ರಿಯಾದ್: ಸೌದಿ ಅರೇಬಿಯಾದಲ್ಲಿ 35 ವರ್ಷ ಕಳೆದವರಿಗೆ ಉದ್ಯೋಗ ನಿಷೇಧಿಸಲಾಗಿದೆ ಎನ್ನುವುದು ಸುಳ್ಳು ಸುದ್ದಿ ಎಂದು ಸೌದಿ ಅಧಿಕಾರಿಗಳು ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗೆಗಿನ ಪ್ರಚಾರ ಬೆಳಕಿಗೆ ಬಂದ ನಂತರ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿ ಹರಡುತ್ತಿದ್ದಂತೆ, ಸ್ಥಳೀಯರಲ್ಲಿ ಹೆಚ್ಚಿನ ಆತಂಕ ಉಂಟಾಗಿತ್ತು.
ಈ ಸುದ್ದಿ ನಕಲಿ ಎಂದು ಸೌದಿ ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯದ ವಕ್ತಾರ ಖಾಲಿದ್ ಅಬಾ ಖೈಲ್ ಹೇಳಿದ್ದು, ಸೋಶಿಯಲ್ ಮೀಡಿಯಾ ಮೂಲಕ ಪ್ರಸಾರವಾಗುತ್ತಿರುವ ಈ ನಕಲಿ ಸುದ್ದಿ ಸ್ಥಳೀಯರಲ್ಲಿ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸೌದಿ ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ವಿವರಣೆಯನ್ನು ನೀಡಿದೆ. ಸಾರ್ವಜನಿಕ ವಲಯದಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಯಾವುದೇ ನಿಷೇಧವಿಲ್ಲ ಎಂದು ಸೌದಿ ಅರೇಬಿಯಾದ ನಾಗರಿಕ ಸೇವಾ ಸಚಿವಾಲಯ ಪ್ರಕಟಿಸಿದೆ.
ಕೆಲಸಕ್ಕೆ ನೇಮಿಸಿಕೊಳ್ಳಲು ವಯಸ್ಸಿನ ಮಿತಿಯನ್ನು ನಿಗದಿಪಡಿಸುವ ಕಾನೂನು ಸೌದಿಯಲ್ಲಿಲ್ಲ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಕೂಡ ಹೇಳಿದೆ. ಅದೇ ಸಮಯದಲ್ಲಿ, ಅಪ್ರಾಪ್ತ ವಯಸ್ಕರನ್ನು ಉದ್ಯೋಗಕ್ಕೆ ನೇಮಿಸುವುದು ಮತ್ತು ಶೋಷಣೆಗೆ ಒಳಪಡಿಸುವುದಕ್ಕೆ ಕಾನೂನು ನಿಷೇಧವಿದೆ.
Very good message thanks for jandvani