ಬೆಂಗಳೂರು: ಭಾರತದಲ್ಲಿ ಜನಿಸಿದ್ದೇ ಭಾರತದ ಪೌರತ್ವಕ್ಕೆ ಮಾನದಂಡವಾಗಬೇಕು. ತಾತ, ಮುತ್ತಾತಂದಿರ ಜನನಕ್ಕೆ ಪುರಾವೆಗಳನ್ನು ಕೇಳಿ ಪ್ರಜೆಗಳನ್ನು ಸತಾಯಿಸುವುದು ಚುನಾಯಿಸಿದ ಜನತೆಗೆ ಮಾಡುವ ಘೋರ ಅಪರಾಧ. ಹೊರಗಿನಿಂದ ಬಂದವರಿಗೆ ಪೌರತ್ವ ನೀಡುವ ವಿಚಾರದಲ್ಲಿಯೂ ಧರ್ಮ ಮಾನದಂಡವಾಗಬಾರದು. ಜನರನ್ನು ಆತಂಕಕ್ಕೀಡು ಮಾಡಿ ಬೀದಿಗಿಳಿಸಿರುವ ಸಿಎಎ, ಎನ್ಆರ್ ಸಿ, ಎನ್ ಪಿಆರ್ ಗಳನ್ನು ಹಿಂದಕ್ಕೆ ತೆಗೆದು ಸರ್ಕಾರ ಜನರ ಸ್ವಸ್ಥತೆಯನ್ನು ಮರಳಿಸಬೇಕು ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಆಗ್ರಹಿಸಿದೆ.
ಎನ್ಆರ್ ಸಿ ಜಾರಿಮಾಡಿಯೇ ಸಿದ್ಧ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದರೆ, ಅಂತಹ ಚರ್ಚೆ ನಡೆದಿಲ್ಲ ಎಂದು ರಕ್ಷಣಾ ಸಚಿವರು ಹೇಳುತ್ತಾರೆ. ನಿಜ ಸ್ಥಿತಿಯ ಬಗ್ಗೆ ಪ್ರಧಾನಿ ಮೌನ ಮುರಿಯಬೇಕು ಎಂದು ಹೇಳಿರುವ ಮುಸ್ಲಿಂ ಜಮಾತ್, ಮಂಗಳೂರಿನಲ್ಲಿ ನಡೆದ ಗೋಲಿಬಾರ್, ವಿಮಾನ ನಿಲ್ದಾಣದಲ್ಲಿ ನಡೆದಿರುವ ಸ್ಪೋಟಕ ಇರಿಸಿದ್ದ ಪ್ರಕರಣ ಹಾಗೂ ದೆಹಲಿಯಲ್ಲಿ ನಡೆದಿರುವ ಗುಂಡು ಹಾರಾಟ ಪ್ರಕರಣಗಳನ್ನು ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಿ ನ್ಯಾಯ ವ್ಯವಸ್ಥೆಯ ಬಗ್ಗೆ ಜನರಲ್ಲಿ ಭರವಸೆ ಮೂಡಿಸಬೇಕು ಎಂದು ಆಗ್ರಹಿಸಿದೆ.
ಬೆಂಗಳೂರಿನಲ್ಲಿ ನಡೆದ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯಕಾರಿಣಿಯಲ್ಲಿ ಈ ಸಂಬಂಧ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಎನ್.ಕೆ.ಎಂ ಶಾಫಿ ಸಅದಿ, ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಗೆ ಸಂಬಂಧಿಸಿದಂತೆ ಜನ ಜಾಗೃತಿ ಮೂಡಿಸುವುದಕ್ಕಾಗಿ ‘ಪ್ರಜಾ ಭಾರತ’ ಅಭಿಯಾನವನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ವಿಶ್ವ ಸಾಮಾಜಿಕ ನ್ಯಾಯ ದಿನವಾದ ಫೆ. 20ರಿಂದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿ ದಿನವಾದ ಎ. 14ರ ವರೆಗಿನ 55 ದಿನಗಳಲ್ಲಿ ರಾಜ್ಯದ ವಿವಿಧ ಕಡೆಗಳಲ್ಲಿ ಪ್ರಜಾ ಭಾರತ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.
ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಮುಫ್ತಿಯೇ ಕರ್ನಾಟಕ ಮೌಲಾನಾ ಅನ್ವರ್ ಅಲೀ ಖಾದಿರಿ ರಾಮನಗರ ಅಧ್ಯಕ್ಷತೆ ವಹಿಸಿದ್ದರು. ಕೊಡಗು ಜಿಲ್ಲಾ ಸಹಾಯಕ ಖಾಝಿ ಎಡಪ್ಪಲಂ ಮಹ್ಮೂದ್ ಮುಸ್ಲಿಯಾರ್, ಡಾ. ಮುಹಮ್ಮದ್ ಫಾಝಿಲ್ ಹಝ್ರತ್, ಅಬೂ ಸುಫ್ಯಾನ್ ಮದನಿ, ಮೌಲಾನಾ ಶಬೀರ್ ಹಝ್ರತ್ ಬೆಂಗಳೂರು, ಡಾ. ಎಮ್ಮೆಸ್ಸಂ ಕಾಮಿಲ್ ಸಖಾಫಿ, ಯಾಕೂಬ್ ಯೂಸುಫ್ ಶಿವಮೊಗ್ಗ, ಅಬ್ದುಲ್ಲತೀಫ್ ಶುಂಠಿ ಕೊಪ್ಪ, ಹಮೀದ್ ಬಜ್ಪೆ, ಎಂಬಿ ಹಮೀದ್ ಮಡಿಕೇರಿ, ಎಂಬಿಎಂ ಸಾದಿಕ್ ಮೊದಲಾದವರು ಉಪಸ್ಥಿತರಿದ್ದರು.