janadhvani

Kannada Online News Paper

‘ಅಧಿಸೂಚಿತ ವಿಪತ್ತು’ : ದೇಶದಲ್ಲಿ 107 ಮಂದಿಯಲ್ಲಿ ಕೋವಿಡ್‌ 19 ದೃಢ

ನವದೆಹಲಿ: ದೇಶದಲ್ಲಿ ಇದುವರೆಗೆ 107 ಮಂದಿಯಲ್ಲಿ ಕೋವಿಡ್‌ 19 ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ಸ್ಪಷ್ಟಪಡಿಸಿದೆ. ಮಾರ್ಚ್ 15ರ ಮಧ್ಯಾಹ್ನ 12ಗಂಟೆವರೆಗೂ ಲಭ್ಯವಾದ ಮಾಹಿತಿ ಪ್ರಕಾರ ವಿದೇಶಿಗರು ಸೇರಿದಂತೆ ದೇಶದಾದ್ಯಂತ 107 ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ ಎಂದು ಹೇಳಿದೆ.

ಕೋವಿಡ್-19ನಿಂದಾಗಿ ಕರ್ನಾಟಕ ಮತ್ತು ದೆಹಲಿ ಸೇರಿದಂತೆ ಈಗಾಗಲೇ ಇಬ್ಬರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ 5 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 31 ಜನರು ಸೋಂಕಿತರಾಗಿರುವುದು ತಿಳಿದುಬಂದಿದೆ.ದೇಶಾದ್ಯಂತ ದಿನದಿಂದ ದಿನಕ್ಕೆ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಮಾರಣಾಂತಿಕ ವೈರಸ್‌ ಅನ್ನು ‘ಅಧಿಸೂಚಿತ ವಿಪತ್ತು’ ಎಂದು ಘೋಷಿಸಿ ಶನಿವಾರ ಆದೇಶ ಹೊರಡಿಸಿದೆ.

ಈ ಕಾಯಿಲೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರಗಳು ವಿಪತ್ತು ಪರಿಹಾರ ನಿಧಿಯನ್ನು (ಎಸ್‌ಡಿಆರ್‌ಎಫ್‌) ಬಳಸುವಂತೆ ಕೇಂದ್ರ ಸರ್ಕಾರ ಅಧಿಸೂಚನೆಯಲ್ಲಿ ಸೂಚಿಸಿದೆ. ಅಗತ್ಯವಿರುವ ಉಪಕರಣಗಳು ಮತ್ತು ವೈರಸ್‌ ಸೋಂಕಿಗೆ ಒಳಗಾಗಿರುವವರನ್ನು ಪ್ರತ್ಯೇಕವಾಗಿಸಿ ಸೌಲಭ್ಯಗಳನ್ನು ಕಲ್ಪಿಸಲು ಈ ನಿಧಿ ಬಳಸಬಹುದು ಎಂದು ಕೇಂದ್ರ ತಿಳಿಸಿದೆ.2020 ರ ಜೂನ್ 30 ರವರೆಗೆ ಅಗತ್ಯ ಸರಕುಗಳ ಕಾಯ್ದೆಯಡಿ ಮುಖಗವುಸುಗಳು ಮತ್ತು ಹ್ಯಾಂಡ್ ಸ್ಯಾನಿಟೈಜರ್‌ಗಳನ್ನು ಅಗತ್ಯ ಸರಕುಗಳೆಂದು ಕೇಂದ್ರ ಸರ್ಕಾರ ಘೋಷಿಸಿದೆ. ಅಗತ್ಯ ಸರಕುಗಳ ಕಾಯಿದೆಯಡಿ, ಪೂರೈಕೆ ಸರಪಳಿಯನ್ನು ಸುಗಮಗೊಳಿಸಲು ರಾಜ್ಯಗಳು ಈ ವಸ್ತುಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ತಯಾರಕರನ್ನು ಕೇಳಬಹುದು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಚೀನಾದ ವುಹಾನ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕೊರೊನಾ ವೈರಸ್ ಸೋಂಕು, ಇದುವರೆಗೂ 100ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿದ್ದಲ್ಲದೆ 1,20,000 ಸಾವಿರ ಜನರಿಗೆ ಸೋಂಕು ತಗುಲಿದೆ. ಕೋವಿಡ್-19ಗೆ ಜಾಗತಿಕವಾಗಿ 5,700ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ.

ಚೀನಾದ ನಂತರ ಅತಿಹೆಚ್ಚಿನ ಜನರು ಇಟಲಿಯಲ್ಲಿ ಕೋವಿಡ್-19ಗೆ ಬಲಿಯಾಗಿದ್ದಾರೆ. ಅಂದರೆ 1,441 ಜನರು ಮೃತಪಟ್ಟಿದ್ದು, 21,157 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇಟಲಿ ನಂತರ ಸ್ಪೇನ್‌ನಲ್ಲಿ 1,500 ಹೊಸ ಪ್ರಕರಣಗಳೊಂದಿಗೆ 5,753 ಜನರಿಗೆ ಸೋಂಕು ತಗುಲಿದ್ದು, 183 ಜನರು ಮೃತಪಟ್ಟಿದ್ದಾರೆ.

error: Content is protected !! Not allowed copy content from janadhvani.com