ಬೆಂಗಳೂರು,ಮೇ 30: ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ಈ ಭಾನುವಾರ (ದಿನಾಂಕ 31–05–2020) ಸಂಪೂರ್ಣ ಲಾಕ್‌ಡೌನ್ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಕೊರೋನಾ ವೈರಸ್ ಹಿನ್ನೆಲೆಯಲ್ಲಿ ನಾಲ್ಕನೇ ಹಂತದ ಲಾಕ್ಡೌನ್ನಲ್ಲಿ ಸಾಕಷ್ಟು ಸಡಿಲಿಕೆ ಮಾಡಲಾಗಿತ್ತು. ಅದರಂತೆ ಭಾನುವಾರದಂದು ಮಾತ್ರ ಲಾಕ್‌ಡೌನ್ ನಿಯಮವನ್ನು ಹೆಚ್ಚು ಗಂಭೀರವಾಗಿ ಪಾಲಿಸಲು ನಿರ್ಧರಿಸಲಾಗಿತ್ತು. ಆದರೆ, ರಜಾ ದಿನದಂದು ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದು ಸರ್ಕಾರ ಅದನ್ನೂ ಸಡಿಲಿಸಿದೆ. ಭಾನುವಾರ ಸಂಪೂರ್ಣ ಲಾಕ್‌ಡೌನ್ ಇರುವುದಿಲ್ಲ ಎಂದು ಮುಖ್ಯಮಂತ್ರಿಗಳ ಕಚೇರಿಯಿಂದ ಪ್ರಕಟಣೆ ಬಂದಿದೆ.
ಎಲ್ಲಾ ವಾರ ದಿನಗಳಂತೆ ಭಾನುವಾರವೂ ದೈನಂದಿನ ಚಟುವಟಿಕೆಗಳು ಇರಲಿವೆ. ರಾಜ್ಯದ ಜನತೆಯ ಹಿತದೃಷ್ಟಿಯಿಂದ ಭಾನುವಾರ ಲಾಕ್‌ಡೌನ್ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಸಾರ್ವಜನಿಕರ ಒತ್ತಾಯದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿರುವುದು ತಿಳಿದುಬಂದಿದೆ. ವಿಪಕ್ಷಗಳೂ ಕೂಡ ಭಾನುವಾರದ ಲಾಕ್‌ಡೌನ್ ಕ್ರಮವನ್ನು ತೀವ್ರವಾಗಿ ಟೀಕೆ ಮಾಡಿದ್ದವು. ವಾರಕ್ಕೆ ಒಂದು ದಿನ ಲಾಕ್‌ಡೌನ್ ಮಾಡುವುದು ಅಸಂಬದ್ಧ ಎಂದು ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರು ಯಡಿಯೂರಪ್ಪ ಸರ್ಕಾರದ ಸಂಡೇ ಲಾಕ್‌ಡೌನ್ ಕ್ರಮದ ಔಚಿತ್ಯವನ್ನು ಪ್ರಶ್ನೆ ಮಾಡಿದ್ದರು.
ಕಳೆದ ಭಾನುವಾರ ಕರಾವಳಿ ಭಾಗದಲ್ಲಿ ಮುಸ್ಲಿಮರ ಪವಿತ್ರ ರಮ್ ಝಾನ್ ಹಬ್ಬವಾದ ಈದುಲ್ ಫಿತರ್ ಆಚರಣೆ ಇದ್ದು, ಕರ್ಫ್ಯೂ ಸಡಿಲಿಸುವಂತೆ ಮುಸ್ಲಿಮ್ ಮುಖಂಡರು ಬೇಡಿಕೆ ಇಟ್ಟಿದ್ದರು.ಆದರೆ ಅದಕ್ಕೆ ಕಿವಿಗೊಡದ ಸರ್ಕಾರ, ನಾಳೆ (ಭಾನುವಾರ) ಸಂಪೂರ್ಣ ಲಾಕ್‌ಡೌನ್ ಇರುವುದಿಲ್ಲ ಎಂಬ ನಿರ್ಧಾರ ಕೈಗೊಂಡಿದೆ. ಹಾಗಾದರೆ ಕಳೆದ ಭಾರಿಯ ಸಂಪೂರ್ಣ ಲಾಕ್‌ಡೌನ್ ಕೇವಲ ಈದ್ ಪ್ರಯುಕ್ತ ಮಾತ್ರವಾಗಿತ್ತೇ? ಎಂದು ಜನ ಸಾಮಾನ್ಯರು ಸಂದೇಹ ವ್ಯಕ್ತಪಡಿಸಿದ್ದಾರೆ.