ಮಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಸಿಆರ್) ವಿರೋಧಿಸಿ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 76ರಲ್ಲಿ ಅಡ್ಯಾರ್- ಕಣ್ಣೂರಿನ ಶಹಾ ಗಾರ್ಡನ್ ನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ಹಮ್ಮಿಕೊಂಡಿದ್ದ ಸಮಾವೇಶವು ಲಕ್ಷಕ್ಕೂ ಅಧಿಕ ಜನರ ಸಮಾಗಮದೊಂದಿಗೆ ಯಶಸ್ವಿ ಸಮಾಪ್ತಿ.
ಶಹೀದ್ ಅಬ್ದುಲ್ ಜಲೀಲ್ ಕಂದಕ್ ಹಾಗೂ ನೌಶೀನ್ ಕುದ್ರೋಳಿ ವೇದಿಕೆಯಲ್ಲಿ ನಡೆದ ಪ್ರತಿಭಟನಾ ಸಮಾವೇಶವನ್ನು ಉಡುಪಿ ಜಿಲ್ಲಾ ಖಾಝಿ ಅಲ್ ಹಾಜ್ ಬೇಕಲ ಇಬ್ರಾಹಿಂ ಮುಸ್ಲಿಯಾರ್ ಉದ್ಘಾಟಿಸಿ ಮಾತನಾಡಿ,ಈ ಮಣ್ಣಿನಲ್ಲಿ ಹುಟ್ಟಿದವರಿಗೆ ಯಾರೂ ಪೌರತ್ವವನ್ನು ಔದಾರ್ಯವಾಗಿ ನೀಡಬೇಕಾಗಿಲ್ಲ. ಎಲ್ಲರಿಗೂ ಇಲ್ಲಿ ಜೀವಿಸುವ ಹಕ್ಕಿದೆ. ಅದನ್ನು ನಮ್ಮ ಸಂವಿಧಾನ ನಮಗೆ ನೀಡಿದೆ. ಯಾವುದೇ ಮತ ಧರ್ಮಗಳ ವ್ಯತ್ಯಾಸವಿಲ್ಲದೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅನುಭವ ನಮಗಿದೆ. ಅದನ್ನು ನಾವು ಮರೆತಿಲ್ಲ. ಈಗ ಕೂಡ ಇದೇ ಮಾದರಿಯಲ್ಲಿ ನಮ್ಮ ಈ ಸಮರ ಹೋರಾಟ ಮುಂದುರಿಯಲಿದೆ ಎಂದು ಅವರು ಹೇಳಿದರು. ಮಂಗಳೂರು ಖಾಝಿ ಅಲ್ ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ದುವಾ ನೆರವೇರಿಸಿದರು.
ಯಾವುದೇ ಹೂಡಿಕೆ ಇಲ್ಲದೆ ಅಂತಾರಾಷ್ಟ್ರೀಯ ಮಟ್ಟದ ಗಿಮಿಕ್ ಕಲಾವಿದರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಎಂದು ನ್ಯಾಯವಾದಿ ಸುಧೀರ್ ಕುಮಾರ್ ಮುರೋಳಿ ಮೂದಲಿಸಿದರು.
ಪ್ರಧಾನಿ ಮೋದಿಯವರು ಅಂತಾರಾಷ್ಟ್ರೀಯ ಯೋಗ ದಿನ, ಸ್ವಚ್ಛ ಭಾರತ, ಬೇಟಿ ಬಚಾವೊ ಮೊದಲಾದ ಯೋಜನೆಗಳನ್ನು ಜಾರಿಗೊಳಿಸಿದರು. ಆದರೆ ಜಾಹೀರಾತುಗಳಲ್ಲಿ ತಾವೇ ಕಾಣಿಸಿಕೊಂಡರು. ಇದು ಗಿಮಿಕ್ ಎಂದು ಅವರು ಟೀಕಿಸಿದರು.
ಬ್ರಿಟಿಷರ ಒಡೆದಾಳುವ ಭಾಗವಾಗಿಯೇ ಸಿಎಎ ಹಾಗೂ ಎನ್‌ಆರ್‌ಸಿ ಜಾರಿಗೆ ಬರುತ್ತಿದೆ. ಸರಕಾರ ಬ್ರಿಟಿಷರ ಪರ ಯೋಚನೆ ಮಾಡಿದರೆ, ನಾವು ಭಾರತೀಯರಾಗಿ ಯೋಚಿಸುತ್ತೇವೆ. ಭಾರತವೆಂದರೆ ಅದು ಸರ್ವಜನಾಂಗದ ಶಾಂತಿಯ ತೋಟ ಎಂದವರು ಹೇಳಿದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ತರಾಟೆಗೈದ ಸುಧೀರ್ ಕುಮಾರ್, ನೀವು ನೀರುಳ್ಳಿ ಬೆಳ್ಳುಳ್ಳಿ ತಿನ್ನದಿರಬಹುದು. ಆದರೆ ಇದು ಸಾಮರಸ್ಯದ ಭೂಮಿ. ಇಲ್ಲಿ ಜಾತಿ ಧರ್ಮದ ಬೇಧವಿಲ್ಲದೆ ಇದನ್ನು ತಿನ್ನುವವರಿದ್ದಾರೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪರ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಸುಧೀರ್ ಕುಮಾರ್, ನೀವು ಹಾಗೂ ಸಂಸದೆ ಶೋಭಾ ಕರಂದ್ಲಾಜೆಯವರು ಬಿಜೆಪಿ ಬಿಟ್ಟ ಸಂದರ್ಭ ಟಿಪ್ಪು ಸುಲ್ತಾನ್ ಶಹೀದ್ ಅಂತ ಹೇಳಿದ್ದೀರಿ, ಮತ್ತೆ ಬಿಜೆಪಿಗೆ ಬಂದು ಟಿಪ್ಪು ಸುಲ್ತಾನ ಮತಾಂಧ ಎಂದು ಹೇಳಿದ್ದೀರಿ. ಹಾಗಾಗಿ ನೀವು ಹೇಳಿದ್ದು ನಾವು ನಂಬಿ ಇರಲು ಆಗುವುದಿಲ್ಲ ಎಂದರು.
‘‘ವಕೀಲನಾಗಿ ನಾನು ಹೇಳುತ್ತಿದ್ದೇನೆ. ಇನ್ಸ್‌ಪೆಕ್ಟರ್ ಶಾಂತಾರಾಮ್‌ರವರೇ, ಶರೀಫ್‌ರವರೇ, ಕಮಿಷನರ್ ಹರ್ಷರವರೇ, ಕೋವಿ ಕೊಟ್ಟಿದೆ ಎಂದು ಗುಂಡು ಹಾರಿಸಿದರೆ ಕ್ಷಮಿಸಲು ಆಗುವುದಿಲ್ಲ. ದ.ಕ. ಜಿಲ್ಲೆಯ ಜನ ಅಷ್ಟು ಸುಲಭಕ್ಕೆ ಬಿಡುವುದಿಲ್ಲ’’ ಎಂದು ಸುಧೀರ್ ಕುಮಾರ್ ಹೇಳಿದರು.
ಸಮಾವೇಶದಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿ ಉಪಾಧ್ಯಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್ ಸ್ವಾಗತಿಸಿದರು. ಹಾಜಿ ಕೆ.ಎಸ್. ಮುಹಮ್ಮದ್ ಮಸೂದ್ ಅಧ್ಯಕ್ಷತೆ ವಹಿಸಿದ್ದರು. ಡಾ.ಎಮ್ಮೆಸ್ಸೆಂ ಝೈನಿ ಕಾಮಿಲ್, ಅಬ್ದುಲ್ ಅಝೀಝ್ ದಾರಿಮಿ ಸಹಿತ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಮಾತನಾಡಿದರು. ಹಾಜಿ ಬಿ.ಎ. ಮುಮ್ತಾಝ್ ಅಲಿ ವಂದಿಸಿದರು. ಬಿ. ಎ. ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.
ಕಣ್ಣು ಹಾಯಿಸಿದಂತೆಲ್ಲಾ ರಾಷ್ಟ್ರ ಧ್ವಜ ಹಾರಾಡಿದರೆ, ಸಮಾವೇಶದುದ್ದಕ್ಕೂ ಆಗಾಗ್ಗೆ ಆಝಾದಿ ಘೋಷಣೆ ಮೊಳಗುತ್ತಿತ್ತು. ಸಮಾವೇಶಕ್ಕೆ ನಗರದ ವಿವಿಧೆಡೆಗಳಿಂದ ವಾಹನಗಳಲ್ಲಿ ಆಗಮಿಸುತ್ತಿದ್ದ ಪ್ರತಿಭಟನಾಕಾರರು ರಾಷ್ಟ್ರಧ್ವಜದೊಂದಿಗೆ ಆಝಾದಿ ಘೋಷಣೆಗಳನ್ನು ಕೂಗುತ್ತಾ ಸಾಗುತ್ತಿದ್ದರು. ‘ಹಮ್ ಲೇಕೇ ರಹೇಂಗೆ ಆಝಾದಿ, ಸಿಎಎ, ಎನ್ ಆರ್‌ಸಿಸೆ ಆಝಾದಿ’ ಎಂಬ ಘೊಷಣೆಯನ್ನು ಕೂಗಲಾಗುತ್ತಿತ್ತು. ಇದರ ನಡುವೆ ಪಂಪ್‌ವೆಲ್ ಸೆ ಆಝಾದಿ ಎಂಬ ಘೋಷಣೆಯೂ ಕೇಳಿ ಬರುತ್ತಿತ್ತು.
ಪ್ರತಿಭಟನೆಗೆ ಬರುತ್ತಿರುವ ಜನರಿಂದ ಈ ಭಾಗದ ಎಲ್ಲ ಮಾರ್ಗಗಳು ತುಂಬಿ ಹೋಗಿತ್ತು. ಮೈದಾನ, ಹೆದ್ದಾರಿ, ಅಕ್ಕಪಕ್ಕದ ಖಾಲಿ ಜಾಗಗಳೆಲ್ಲಾ ಜನರಿಂದ ತುಂಬಿ ತುಳುಕುತ್ತಿತ್ತು. ಸಮಾವೇಶ ನಡೆಯುತ್ತಿರುವ ಪ್ರದೇಶದಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿತ್ತು. ಮನೆಗಳು, ಕಟ್ಟಡಗಳ ಮೇಲೆ ನಿಂತು ಮಹಿಳೆಯರು, ಮಕ್ಕಳು ಪ್ರತಿಭಟನಾ ಸಮಾವೇಶವನ್ನು ವೀಕ್ಷಿಸುತ್ತಿದ್ದರು.
ಸಮಾವೇಶಕ್ಕೆ ಉಳ್ಳಾಲದ ಕೋಟೇಪುರದಿಂದ ಅಡ್ಯಾರ್ ಕಣ್ಣೂರುವರೆಗೆ ನದಿಯಲ್ಲಿ 100 ದೋಣಿಯಲ್ಲಿ ಬೃಹತ್ ರ್‍ಯಾಲಿ ಮೂಲಕ ಜನರು ಆಗಮಿಸಿದ್ದರು. ಶಹಾ ಗಾರ್ಡನ್ ಮತ್ತು ಸುತ್ತಮುತ್ತ ಕಣ್ಣು ಹಾಯಿಸಿದಲ್ಲೆಲ್ಲ ಬಿಳಿ ವಸ್ತ್ರ ಧರಿಸಿ ರಾಷ್ಟ್ರಧ್ವಜ ಹಿಡಿದ ಜನರೇ ಕಾಣಿಸುತ್ತಿದ್ದು, ‘ಸಂವಿಧಾನ ಉಳಿಸಿ ದೇಶ ಉಳಿಸಿ’ ಎಂಬ ಘೋಷಣೆಯುಳ್ಳ ಟಿ–ಷರ್ಟ್ ಧರಿಸಿದ ಸಾವಿರಾರು ಸ್ವಯಂ ಸೇವಕರು ಎಲ್ಲವನ್ನೂ ನಿರ್ವಹಿಸುತ್ತಿದ್ದರು.
‘ಸಾರೇ ಜಹಾಂಸೆ ಅಚ್ಚಾ’ ಹಾಡಿನೊಂದಿಗೆ ಪ್ರತಿಭಟನಾ ಸಮಾವೇಶ ಆರಂಭಗೊಂಡು, ರಾಷ್ಟ್ರಗೀತೆಯೊಂದಿಗೆ ಸಮಾಪನಗೊಂಡಿತು.
3,000ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದ್ದು,ಭಾರಿ ಪ್ರಮಾಣದ ಜನರು ಸೇರುವುದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ವಿಶೇಷ ಕಾರ್ಯತಂತ್ರ ರೂಪಿಸಿಕೊಂಡಿದ್ದರು.