janadhvani

Kannada Online News Paper

ಮಹಿಳೆಗೆ ಎದೆನೋವು: ಸಾರ್ವಜನಿಕ ಬಸ್ಸನ್ನೇ ಆಂಬುಲೆನ್ಸ್ ಮಾಡಿದ ಸಿಬ್ಬಂದಿಗಳು- ವ್ಯಾಪಕ ಪ್ರಶಂಸೆ

ಮಂಗಳೂರು: ಖಾಸಗಿ ಬಸ್​ವೊಂದರಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಎದೆನೋವು ಕಾಣಿಸಿಕೊಂಡಿತ್ತು. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಚಾಲಕ ಮತ್ತು ನಿರ್ವಾಹಕ ಬಸ್ಸನ್ನು ಯಾವುದೇ ನಿಲ್ದಾಣಗಳಲ್ಲಿ ನಿಲ್ಲಿಸದೆ ಆಂಬುಲನ್ಸ್ ನಂತೆ ನೇರವಾಗಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.

ನಗರದ ಹೊರವಲಯದ ತಲಪಾಡಿಯ ಕಿನ್ಯಾ ಗ್ರಾಮದಿಂದ ಮಂಗಳೂರಿಗೆ ಬರುತ್ತಿದ್ದ ಮಹೇಶ್‌ ಬಸ್‌ನಲ್ಲಿ ಮಹಿಳೆಯೊಬ್ಬರಿಗೆ ತೀವ್ರವಾಗಿ ಎದೆ ನೋವು ಕಾಣಿಸಿಕೊಂಡಿತು.ಕೂಡಲೇ ಎಚ್ಚೆತ್ತುಕೊಂಡ ಬಸ್ ಚಾಲಕ ಪ್ರಮೋದ್ ಹಾಗೂ ನಿರ್ವಾಹಕ ಅಶ್ವಿತ್ ಬಸ್ಅನ್ನ ಹತ್ತಿರದ ಖಾಸಗಿ ಆಸ್ಪತ್ರೆ ಬಳಿ ಚಲಾಯಿಸಿಕೊಂಡು ಹೋಗಿ ನಿಲ್ಲಿಸಿದ್ದಾರೆ. ಚಾಲಕ, ನಿರ್ವಾಹಕನ ಈ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

ಘಟನೆ:
ಬೆಳಿಗ್ಗೆ 10.30ಕ್ಕೆ ಕಿನ್ಯಾದಿಂದ ತೆರಳುವ ಬಸ್ಸಿನಲ್ಲಿ ಮೀನಾದಿ ನಿವಾಸಿ ಭಾಗ್ಯ(50) ಎಂಬ ಮಹಿಳೆ, ಇನ್ನೋರ್ವ ಮಹಿಳೆ ಜೊತೆಗೆ ಬಸ್ಸನ್ನೇರಿದ್ದರು. ಸೀಟಿನಲ್ಲಿ ಕುಳಿತಿದ್ದ ಭಾಗ್ಯ ಅವರು ಬಸ್ಸು ಕೆ.ಸಿ ರೋಡು ತಲುಪುತ್ತಿದ್ದಂತೆ ಎದೆನೋವು ಎಂದು ಬೊಬ್ಬೆ ಹಾಕಲು ಆರಂಭಿಸಿದರು. ಇದನ್ನು ಗಮನಿಸಿದ ಸಿಬ್ಬಂದಿ ಬಸ್ಸಿನಲ್ಲಿ ಪ್ರಯಾಣಿಕರಿದ್ದರೂ, ಎಲ್ಲಿಯೂ ನಿಲ್ಲಿಸದೆ ಸುಮಾರು 3 ಕಿ.ಮೀ ಉದ್ದಕ್ಕೆ ಬಸ್ಸು ಚಲಾಯಿಸಿ ಕೋಟೆಕಾರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ಭಾಗ್ಯ ಅವರು ಜತೆಗಿದ್ದ ಮಹಿಳೆ ಜೊತೆಗೆ ಹೆಚ್ಚಿನ ಚಿಕಿತ್ಸೆಗೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಹೊರರೋಗಿಯಾಗಿ ಮಹಿಳೆ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವುದಾಗಿ ಮಹೇಶ್ ಬಸ್ಸು ಕಂಪೆನಿ ಪ್ರಬಂಧಕ ರಂಜಿತ್ ತಿಳಿಸಿದ್ದಾರೆ. ಶ್ರಮಿಕ ಸಂಘದ ಸದಸ್ಯರಾಗಿರುವ ಚಾಲಕ ಹಾಗೂ ನಿರ್ವಾಹಕರ ಸಮಯಪ್ರಜ್ಞೆ ಹಾಗೂ ಮಾನವೀಯತೆಯ ಗುಣಗಳನ್ನು ಸಂಘ ಹಾಗೂ ಬಸ್ಸು ಮಾಲೀಕ ಪ್ರಕಾಶ್ ಶೇಖ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

error: Content is protected !! Not allowed copy content from janadhvani.com