ದುಬೈ,ಜ.12: ಯುಎಇಯಲ್ಲಿ ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಹುತೇಕ ರಸ್ತೆಗಳು ಜಲಾವೃತಗೊಂಡಿದೆ. ಹಲವು ಮಾಲ್, ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಸುಪರ್ ಮಾರ್ಕೆಟ್ಗಳಿಗೆ ಮಳೆನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ದಾಸ್ ಮತ್ತು ಖರ್ನೈನ್ ದ್ವೀಪಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ ಎಂದು ಯುಎಇಯ ರಾಷ್ಟ್ರೀಯ ಹವಾಮಾನ ಕೇಂದ್ರ ತಿಳಿಸಿದೆ. ಮುಂದಿನ ಕೆಲವು ದಿನಗಳಲ್ಲಿ ದೇಶದಲ್ಲಿ ಗಾಳಿ ಮತ್ತು ಮಳೆಯ ವಾತಾವರಣವಿರುತ್ತದೆ ಎಂದು ಕೇಂದ್ರದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದುಬೈ ಶಾರ್ಜಾ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಶಾರ್ಜಾದ ಪ್ರಮುಖ ಶಾಪಿಂಗ್ ಮಾಲಾದ ಸಿಟಿ ಸೆಂಟರಿನ ಕೆಲ ಅಂತಸ್ತು ಸಂಪೂರ್ಣ ಜಲಾವೃತವಾಗಿದೆ. ವೀಡಿಯೋ
ಅಬುಧಾಬಿ ಮತ್ತು ದುಬೈ ನಡುವಿನ ಪ್ರದೇಶವೊಂದರಲ್ಲಿ 8 ತಿಂಗಳ ಮಳೆ (49.4 ಮಿಲಿ ಮೀಟರ್) ರವಿವಾರ ಕೇವಲ ಒಂದು ಗಂಟೆಯ ಅವಧಿಯಲ್ಲಿ ಸುರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
‘‘ಹವಾಮಾನದಲ್ಲಿ ಕೊಂಚ ಬದಲಾವಣೆಯಾದರೂ ಯುಎಇಯ ಮೇಲೆ ಪರಿಣಾಮ ಬೀರುತ್ತದೆ. ಆಕಾಶದಲ್ಲಿ ಮೋಡದ ವಾತಾವರಣವಿದ್ದು, ಬಲವಾದ ಗಾಳಿ ಬೀಸುತ್ತದೆ. ಇದರಿಂದಾಗಿ ದೇಶದ ಹಲವು ಭಾಗಗಳಲ್ಲಿ ದೃಗ್ಗೋಚರತೆ ಕಡಿಮೆ ಇರುತ್ತದೆ’’ ಎಂದು ಅವರು ಹೇಳಿದ್ದಾರೆ.
ದುಬೈಯ ಅಲ್ ಮಕ್ತೂಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ಮಳೆ ಸುರಿದಿದೆ. ಡಿಸ್ಕವರಿ ಗಾರ್ಡನ್ಸ್ ಮತ್ತು ಅಲ್-ಖೋಝ್‌ನಲ್ಲಿ ಮಧ್ಯಮ ಪ್ರಮಾಣದಲ್ಲಿ ಮಳೆಯಾಗಿದೆ.
ರಾಸ್ ಅಲ್ ಖೈಮಾನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಗೋಡೆಯೊಂದು ಕುಸಿದು ಬಿದ್ದ ಪರಿಣಾಮವಾಗಿ ಮಹಿಳೆಯೊಬ್ಬಳು ಮೃತಪಟ್ಟಿದ್ದಾರೆ. ವಾದಿ ಶಾಮ್ ನಲ್ಲಿ ಪ್ರವಾಹದಿಂದಾಗಿ ಏಶ್ಯದ ಕಾರ್ಮಿಕರೊಬ್ಬರು ನಾಪತ್ತೆಯಾಗಿದ್ದಾರೆ ಮತ್ತು ಆತನನ್ನು ಹುಡುಕಲು ಶೋಧ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳೆದ ಎರಡು ದಿನಗಳಿಂದ ಹವಾಮಾನ ಪರಿಸ್ಥಿತಿಗಳ ಬಗ್ಗೆ ಆರ್‌ಎಕೆ ಪೊಲೀಸರು ಅರೇಬಿಕ್, ಇಂಗ್ಲಿಷ್ ಮತ್ತು ಉರ್ದು ಸೇರಿದಂತೆ 16 ಭಾಷೆಗಳಲ್ಲಿ ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.
ಮಳೆಯಿಂದಾಗಿ, ರಸ್ತೆಯಲ್ಲಿ ನೆರೆ ನೀರು ಹರಿಯುತ್ತಿದ್ದು, ಅಲ್ ಶುಹಾದಾ ರಸ್ತೆ, ಮತ್ತು ಜೆಬೆಲ್ ಜೈಸ್‌ಗೆ ಹೋಗುವ ರಸ್ತೆಗಳು ಮತ್ತು ಸಕ್ರ್ ಪಾರ್ಕ್‌ಗೆ ಹತ್ತಿರವಿರುವ ಅಲ್ ಖರಣ್ ಸೇತುವೆಯ ಮೂಲಕ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ತಡೆಹಿಡಿಯಲಾಗಿದೆ.
ಅಲ್ ಫಿಲಾಯಾ ವಸತಿ ಪ್ರದೇಶ ಮತ್ತು ಅಲ್ ಫಹ್ಲೀನ್ ಪ್ರದೇಶದ ವಾದಿ ನಾಕ್ಬ್ ರಸ್ತೆಗಳನ್ನು ಭಾಗಶಃ ಮುಚ್ಚಲಾಗಿದೆ.