ಕೋವಿಡ್ – 19 ಸಾಂಕ್ರಮಿಕ ರೋಗದಿಂದ ಲಾಕ್ ಡೌನ್ ಆದ ಕಾರಣ ಸೌದಿ ಅರೇಬಿಯಾದಾದ್ಯಂತ ಸಂಕಷ್ಟಕ್ಕೆ ಒಳಗಾಗಿರುವ ಭಾರತೀಯರು ಹಾಗೂ ಕನ್ನಡಿಗರ ನೆರವಿಗೆ ಸೌದಿ ಅರೇಬಿಯಾದಲ್ಲಿರುವ ಅನಿವಾಸಿ ಕನ್ನಡಿಗರ ಒಕ್ಕೂಟ ಕರ್ನಾಟಕ ಕಲ್ಚರಲ್ ಪೌಂಡೇಶನ್ ( ಕೆ.ಸಿ ಎಫ್ ) ಮುಂಚೂಣಿಯಲ್ಲಿದೆ. ಕೆ.ಸಿ ಎಫ್ ಸಂಘಟನೆಯು ತನ್ನ ಸ್ವಯಂ ಸೇವಕರನ್ನು ಹಲವು ತಂಡಗಳಾಗಿ ವಿಂಗಡಿಸಿದೆ.
ಲಾಕ್ ಡೌನ್ ನಿಂದ ಉದ್ಯೋಗ ಹಾಗೂ ವೇತನವಿಲ್ಲದೆ ಸಂಕಷ್ಟಕ್ಕೆ ಒಳಗಾಗಿರುವ ಸಾವಿರಾರು ಜನರಿಗೆ ಒಂದು ತಿಂಗಳ ಆಹಾರ ಸಾಮಾಗ್ರಿಗಳನ್ನು ವಿತರಿಸಿ ನೆರವು ನೀಡುತ್ತಿದೆ.ದಿನಸಿ ಸಾಮಾಗ್ರಿಗಳ ಕಿಟ್ ವಿತರಣೆ, ಚಿಕಿತ್ಸಾ ಸಹಾಯ, ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವಿತರಣೆ , ರಕ್ತದಾನ ಮುಂತಾದ ಕಾರ್ಯಚರಣೆಗಳ ಮೂಲಕ ನೆರವು ನೀಡುವ ಸಲುವಾಗಿ ದಿನದ 24 ಗಂಟೆಗಳ ಕಾಲ ಕಾರ್ಯಾಚರಿಸುವ ಟ್ರೋಲ್ ಫ್ರೀ ನಂಬ್ರವನ್ನು ಸಂಪರ್ಕಿಸುವಂತೆ ಅನಿವಾಸಿ ಭಾರತೀಯರಿಗೆ ತಿಳಿಸಿತ್ತು.
ಸೌದಿ ಅರೇಬಿಯಾದ ವಿವಿಧ ಭಾಗಗಳಿಂದ ಸಂಕಷ್ಟಗಳನ್ನು ಹೇಳಿಕೊಂಡು ದಿನ ನಿತ್ಯ ನೂರಾರು ಭಾರತೀಯರ ಹಾಗೂ ಕನ್ನಡಿಗರ ಕರೆಗಳು ಬರುತ್ತಿದ್ದು. ಸೌದಿ ಅರೇಬಿಯಾದ ರಿಯಾದ್ , ದಮ್ಮಾಮ್ , ಜುಬೈಲ್ ,ಅಲ್ ಘಸೀಮ್ , ಜಿದ್ದಾ, ಮಕ್ಕಾ , ಮದೀನಾ , ಜೀಝಾನ್ , ತಬೂಕ್ ,ಅಲ್ ಹಸ್ಸ, ಯಾಂಬೂ ಮುಂತಾದ ಪ್ರಾಂತ್ಯದಲ್ಲಿ ಕೆ.ಸಿ ಎಫ್ ನ ಸ್ವಯಂ ಸೇವಕರ ತಂಡವು ಅವರಿಗೆ ಬೇಕಾದ ಸಹಾಯಗಳನ್ನು ನೀಡುತ್ತಾ ಬರುತ್ತಿದೆ.
ಕೆಸಿಎಫ್ ಜುಬೈಲ್ ವತಿಯಿಂದ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತಿದೆ.
ಜಾತಿ ಧರ್ಮದ ಭೇದವಿಲ್ಲದೆ ಎಲ್ಲಾ ಭಾರತೀಯರಿಗೆ ಸಹಾಯ ಹಸ್ತ ಕೆಸಿಎಫ್ ನೀಡುತ್ತಿದೆ. ಸಾಂತ್ವನ ಮತ್ತು ನೆರವನ್ನು ನೀಡಲು KCF INC ನೇತಾರ ಖಮರುದ್ದೀನ್ ಗೂಡಿನಬಳಿ, ಸೌದಿ ಅರೇಬಿಯಾ ರಾಷ್ಟೀಯ ಅಧ್ಯಕ್ಷ ಯೂಸುಫ್ ಸಖಾಫಿ ಬೈತಾರ್, ಕಾರ್ಯದರ್ಶಿ ಸ್ವಾಲಿಹ್ ಬೆಳ್ಳಾರೆ ಹಾಗೂ ಕೋಶಾಧಿಕಾರಿ ಮುಹಮ್ಮದ್ ಕಲ್ಲರ್ಬೆರವರ ಮೇಲ್ನೋಟದಲ್ಲಿ ಕೆ.ಸಿ ಎಫ್ ಸಾಂತ್ವಾನ ವಿಭಾಗದ ಅಧ್ಯಕ್ಷ ಮುಹಮ್ಮದ್ ಮಲಬೆಟ್ಟು ಮತ್ತು ಕಾರ್ಯದರ್ಶಿ ಅಶ್ರಫ್ ಕಿನ್ಯರವರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿದೆ.
ಉಮ್ರಾ ಯಾತ್ರೆಗೆ ಬಂದ ಯಾತ್ರಾರ್ಥಿಗಳು ಮಕ್ಕಾ ಮತ್ತು ಮದೀನಾದಲ್ಲಿ ಲಾಕ್ ಡೌನ್ ನಿಂದ ಊರಿಗೆ ಮರಳಲು ಸಾಧ್ಯವಾಗದೇ ಇರುವವರಿಗೂ ಕೂಡಾ ಕೆ,ಸಿ ಎಫ್ ಅವಶ್ಯಕ ನೆರವುಗಳನ್ನು ನೀಡುತ್ತಿದೆ.
ವರದಿ : ಅಶ್ರು ಬಜ್ಪೆ