ನವದೆಹಲಿ: ಸಂವಿಧಾನದ 370ನೇ ವಿಧಿಯನ್ನು ಕಾಶ್ಮೀರದಿಂದ ತೆರವುಗೊಳಿಸಿದ ನಂತರ ಕಾಶ್ಮೀರದ ಎಲ್ಲಾ ಕಡೆಗಳಲ್ಲಿ ಸಂಪೂರ್ಣ ಅಂತರ್ಜಾಲ ಸೌಲಭ್ಯ ತಡೆ ಹಿಡಿಯಲಾಗಿತ್ತು. ತಿಂಗಳುಗಳ ನಂತರ ಪೋಸ್ಟ್ಪೇಡ್ ಸಿಮ್ಗಳಿಗೆ ಮಾತ್ರ ದೂರವಾಣಿ ಸಂಪರ್ಕ ಕಲ್ಪಿಲಾಯಿತು. ಅದಾದ ನಂತರ ಕೆಲ ಪ್ರದೇಶಗಳಲ್ಲಿ ಮಾತ್ರ ಅಂತರ್ಜಾಲ ಸೌಲಭ್ಯ ನೀಡಲಾಗಿದೆ.
ಇದೀಗ ಈ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ತರ ಆದೇಶ ಹೊರಡಿಸಿದ್ದು, ಸಂಪೂರ್ಣ ಅಂತರ್ಜಾಲ ಸೌಲಭ್ಯ ನೀಡುವಂತೆ ಸೂಚಿಸಿದೆ. ಜತೆಗೆ ಕಾಶ್ಮೀರ ಭೇಟಿಗೆ ಇರುವ ನಿರ್ಬಂಧಗಳನ್ನು ಏಳು ದಿನಗಳೊಳಗೆ ತೆರವುಗೊಳಿಸುವಂತೆ ತಿಳಿಸಿದೆ.
ಅಂತರ್ಜಾಲ ಸೌಲಭ್ಯ ಪಡೆಯುವುದು ಸಾಂವಿಧಾನಿಕ ಹಕ್ಕು. ಇದರಿಂದ ಯಾರೂ ವಂಚಿತರಾಗಬಾರದು ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್ ಕಾಶ್ಮೀರದ ಎಲ್ಲಾ ಕಡೆ ಅಂತರ್ಜಾಲ ಸೌಲಭ್ಯ ಕಲ್ಪಿಸುವಂತೆ ಆದೇಶಿಸಿದೆ.
ಜತೆಗೆ ಏಳು ದಿನಗಳ ಒಳಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹೇರಿರುವ ನಿರ್ಬಂಧಗಳನ್ನು ತೆರವುಗೊಳಿಸಿ ಎಲ್ಲಾ ಸರ್ಕಾರಿ ಆದೇಶಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವಂತೆ ಹೇಳಿದೆ. ಈ ಮೂಲಕ ಸರ್ಕಾರದ ಆದೇಶಗಳನ್ನು ಸುಪ್ರೀಂ ಕೋರ್ಟ್ನಲ್ಲಿ ಜನ ಪ್ರಶ್ನಿಸುವುದಾದರೆ ಅವಕಾಶ ಕಲ್ಪಿಸಿಕೊಡುವಂತೆ ತಿಳಿಸಿದೆ.
ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಸೇರಿದಂತೆ ಹಲವರು ಸಲ್ಲಿಸಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಸಂವಿಧಾನದ 370ನೇ ವಿಧಿ ತೆರವು, ಕಾಶ್ಮೀರದಲ್ಲಿ ಹೇರಿರುವ ನಿರ್ಬಂಧ ಎಲ್ಲವನ್ನೂ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ.
ನ್ಯಾಯಮೂರ್ತಿ ಎನ್ವಿ ರಮಣ, ಆರ್ ಸುಭಾಶ್ ರೆಡ್ಡಿ ಮತ್ತು ಬಿಆರ್ ಗವಾಯ್ ಅವರ ಪೀಠ ನವೆಂಬರ್ 27ರಂದು ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿತ್ತು.
ರಾಜಕೀಯ ನಿರ್ಧಾಗಳಿಗೆ ಸಂಬಂಧಿಸಿದಂತೆ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದ ಸುಪ್ರೀಂ ಕೋರ್ಟ್ ದೇಶದ ಭದ್ರತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯ ಎರಡನ್ನೂ ಸಮತೋಲನದಿಂದ ಕಾದುಕೊಳ್ಳುವುದು ನ್ಯಾಯಾಂಗದ ಕರ್ತವ್ಯ ಎಂದು ಅಭಿಪ್ರಾಯಪಟ್ಟಿದೆ.
“ಯಾವುದೇ ಕಾರಣಕ್ಕೂ ಗಡಿಯಾರದ ಮುಳ್ಳು ಒಂದು ದಿಕ್ಕಿನಡೆಗೆ ವಿಪರೀತವಾಗಿ ಚಲಿಸಲು ಅವಕಾಶ ನೀಡುವುದಿಲ್ಲ. ನಾವು ಇರುವುದು ಜನಸಾಮಾನ್ಯರ ಸ್ವಾತಂತ್ರ್ಯ ಮತ್ತು ಭದ್ರತೆಯನ್ನು ಕಾಪಾಡಲು ಮತ್ತು ಅದು ಮಾತ್ರ ನಮಗೆ ಮುಖ್ಯ,” ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಆರ್ಟಿಕಲ್ 19 (1)ರ ಅಡಿಯಲ್ಲಿ ಅಂತರ್ಜಾಲ ಬಳಕೆಯ ಸ್ವಾತಂತ್ರ್ಯ ಮೂಲಭೂತವಾದ ಹಕ್ಕು. ತೀರಾ ಅನಿವಾರ್ಯ ಸ್ಥಿತಿಗಳಲ್ಲಿ ಮಾತ್ರ ಅಂತರ್ಜಾಲವನ್ನು ಮೊಟಕುಗೊಳಿಸಬಹುದೇ ವಿನಃ, ಎಲ್ಲಾ ಸ್ಥಿತಿಗಳಲ್ಲೂ ಅನ್ವಯಿಸುವುದು ತಪ್ಪು ಎಂದು ಸುಪ್ರೀಂ ಕೇಂದ್ರಕ್ಕೆ ಚಾಟಿ ಬೀಸಿದೆ.
ನವೆಂಬರ್ 21ರಂದು ನಡೆದ ವಿಚಾರಣೆಯಲ್ಲಿ ಅಂತರ್ಜಾಲ ಸೇವೆ ಮೊಟಕುಗೊಳಿಸಿದ ನಿರ್ಧಾರವನ್ನು ಕೇಂದ್ರ ಸಮರ್ಥಿಸಿಕೊಂಡಿತ್ತು. ಮುಂಜಾಗರೂಕತೆಯಿಂದ ಕೇಂದ್ರ ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತರ್ಜಾಲ ಸೇವೆ ತಡೆ ಹಿಡಿದಿದೆ. ಇದರಿಂದ ಇದುವರೆಗೂ ಒಂದೇ ಒಂದು ವ್ಯಕ್ತಿಯೂ ಪ್ರಾಣ ಕಳೆದುಕೊಂಡಿಲ್ಲ ಮತ್ತು ಭದ್ರತಾ ಪಡೆಗಳಿಂದ ಒಂದೇ ಒಂದು ಗುಂಡು ಕೂಡ ಹಾರಿಲ್ಲ ಎಂದು ಕೇಂದ್ರ ಸಮರ್ಥಿಸಿಕೊಂಡಿತ್ತು.