janadhvani

Kannada Online News Paper

ವಿಭಜನೆ ಬ್ರಿಟಿಷರ ಕನಸಾಗಿತ್ತು, ಆದರೆ ಅರ್ಧ ಮಾತ್ರ ಯಶಸ್ವಿಯಾಗಿದ್ದರು – ಅರವಿಂದ ಚೊಕ್ಕಾಡಿ

ಕಾವಳಕಟ್ಟೆ: ವಿಭಜನೆ ಬ್ರಿಟೀಷರ ಕನಸಾಗಿತ್ತು. 1880ರಲ್ಲಿ ಬ್ರಿಟಿಷ್ ಸರ್ಕಾರದಿಂದ ವೈಸರಾಯ್‌ಗೆ ಒಂದು ಪತ್ರ ಬಂದಿತ್ತು. ಹಿಂದುಗಳು ಮತ್ತು ಮುಸಲ್ಮಾನರನ್ನು ಪರಸ್ಪರ ವಿಭಜಿಸಬೇಕು ಎಂಬುದಾಗಿತ್ತು ಪತ್ರದ ಸಾರಾಂಶ. ಈ ಕುತಂತ್ರ ದಲ್ಲಿ ಫಿಫ್ಟಿ ಪರ್ಸೆಂಟ್ ಮಾತ್ರವೇ ಅವರು ಯಶಸ್ವಿಯಾಗಿದ್ದರು ಕಾರಣ ಗಾಂಧೀಜಿಯವರ ನಿಷ್ಠಾವಂತ ಸಹವರ್ತಿ ಅಬ್ದುಲ್ ಗಫಾರ್ ಖಾನ್ ಯಾವ ಕಾರಣಕ್ಕೂ ದೇಶ ವಿಭಜನೆಗೆ ಹೋಗಬಾರದು ಎಂದು ಹೇಳಿದ್ದರು.

ಕರ್ನಾಟಕದವರೇ ಆದ ಎಸ್ ಕೆ ಕರೀಂಖಾನ್ ಮುಸ್ಲಿಂ ಲೀಗ್ ಜೊತೆ ಹೋಗಬೇಡಿ ಎಂದು ಮುಸ್ಲಿಮರನ್ನು ತಡೆದು ನಿಲ್ಲಿಸಿದ್ದರು ಆದ್ದರಿಂದಲೇ ಬ್ರಿಟಿಷರ ಪ್ರಯತ್ನ ಫಿಫ್ಟಿ ಪರ್ಸೆಂಟ್ ಸೋತಿತ್ತು ಎಂದು ಖ್ಯಾತ ಸಾಹಿತಿ, ಅಂಕಣಗಾರ ಅರವಿಂದ್ ಚೊಕ್ಕಾಡಿ ಹೇಳಿದರು.

ಕಾವಳಕಟ್ಟೆಯ ಅಲ್ ಖಾದಿಸ ಕಾಲೇಜ್ ಆಫ್ ಇಸ್ಲಾಮಿಕ್ ಸೈನ್ಸ್ ವಿದ್ಯಾರ್ಥಿಗಳ ಸಾಹಿತ್ಯ ಸ್ಪರ್ಧೆ ‘ಚಮಕ್ 2020’ ಉದ್ಘಾಟಿಸುತ್ತಾ ಅವರು ಮಾತನಾಡುತ್ತಿದ್ದರು. ಬುದ್ದಿವಂತಿಕೆಗಿಂತ ಪ್ರತಿಭಾವಂತಿಕೆ ಮುಖ್ಯ. ಬುದ್ಧಿವಂತ ತರಗತಿಯಲ್ಲಿ ಉನ್ನತ ಅಂಕ ಗಳಿಸುತ್ತಾರೆ ಆದರೆ ಒಮ್ಮೆ ಅಂಕ ಕಡಿಮೆಯಾದರೆ ಹತಾಶರಾಗುತ್ತಾರೆ. ಅಂತಹವರೇ ಆತ್ಮಹತ್ಯೆ ಮಾಡಿಕೊಳ್ಳುವುದು. ಆದರೆ ಪ್ರತಿಭಾವಂತರು ಹಾಗಲ್ಲ ಕಲಿಯುವುದಕ್ಕಿಂತ ಹೆಚ್ಚಾಗಿ ತಾವೇ ಯೋಚಿಸುತ್ತಾರೆ ಸೋಲನ್ನು ಅನುಭವಿಸಲು ತಯಾರಿರುತ್ತಾರೆ.

ಥಾಮಸ್ ಅಲ್ವಾ ಎಡಿಸನ್ ಇದಕ್ಕೊಂದು ಉದಾಹರಣೆ. ಶಾಲೆಯಿಂದ ದಡ್ಡ ಎಂಬ ಕಾರಣಕ್ಕೆ ಹೊರ ಹಾಕಲ್ಪಟ್ಟವರೂ ತನ್ನ ತೊಂಬತ್ತೊಂಬತ್ತು ಪ್ರಯೋಗಗಳು ವಿಫಲಗೊಂಡರೂ ನೂರನೇ ಪ್ರಯೋಗದಲ್ಲಿ ಯಶಸ್ವಿಯಾಗಿ ಜಗತ್ತೇ ಮೆಚ್ಚುವಂತಹ ಖ್ಯಾತಿಯನ್ನು ಪಡೆದರು. ಆದ್ದರಿಂದಲೇ ಪ್ರತಿಭಾವಂತರಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅಲ್ ಖಾದಿಸ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್ ಪಿ ಹಂಝ ಸಖಾಫಿ ಬಂಟ್ವಾಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಡಿಗ್ರಿ ಕಾಲೇಜು ಅಧ್ಯಾಪಕರಾದ ಹಾರಿಸ್ ಬಾಂಬಿಲ ಉದ್ಘಾಟಕರ ಪರಿಚಯ ಮಾಡಿಕೊಟ್ಟರು. ಜನಾಬ್ ಇಸ್ಮಾಯಿಲ್ ಬಿಸಿ ರೋಡ್, ಅಬ್ದುರ್ರಝಾಖ್ ಸಖಾಫಿ ಮಡಂತ್ಯಾರು, ಸಿದ್ದೀಕ್ ಸರ್ ಜಾರಿಗೆಬೈಲು, ಹಾಫಿಲ್ ಮುಝಮ್ಮಿಲ್ ಬನ್ನೂರು, ಮುಬಶ್ಶಿರ್ ಮುಈನಿ, ಶುಕ್ರುಲ್ಲಾಹ್ ಹಲೀಮಿ, ಶಫೀಕ್ ಸಖಾಫಿ, ಸಾಜಿದ್ ಸಖಾಫಿ, ಅತ್ವಾವುಲ್ಲಾ ರಝ್ವಿ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಂಶುಪಾಲರಾದ ಹಾಫಿಲ್ ಸುಫ್ಯಾನ್ ಸಖಾಫಿ ಸ್ವಾಗತಿಸಿ ಜುನೈದ್ ಸರ್ ತುರ್ಕಳಿಕೆ ವಂದಿಸಿದರು.

error: Content is protected !! Not allowed copy content from janadhvani.com