janadhvani

Kannada Online News Paper

ಜಿಎನ್‌ಯು ಘಟನೆ: ತನಿಖೆ ನಡೆಸಲು ಮೂರು ತಂಡಗಳ ರಚನೆ

ನವದೆಹಲಿ, ಜ.6-ದೆಹಲಿಯ ಜವಾಹರ್‌ಲಾಲ್ ನಹರೂ ವಿಶ್ವವಿದ್ಯಾಲಯಕ್ಕೆ ಮುಖಕ್ಕೆ ಗವಸು ಹಾಕಿಕೊಂಡು ಒಳನುಗ್ಗಿದ ದುಷ್ಕರ್ಮಿಗಳು ಪೀಠೋಪಕರಣಗಳನ್ನು ಧ್ವಂಸಗೊಳಿಸಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ಕುರಿತು ತನಿಖೆ ನಡೆಸಲು ದೆಹಲಿ ಅಪರಾಧ ವಿಭಾಗದ ಪೊಲೀಸರು ಮೂರು ತಂಡಗಳನ್ನು ರಚಿಸಿದ್ದಾರೆ.

ಈ ಘಟನೆ ಖಂಡಿಸಿ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿರುವ ಬೆನ್ನಲ್ಲೇ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಜಿಎನ್‌ಯುನಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ತೆಗೆದುಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

ಘಟನೆಯಲ್ಲಿ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಐಶಿ ಘೋಷ್ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಸೇರಿದಂತೆ 30 ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ 50 ಮಂದಿ ಗೂಂಡಾಗಳು ನಿನ್ನೆ ಸಂಜೆ 6.30 ರ ವೇಳೆಗೆ ವಿವಿ ಆವರಣದೊಳಕ್ಕೆ ನುಗ್ಗಿ ವಿದ್ಯಾರ್ಥಿಗಳ ರಕ್ಷಣೆಗೆ ಬಂದ ಪ್ರೊಫೆಸರ್‌ಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಮಧ್ಯಾಹ್ನದಿಂದಲೂ ಪೊಲೀಸರು ವಿವಿ ಆವರಣದಲ್ಲೇ ಇದ್ದರೂ ಏನೂ ಪ್ರಯೋನವಾಗಿಲ್ಲ ಎಂದು ದೂರಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಎಲ್ಲ ಆಯಾಮಗಳಿಂದಲೂ ತನಿಖೆ ಕೈಗೊಂಡಿದ್ದು, ಸಾಮಾಜಿಕ ಜಾಲ ತಾಣಗಳ ದೃಶ್ಯಗಳು, ಸಿಸಿಟಿವಿ ದೃಶ್ಯಗಳು ಪರಿಶೀಲಿಸಿ ದಾಳಿಕೋರರ ಗುರುತನ್ನು ಪತ್ತೆಹಚ್ಚುವ ಕಾರ್ಯ ನಡೆದಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ದೇವೇಂದರ್ ಆರ್ಯ ತಿಳಿಸಿದ್ದಾರೆ. ಹಿಂಸಾಚಾರದ ಸುದ್ದಿ ತಿಳಿಯುತ್ತಿದ್ದಂತೆ ತಕ್ಷಣ ಪೊಲೀಸರು ವಿವಿಗೆ ದೌಡಾಯಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲಾಯಿತು ಎಂದು ಅವರು ಸ್ಪಷ್ಟಪಡಿಸಿದರು.

ಇದೇ ವೇಳೆ ಜಿಎನ್‌ಯು ವಿವಿಯ ರಿಜಿಸ್ಟ್ರಾರ್ ಮತ್ತು ಉಪಕುಲತಿ ಲೆಫ್ಷಿನೆಂಟ್ ಅನಿಲ್ ಬೈಜಾಲ್ ಅವರನ್ನು ಭೇಟಿ ಮಾಡಿ ದಾಳಿಯ ನಂತರ ಪರಿಸ್ಥಿತಿ ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದ್ದಾರೆ. ಪೊಲಿಸರು ವಿದ್ಯಾರ್ಥಿಗಳ ಜತೆ ಮಾತುಕತೆ ನಡೆಸಿ ಸಾಕ್ಷಿಗಳನ್ನು ಕಲೆ ಹಾಕುತ್ತಿರುವ ವಿಷಯವನ್ನು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ ನಿನ್ನೆ ನಡೆದ ಘಟನೆಯಿಂದ ಭಯಭೀತರಾಗಿರುವ ವಿದ್ಯಾರ್ಥಿಗಳು ವಿವಿಯನ್ನು ತೊರೆಯಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ಸಾವಿರ ಎಕರೆ ವ್ಯಾಪ್ತಿಯಲ್ಲಿರುವ ವಿಶ್ವವಿದ್ಯಾಲಯದ ಅವರಣದಲ್ಲಿ ಪೊಲೀಸರು ಪರೇಡ್ ಮಾಡಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಲು ಪ್ರಯತ್ನಿಸಿದ್ದಾರೆ. ಆದರೆ ಆಕ್ರೋಶಗೊಂಡ ವಿದ್ಯಾರ್ಥಿಗಳು ಪೊಲೀಸರೇ ವಾಪಸ್ ಹೋಗಿ ಎಂದು ಘೋಷಣೆ ಕೂಗಿದರು.

ಕೇಜ್ರಿವಾಲ್ ಸಭೆ
ಜೆಎನ್‌ಯುನಲ್ಲಿ ನಡೆದ ಹಿಂಸಾಚಾರ ಕುರಿತಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೆಜ್ರಿವಾಲ್ ತಮ್ಮ ಪಕ್ಷದ ಮುಖಂಡರ ಸಭೆ ಕರೆದು ಪರಿಸ್ಥಿತಿ ಅವಲೋಕಿಸಿದರು.

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಈ ಘಟನೆ ಕುರಿತು ತೀವ್ರ ಆಘಾತ ವ್ಯಕ್ತಪಡಿಸಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯ ಹಿಂಸೆಗೆ ಅವಕಾಶ ಇಲ್ಲ. ಸಂಬಂಧಪಟ್ಟವರು ವಿಶ್ವವಿದ್ಯಾಲಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಘಟನೆಗೆ ಕಾರಣರಾದವರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೂ ಈ ಘಟನೆಯನ್ನು ಖಂಡಿಸಿದ್ದಾರೆ. ಈ ಘಟನೆಗಳ ಹಿಂದೆ ಸಂಘ ಪರಿವಾರದ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆ
ಜಿಎನ್‌ಯು ವಿವಿಯಲ್ಲಿ ನಡೆದ ಘಟನೆ ದೇಶಾದ್ಯಂತ ವಿವಾದದ ಬಿರುಗಾಳಿ ಎಬ್ಬಿಸಿದೆ. ಈ ಹಲ್ಲೆಯಿಂದ ಆಕ್ರೋಶಗೊಂಡಿರುವ ವಿದ್ಯಾರ್ಥಿಗಳು ದೇಶದ ವಿವಿಧ ಭಾಗಗಳಲ್ಲಿ ಉಗ್ರ ಪ್ರತಿಭಟನೆ ನಡೆಸಿ ವಿವಿಯಲ್ಲಿ ವಿದ್ಯಾರ್ಥಿಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು.ಕೂಡಲೇ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದರು.

ಮುಂಬೈ, ಹೈದರಾಬಾದ್, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪ್ರತಿಭಟನೆ ನಡೆಸಿದರು. ಈ ಹಿಂಸಾಚಾರದ ಹಿಂದೆ ಎಬಿವಿಪಿ ಸಂಘಟನೆಯ ಕಾರ್ಯಕರ್ತರ ಕೈವಾಡವಿದೆ ಎಂದು ಜೆಎನ್‌ಯು ವಿದ್ಯಾರ್ಥಿಗಳ ಸಂಘ ಆರೋಪಿಸಿದೆ, ಜೆಎನ್‌ಯು ವಿದ್ಯಾರ್ಥಿಗಳು ನಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಎಬಿವಿಪಿ ಪ್ರತಿ ದೂರು ದಾಖಲಿಸಿದೆ.

ಜಿಎನ್‌ಯು ವಿವಿಯಲ್ಲಿ ಹಿಂಸಾಚಾರ ಸಂಭವಿಸಿರುವ ಹಿನ್ನೆಲೆಯಲ್ಲಿ ನೆರೆಯ ಉತ್ತರ ಪ್ರದೇಶದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಅಲಿಘಡ ವಿಶ್ವವಿದ್ಯಾಲಯವನ್ನು ಅನಿರ್ದಿಷ್ಟಾವಧಿಯವರೆಗೆ ಬಂದ್ ಮಾಡಲಾಗಿದೆ. ಇಂದಿನಿಂದ ಮತ್ತೆ ಕಾರ್ಯಾರಂಭವಾಗಬೇಕಿತ್ತು. ಜಿಎನ್‌ಯುನಲ್ಲಿ ನಡೆದ ಘಟನೆಯಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ.

error: Content is protected !! Not allowed copy content from janadhvani.com