janadhvani

Kannada Online News Paper

ಕಾಸರಗೋಡಿನಲ್ಲಿ ಕೊರೊನಾ ವೈರಸ್‌: ದ.ಕ ಜಿಲ್ಲೆಯಾದ್ಯಂತ ತೀವ್ರ ನಿಗಾ

ಮಂಗಳೂರು: ನೆರೆಯ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ವೈರಸ್‌ ತಗುಲಿರುವ ಪ್ರಕರಣ ಪತ್ತೆಯಾಗಿರುವುದರಿಂದ ಆರೋಗ್ಯ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ತೀವ್ರ ನಿಗಾ ಇಟ್ಟಿದೆ. ಶಂಕಿತ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣವೇ ವರದಿ ಸಲ್ಲಿಸುವಂತೆ ಜಿಲ್ಲೆಯ ಎಲ್ಲ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ.

ಚೀನಾದಿಂದ ಮಂಗಳೂರಿಗೆ ನೇರ ವಿಮಾನ ಸಂಚಾರ ಇಲ್ಲ. ಆದರೆ, ಪ್ರಯಾಣಿಕರು ದೇಶದ ಬೇರೆ ವಿಮಾನ ನಿಲ್ದಾಣಗಳಿಗೆ ಬಂದಿಳಿದು ಅಲ್ಲಿಂದ ಮಂಗಳೂರಿಗೆ ಬರುವ ಸಾಧ್ಯತೆಯೂ ಇದೆ. ಈ ಕಾರಣದಿಂದ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಪ್ರಯಾಣಿಕರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ. ಶಂಕಿತ ಪ್ರಕರಣಗಳು ಕಂಡುಬಂದಲ್ಲಿ ವರದಿ ನೀಡುವಂತೆ ಆರೋಗ್ಯ ಇಲಾಖೆಯು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಸೂಚಿಸಿದೆ.

‘ವಿಮಾನ ನಿಲ್ದಾಣದಲ್ಲಿ ಬರುವ ಪ್ರಯಾಣಿಕರಲ್ಲಿ ಕೊರೊನಾ ವೈರಸ್‌ ತಗುಲಿರುವ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ಆರೋಗ್ಯ ಇಲಾಖೆಯ ಸರ್ವೇಕ್ಷಣಾ ಘಟಕ ನಿಗಾ ವಹಿಸಿದೆ. ಜಿಲ್ಲೆಯ ಎಲ್ಲ ಆಸ್ಪತ್ರಗಳಿಗೂ ಈ ಸಂಬಂಧ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣರಾವ್‌ ತಿಳಿಸಿದರು.

ಸಾವಿರಾರು ಮಂದಿ ಬಸ್ ಪ್ರಯಾಣ

ಕಾಸರಗೋಡು ಸೇರಿದಂತೆ ಕೇರಳದ ವಿವಿಧ ಸ್ಥಳಗಳಿಗೆ ಕೆಎಸ್‌ಆರ್‌ಟಿಸಿಯ 40 ಬಸ್‌ಗಳು ನಿತ್ಯವೂ ಸಂಚರಿಸುತ್ತವೆ. ಈ ಬಸ್‌ಗಳು 240 ಟ್ರಿಪ್‌ ಓಡಾಡುತ್ತವೆ. ಖಾಸಗಿ ಬಸ್‌ಗಳೂ ಇವೆ. ಪ್ರತಿದಿನ ಅಂದಾಜು 14,000ದಿಂದ 15,000 ಮಂದಿ ಬಸ್‌ನಲ್ಲೇ ಉಭಯ ರಾಜ್ಯಗಳ ನಡುವೆ ಸಂಚರಿಸುತ್ತಾರೆ.

ದಕ್ಷಿಣ ಕನ್ನಡ ಮತ್ತು ಕೇರಳದ ನಡುವೆ ಹಲವು ರೈಲುಗಳು ಸಂಚರಿಸುತ್ತವೆ. ವಿದ್ಯಾರ್ಥಿಗಳು ಸೇರಿದಂತೆ 20,000ಕ್ಕೂ ಹೆಚ್ಚು ಮಂದಿ ನಿತ್ಯ ರೈಲಿನಲ್ಲಿ ಬಂದು ಹೋಗುತ್ತಾರೆ. ವ್ಯಾಪಾರ, ವಹಿವಾಟಿನ ಕಾರಣಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಜನರೂ ದೊಡ್ಡ ಸಂಖ್ಯೆಯಲ್ಲಿ ಕೇರಳಕ್ಕೆ ಹೋಗಿ ಬರುತ್ತಾರೆ.

ಬಸ್‌ ಮತ್ತು ರೈಲಿನ ಮೂಲಕ ಕೇರಳಕ್ಕೆ ಹೋಗಿ ಬರುವವರನ್ನು ತಪಾಸಣೆಗೆ ಒಳಪಡಿಸುವುದು ಕಷ್ಟ. ಈ ಕಾರಣದಿಂದ ಜಿಲ್ಲೆಯ ಯಾವುದೇ ಭಾಗದಲ್ಲಿ ಕೊರೊನಾ ವೈರಸ್‌ ತಗುಲಿದ ರೋಗ ಲಕ್ಷಣಗಳು ಪತ್ತೆಯಾದಲ್ಲಿ ತಕ್ಷಣವೇ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಮನವಿ ಮಾಡಿದ್ದಾರೆ.

ಭಯ ಬೇಡ

‘ಕೊರೊನಾ ವೈರಸ್‌ ತಗುಲಿದ ತಕ್ಷಣದಲ್ಲೇ ಸಾವು ಸಂಭವಿಸುತ್ತದೆ ಎಂದು ಭಯಪಡುವ ಅಗತ್ಯವಿಲ್ಲ. 100 ಮಂದಿಗೆ ಸೋಂಕು ತಗುಲಿದರೆ ಎರಡರಿಂದ ಮೂರು ಮಂದಿ ಮಾತ್ರ ಮೃತರಾಗುವ ಸಾಧ್ಯತೆ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ತಪ್ಪು ಮಾಹಿತಿಗಳನ್ನು ನಂಬಿ ಜನರು ಭಯಭೀತರಾಗಬಾರದು. ಅಂತಹ ಶಂಕೆ ಇದ್ದಲ್ಲಿ ತಕ್ಷಣವೇ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಬೇಕು’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನವೀನ್‌ ಚಂದ್ರ ತಿಳಿಸಿದ್ದಾರೆ.

error: Content is protected !! Not allowed copy content from janadhvani.com