janadhvani

Kannada Online News Paper

ದೆಹಲಿಯಿಂದ ಬಂದ ಸಚಿವರಿಗೆ ಕ್ವಾರಂಟೈನ್ ಯಾಕಿಲ್ಲ?-ಭಾರೀ ಚರ್ಚೆ

ಬೆಂಗಳೂರು:ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಅವರು ಹೊಸದಿಲ್ಲಿಯಿಂದ ಸೋಮವಾರ ಬೆಳಗ್ಗೆ ವಿಮಾನದಲ್ಲಿಆಗಮಿಸಿದ ಬಳಿಕ ಯಾವುದೇ ರೀತಿಯ ಕ್ವಾರಂಟೈನ್‌ಗೆ ಒಳಗಾಗದೆ ಕಚೇರಿಗೆ ತೆರಳಿ, ಸಭೆ ನಡೆಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಯಿತು. ಬಳಿಕ ಆರೋಗ್ಯ ಇಲಾಖೆ ಇದಕ್ಕೆ ಸ್ಪಷ್ಟನೆ ನೀಡಿ, ಸಚಿವರು ಕ್ವಾರಂಟೈನ್‌ಗೆ ಒಳಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿತು.

ಸರಕಾರದ ನಿಯಮಾವಳಿ ಪ್ರಕಾರ, ವಿಮಾನದಲ್ಲಿ ಪ್ರಯಾಣಿಸಿದರು ಒಂದು ವಾರ ಕಾಲ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಬೇಕು, ಬಳಿಕ ಒಂದು ವಾರ ಹೋಮ್‌ ಕ್ವಾರಂಟೈನ್‌ನಲ್ಲಿರಬೇಕು. ಆದರೆ, ಸದಾನಂದ ಗೌಡ ಅವರು ವಿಮಾನ ನಿಲ್ದಾಣದಿಂದ ನೇರವಾಗಿ ಕಾರು ಹತ್ತಿ ಕಚೇರಿಗೆ ತೆರಳಿದರು.

ಕಾಂಗ್ರೆಸ್‌ ಆಕ್ಷೇಪ: ಹೊರ ರಾಜ್ಯಗಳಿಂದ ಆಗಮಿಸುವ ಪ್ರತಿಯೊಬ್ಬರಿಗೂ ಇರುವ ಮಾರ್ಗಸೂಚಿಯಿಂದ ಸದಾನಂದ ಗೌಡರಿಗೆ ವಿನಾಯಿತಿ ಏಕೆ ಕಾಂಗ್ರೆಸ್‌ ಪ್ರಶ್ನಿಸಿದೆ. ಕೋವಿಡ್‌ ನಿಯಮಾವಳಿಯಲ್ಲಿಯಾರೊಬ್ಬರಿಗೂ ವಿನಾಯಿತಿ ಇಲ್ಲ. ಹೀಗಾಗಿ ಕೇಂದ್ರ ಸಚಿವರ ವಿರುದ್ಧ ಏಕೆ ಕ್ರಮ ಇಲ್ಲಎಂದು ಕೆಪಿಸಿಸಿ ಟ್ವೀಟರ್‌ನಲ್ಲಿ ಪ್ರಶ್ನಿಸಿದೆ.

ನನಗೆ ವಿನಾಯಿತಿಯಿದೆ:ಸದಾನಂದ ಗೌಡ, ಸಚಿವರು
ನಾನು ರಸಗೊಬ್ಬರ ಸಚಿವ. ಔಷಧಿ, ಗೊಬ್ಬರ ಸೇರಿದಂತೆ ಹಲವು ಮಹತ್ವದ ಕೆಲಸ ಇರುತ್ತವೆ. ಹೀಗಾಗಿ, ಸಭೆ, ಕಚೇರಿಗೆ ಹೋಗುವುದು ಅನಿವಾರ್ಯ. ನಾನು ಕ್ವಾರಂಟೈನ್‌ನಿಂದ ವಿನಾಯಿತಿ ಪಡೆಯಲು ಅವಕಾಶವಿದೆ.

ಸಚಿವರು, ಅಧಿಕಾರಿಗಳಿಗೆ ವಿನಾಯಿತಿ ನೀಡಿ ಆದೇಶ
ಸದಾನಂದಗೌಡ ಅವರು ಕ್ವಾರಂಟೈನ್‌ ನಿಯಮ ಪಾಲಿಸಿಲ್ಲ ಎಂಬ ಇಡೀ ದಿನದ ಹೈಡ್ರಾಮಾ ಬಳಿಕ ರಾಜ್ಯ ಆರೋಗ್ಯ ಇಲಾಖೆ ಪರಿಷ್ಕೃತ ಆದೇಶ ಹೊರಡಿಸಿದೆ. ಅಧಿಕೃತ ಕಚೇರಿ ಕರ್ತವ್ಯದ ಮೇಲೆ ವಿವಿಧ ರಾಜ್ಯಗಳ ನಡುವೆ ಓಡಾಡುವ ಕೇಂದ್ರ ಮತ್ತು ರಾಜ್ಯ ಸಚಿವರು ಮತ್ತು ಅಧಿಕಾರಿಗಳು ಕಡ್ಡಾಯ ಕ್ವಾರಂಟೈನ್‌ಗೆ ಒಳಪಡುವ ಅಗತ್ಯವಿಲ್ಲ. ಅದೇ ರೀತಿ ವಿಮಾನ ಸಿಬ್ಬಂದಿಗೂ ಕೂಡ ವಿನಾಯಿತಿ ನೀಡಲಾಗಿದೆ. ಆದರೆ, ಅವರು ಎರಡು ದಿನಗಳ ಹಿಂದೆ ಕೊರೊನಾ ಪರೀಕ್ಷೆಗೆ ಒಳಪಟ್ಟು ಟೆಸ್ಟ್‌ ವರದಿ ನೆಗೆಟಿವ್‌ ಬಂದಿರಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

error: Content is protected !! Not allowed copy content from janadhvani.com