ಮಂಗಳೂರು,ಡಿ.23: ಮಂಗಳೂರು ಗೋಲಿಬಾರ್ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿರುವುದು ಸರಿಯಲ್ಲ. ಇದು ಹೈಕೋರ್ಟ್ ನ್ಯಾಯಾಧೀಶರಿಂದಲೇ ತನಿಖೆಯಾಗಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಂದು ಬಂದಿಳಿದ ಅವರು, ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಫೈರಿಂಗ್ ಮಾಡಿದ್ದು ಪೊಲೀಸರು. ಸಿಐಡಿಯಲ್ಲಿ ಇರುವುದು ಪೊಲೀಸರೇ. ಪೊಲೀಸರ ಬಗ್ಗೆ ಪೊಲೀಸ್ ಇಲಾಖೆಯಿಂದಲೇ ತನಿಖೆ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದ ಅವರು ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ಈ ಬಗ್ಗೆ ತನಿಖೆ ಆಗಬೇಕು. ಇದನ್ನು ಅಸೆಂಬ್ಲಿಯಲ್ಲೂ ಒತ್ತಾಯಿಸಲಾಗುವುದು ಎಂದರು.
ಸಿಎಂ ಸುಳ್ಳೆ ಹೇಳುತ್ತಾರೆ. ಸತ್ಯ ಹೇಳಲು ಅವರಿಗೆ ಗೊತ್ತಿಲ್ಲ. ಅವರು ಪೊಲೀಸ್ ನವರಿಗೆ ಸರ್ಟಿಫಿಕೇಟ್ ನೀಡುತ್ತಾರೆ. ಅವರು ಪ್ರಮುಖ ಸಾಕ್ಷಿಯೇ ಎಂದು ಪ್ರಶ್ನಿಸಿದರು.
ದಕ್ಷಿಣ ಕನ್ನಡ, ಉಡುಪಿಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರೇ ಸಿಎಂ. ಅವರ ರಿಮೋಟ್ ಕಂಟ್ರೋಲ್ ನಲ್ಲಿ ರಾಜ್ಯ ಮುಖ್ಯಮಂತ್ರಿ ಇದ್ದಾರೆ. ಪ್ರಚೋದನಕಾರಿ ಭಾಷಣ ಮಾಡುವ ಅವರ ವಿರುದ್ಧ ಮೊದಲು ಪ್ರಕರಣ ದಾಖಲಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.
ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟನೆ ಮಾಡುವವರು ಪಂಕ್ಚರ್ ಹಾಕುವವರು, ಅಕ್ಷರ ಗೊತ್ತಿಲ್ಲದವರು ಎಂಬ ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಡವರು, ದಲಿತರ ಬಗ್ಗೆ ತೇಜಸ್ವಿಗೆ ಯಾವುದೇ ಕಾಳಜಿ ಇಲ್ಲ. ಅವರು ಆರೆಸ್ಸೆಸ್ನವರು, ಬಡತನ ಕೂಲಿ ಮಾಡುವವರ ಬಗ್ಗೆ ಅವರಿಗೆ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾಜಿ ಸಚಿವರಾದ ಎಂ.ಬಿ.ಪಾಟೀಲ್, ಝಮೀರ್ ಅಹ್ಮದ್, ಯು.ಟಿ.ಖಾದರ್, ಶಾಸಕ ಐವನ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.