ಮಂಡ್ಯ: ಬಿಜೆಪಿ ಪಕ್ಷ ಮಹಾತ್ಮ ಗಾಂಧಿ ಹೆಸರನ್ನು ಜನರಿಂದ ಮರೆಸುವ ಅಜೆಂಡಾ ಇಟ್ಟುಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮಂಗಳವಾರ ಹೇಳಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಲಘುವಾಗಿ ಮಾತನಾಡೋದನ್ನು ನಿಲ್ಲಿಸಿ, ಮಹಾತ್ಮ ಗಾಂಧಿ ಬಗ್ಗೆ ಮಾತನಾಡಲು ಹೆಗಡೆಗೆ ಯಾವ ಯೋಗ್ಯತೆ ಇದೆ. ಗಾಂಧೀಜಿ ಉಗುರಿಗೂ ಹೆಗಡೆ ಸಮಾನರಲ್ಲ, ಇಂತಹ ವ್ಯಕ್ತಿಯನ್ನು ಬಿಜೆಪಿ ಬೆಳೆಸಬಾರದು. ಇದರಿಂದ ಬಿಜೆಪಿ ಮುಂದಿನ ದಿನಗಳಲ್ಲಿ ಧೂಳೀಪಟವಾಗಲಿದೆ. ಅವನು ಗಾಂಧೀಜಿ ಕ್ಷಮೆ ಕೇಳ್ತಾನಾ…? ಅವನಿಂದ ಕ್ಷಮೆ ನಿರೀಕ್ಷೆ ಮಾಡಲು ಸಾಧ್ಯವೇ..? ಅವನ ಹಿಂದಿನ ಲಘು ಮಾತುಗಳನ್ನು ಕೇಳಿದಾಗ ನಾವೇ ಕೆಸರಿನ ಮೇಲೆ ಕಲ್ಲು ಎಸೆದುಕೊಂಡಂತೆ ಎಂದು ಅನಂತ್ ಕುಮಾರ್ ಹೆಗಡೆ ವಿರುದ್ದ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಗಾಂಧೀಜಿ ಬಗ್ಗೆ ಸಂಸದ ಅನಂತ್ ಕುಮಾರ್ ಹೆಗಡೆ ಲಘು ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಗಾಂಧಿ ಸ್ವಾತಂತ್ರ್ಯ ಹೋರಾಟ ಮಾಡಿದಾಗ ಹೆಗಡೆ ಹುಟ್ಟೇ ಇರಲಿಲ್ಲ, ಬಿಜೆಪಿ ಪಕ್ಷ ಘನತೆ, ಗೌರವ, ಮಾನ, ಮರ್ಯಾದೆ ಉಳಿಸಿಕೊಳ್ಳಬೇಕಾದರೆ ಮೊದಲು ದೇಶಕ್ಕೆ ದುಡಿದವರ ಬಗ್ಗೆ ಕೃತಜ್ಞತ ಮನೋಭಾವ ಬೆಳೆಸಿಕೊಳ್ಳಿ ಎಂದರು.
ಇವರು ನಿನ್ನೆ ಮೊನ್ನೆಯಿಂದ ಅಧಿಕಾರ ನೋಡ್ತಿದ್ದಾರೆ. ನರೇಂದ್ರ ಮೋದಿ ಕಳೆದ ಐದು ವರ್ಷದಲ್ಲಿ ದೇಶ ಉದ್ದಾರ ಮಾಡಿದ್ದಾರಾ..? ದೇಶದಲ್ಲೇ ಮೊದಲ ಬಾರಿಗೆ ಕೇಂದ್ರದ ಬಜೆಟ್ ಅನ್ನು ಮಾಧ್ಯಮಗಳು ಟೀಕಿಸಿವೆ ಎಂದರು.
ಸಚಿವ ಸಂಪುಟ ಕಗ್ಗಂಟಾದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಆ ಬಗ್ಗೆ ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ, ಸಂಪುಟ ವಿಸ್ತರಣೆ ಬಗ್ಗೆ ನನಗೆ ಆಸಕ್ತಿ ಇಲ್ಲ, ಜನರ ಸಮಸ್ಯೆ ಬಗೆ ಗಮನ ಹರಿಸದೇ ಸಂಪುಟ ವಿಸ್ತರಣೆ ಬಗ್ಗೆ ಸಮಸ್ಯೆ ಮಾಡಿಕೊಂಡು ಕುಳಿತಿದ್ದಾರೆ. ಆ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯೆ ಕೊಡಲ್ಲ ಎಂದರು.