janadhvani

Kannada Online News Paper

ಸೌದಿ ಅರಮ್ಕೊ ಸಂಸ್ಕರಣಾ ಘಟಕದ ಮೇಲೆ ಡ್ರೋನ್ ದಾಳಿ

ರಿಯಾದ್.ಸೆ,14: ಸೌದಿ ಅರೇಬಿಯಾದ ಪೂರ್ವ ಭಾಗದ ತೈಲ ನಿಕ್ಷೇಪ ಮತ್ತು ಸೌದಿ ಅರಮ್ಕೊ ಸಂಸ್ಕರಣಾ ಘಟಕದ ಮೇಲೆ ಡ್ರೋನ್ ದಾಳಿ ನಡೆಸಿದ ಘಟನೆ ಶನಿವಾರ ನಡೆದಿದೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.

ಇಂದು ನಸುಕಿನ ಜಾವ ಈ ಘಟನೆ ನಡೆದಿದ್ದು ಬೃಹತ್ ಬೆಂಕಿ ಕಾಣಿಸಿಕೊಂಡಿದೆ. ಈ ಹಿಂದೆ ಯೆಮನ್ ನ ಹೌತಿ ಬಂಡುಕೋರರು ಡ್ರೋನ್ ದಾಳಿ ನಡೆಸಿದ್ದರು. ದಾಳಿಯ ಹೊಣೆಯನ್ನು ಇದುವರೆಗೆ ಯಾವುದೂ ಹೊತ್ತುಕೊಂಡಿಲ್ಲ.

ಬುಖ್ಯಾಖ್ ಮತ್ತು ಖುರೈಸ್ ತೈಲ ಘಟಕಗಳ ಸಂಸ್ಕರಣಾ ಘಟಕಗಳ ಮೇಲೆ ನಡೆದ ದಾಳಿಯಲ್ಲಿ ಯಾರಿಗಾದರೂ ಹಾನಿಯುಂಟಾಗಿದೆಯೇ ಎಂಬ ಬಗ್ಗೆ ಇದುವರೆಗೆ ಮಾಹಿತಿ ಸಿಕ್ಕಿಲ್ಲ. ಆನ್ ಲೈನ್ ವಿಡಿಯೊದಲ್ಲಿ ಬುಖ್ಯಾಖ್ ನಲ್ಲಿ ಹಿಂದುಗಡೆ ಬಂದೂಕುದಾಳಿಯಾದ ಶಬ್ದ ಕೇಳುತ್ತಿದೆ. ಆಕಾಶದೆತ್ತರಕ್ಕೆ ಹೊಗೆ ಕಾಣಿಸಿಕೊಂಡಿದೆ. ಈ ಸ್ಥಳವನ್ನು ಡ್ರೋನ್ ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದ ನಂತರ ಬೆಂಕಿ ಕಾಣಿಸಿಕೊಂಡಿತು ಎಂದು ಆಂತರಿಕ ಸಚಿವಾಲಯ ಹೇಳಿದೆ.

ಸುದ್ದಿಸಂಸ್ಥೆಗೆ ಅರಮ್ಕೊ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಲಿಲ್ಲ.ಬುಕ್ಯಾಕ್‌ನಲ್ಲಿರುವ ಅಬ್ಕೈಕ್ ತೈಲ ಸಂಸ್ಕರಣಾ ಘಟಕವುವಿಶ್ವದ ಅತಿದೊಡ್ಡ ಕಚ್ಚಾ ತೈಲ ಸ್ಥಿರೀಕರಣ ಘಟಕವಾಗಿದೆ. ಇಲ್ಲಿ ಕಚ್ಚಾ ತೈಲವನ್ನು ಸಿಹಿ ಕಚ್ಚಾ ತೈಲ ಆಗಿ ಪರಿವರ್ತಿಸಿ ನಂತರ ಪರ್ಷಿಯನ್ ಕೊಲ್ಲಿ ಮತ್ತು ಕೆಂಪು ಸಮುದ್ರದ ಟ್ರಾನ್ಸ್‌ಶಿಪ್ಮೆಂಟ್ ಪಾಯಿಂಟ್‌ಗಳಿಗೆ ಸಾಗಿಸುತ್ತದೆ. ಇಲ್ಲಿ ದಿನಕ್ಕೆ 7 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸಲಾಗುತ್ತಿದೆ ಎಂದು ಅಂದಾಜಿಸಲಾಗಿದೆ.

ಈ ಘಟಕದ ಮೇಲೆ ಹಿಂದೆ ಉಗ್ರಗಾಮಿಗಳು ದಾಳಿ ನಡೆಸಲು ಸಂಚು ರೂಪಿಸಿದ್ದರು. 2006ರಲ್ಲಿ ಆಲ್ ಖೈದಾ ಆತ್ಮಹತ್ಯಾ ದಾಳಿಕೋರ ತೈಲ ಸಂಕೀರ್ಣದ ಮೇಲೆ ದಾಳಿ ನಡೆಸಲು ನೋಡಿ ವಿಫಲನಾಗಿದ್ದ.
ದಾಳಿ ಹಿನ್ನಲೆಯಲ್ಲಿ ಈ ವಾರಾಂತ್ಯ ತೈಲ ಮಾರುಕಟ್ಟೆ ರಜೆ ಇರುವುದರಿಂದ ತಕ್ಷಣಕ್ಕೆ ತೈಲ ಬೆಲೆ ಮೇಲೆ ಪರಿಣಾಮ ಬೀರಲಿಕ್ಕಿಲ್ಲ. ಬ್ರೆಂಟ್ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 60 ಡಾಲರ್ ಗಿಂತ ಹೆಚ್ಚಾಗಿದೆ.

ಸೌದಿ ಅರೇಬಿಯಾ ರಾಜಧಾನಿ ರಿಯಾದ್ ನಿಂದ ಈಶಾನ್ಯಕ್ಕೆ ಬುಖ್ಯಾಖ್ 330 ಕಿಲೋ ಮೀಟರ್ ದೂರದಲ್ಲಿದೆ.

error: Content is protected !! Not allowed copy content from janadhvani.com