ದಿರಿಸಿದ ಸೀಟು ಹೊರತು ಪಡಿಸಿ ಅನ್ಯ ಪ್ರಯಾಣಿಕರು ಪ್ರಯಾಣಿಸುವಂತಿಲ್ಲ. ಜನರಲ್ ಬೋಗಿಗಳಲ್ಲಿಯೂ ಟಿಕೆಟ್ ಕಾಯ್ದಿರಿಸಬೇಕು. 200 ವಿಶೇಷ ರೈಲುಗಳಲ್ಲಿ ಪ್ರಯಾಣಿಸುವವರು ಆರ್‌ಎಸಿ/ಟಿಕೆಟ್ ದೃಢಪಡಿಸಿಕೊಂಡವರಾಗಿದ್ದಾರೆ. ಈ ರೀತಿ ಟಿಕೆಟ್ ಹೊಂದಿರುವವರಿಗೆ ಮಾತ್ರ ರೈಲು ನಿಲ್ದಾಣಕ್ಕೆ ಪ್ರವೇಶ ನೀಡಲಾಗುವುದು.

ರೈಲು ನಿಲ್ದಾಣದಲ್ಲಿಯೂ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದ್ದು, ರೈಲಿನಲ್ಲಿ ಪ್ರಯಾಣಿಕರಿಗೆ ಆಹಾರ ಮತ್ತು ನೀರು ಸಿಗಲಿದೆ. ಇದಕ್ಕೆ ಹಣ ಪಾವತಿ ಮಾಡಬೇಕು. ಅದೇ ವೇಳೆ ಪ್ರಯಾಣಿಕರು ಆಹಾರ ವಸ್ತುಗಳನ್ನು ಮನೆಯಿಂದಲೇ ತರುವಂತೆ ರೈಲ್ವೆ ಇಲಾಖೆ ಹೇಳಿದೆ.

ದೇಶದಾದ್ಯಂತವಿರುವ ಪ್ರಮುಖ ನಗರಗಳನ್ನು ಈ ರೈಲು ಸಂಪರ್ಕಿಸುತ್ತಿರುವುದರಿಂದ ಪ್ರಯಾಣಿಕರು ತಮ್ಮ ಗಮ್ಯ ಸ್ಥಳವಿರುವ ರಾಜ್ಯಗಳ ಕ್ವಾರಂಟೈನ್ ನಿರ್ದೇಶನಗಳಿಗೆ ಬದ್ಧರಾಗಿರಬೇಕು ಎಂದು ರೈಲ್ವೆ ಹೇಳಿದೆ.

ಪ್ರಯಾಣಿಕರು ಗಮನಿಸಬೇಕಾದ ಸಂಗತಿಗಳು

  • ಪ್ಲಾಟ್‌ಫಾರಂ ಟಿಕೆಟ್‌ಗಳು ಇರುವುದಿಲ್ಲ
  • ಪ್ರಯಾಣಿಕರು ಮಾಸ್ಕ್ ಧರಿಸಬೇಕು, ರೈಲು ನಿಲ್ದಾಣದಲ್ಲಿ ಅಂತರ ಕಾಯ್ದುಕೊಳ್ಳಬೇಕು.
  • ಆರೋಗ್ಯ ಸೇತು ಆ್ಯಪ್ ಡೌನ್‍ಲೋಡ್ ಮಾಡಿಕೊಂಡಿರಬೇಕು
  • ರೋಗ ಲಕ್ಷಣಗಳು ಇಲ್ಲದೇ ಇರುವವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ
  • ಹವಾನಿಯಂತ್ರಿತ ಬೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಹೊದಿಕೆ, ಬೆಡ್‌ಶೀಟ್ ನೀಡುವುದಿಲ್ಲ. ಪ್ರಯಾಣಿಕರು ಇವುಗಳನ್ನು ಮನೆಯಿಂದಲೇ ತರಬೇಕು.
  • ಹವಾನಿಯಂತ್ರಿತ ಬೋಗಿಗಳಲ್ಲಿ ಉಷ್ಣತೆ ಏರಿಸಲಾಗುವುದು.
  • ರೈಲುಗಳಲ್ಲಿ ನಿಯಮಿತವಾಗಿ ಆಹಾರ ಮತ್ತು ನೀರು ಸಿಗಲಿದ್ದು, ಪ್ರಯಾಣಿಕರು ಇದಕ್ಕೆ ಹಣ ಪಾವತಿ ಮಾಡಬೇಕು.
  • ರೈಲು ನಿಲ್ದಾಣಗಳಲ್ಲಿ ಸ್ಥಿರವಾಗಿದ್ದ ಅಂಗಡಿಗಳನ್ನು ತೆರೆಯಲು ಅವಕಾಶ.

error: Content is protected !! Not allowed copy content from janadhvani.com