ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕನಿಷ್ಠ ಜ್ಞಾನವೂ ಇಲ್ಲ. ಅವರಿಗೆ ಆದಾಯ ತೆರಿಗೆ (ಐಟಿ) ಇಲಾಖೆ ಮತ್ತು ಜಾರಿ ನಿರ್ದೇಶನಾಲಯ(ಇ.ಡಿ.) ಯಾರ ಅಧೀನದಲ್ಲಿವೆ ಎಂಬುದು ಗೊತ್ತಿದೆಯೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯನವರಿಂದಲೇ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಜೈಲಿಗೆ ಹೋದರು ಎಂದು ಭಾನುವಾರ ಕಟೀಲ್ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ಕೇಂದ್ರ ಸರ್ಕಾರದ ಅಧೀನದಲ್ಲಿವೆ. ಈ ಕುರಿತು ಅವರಿಗೆ ತಿಳಿದಿಲ್ಲವೇ? ಇಂತಹವರನ್ನು ಯಾಕೆ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೋ? ಹುಳಿ ಹಿಂಡುವುದು, ಬೆಂಕಿ ಹಚ್ಚುವುದೇ ಅವರ ಕೆಲಸ ಎಂದು ವಾಗ್ದಾಳಿ ನಡೆಸಿದರು.
ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದ ಮೇಲೆ ವರ್ಗಾವಣೆ ಮಾಡುವುದು. ದ್ವೇಷದ ರಾಜಕಾರಣ ಮಾಡುವುದು ಅಷ್ಟೇ ಅವರ ಕೆಲಸವಾಗಿದೆ. ಅಧಿಕಾರ ವಹಿಸಿಕೊಂಡ ಮೊದಲ ದಿನ ದ್ವೇಷ ರಾಜಕಾರಣ ಮಾಡುವುದಿಲ್ಲ ಎಂದಿದ್ದರು. ಆದರೆ, ಈಗ ಅವರು ಸಂಪೂರ್ಣವಾಗಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಪ್ರವಾಹದಿಂದಾಗಿ ಉತ್ತರ ಕರ್ನಾಟಕದಲ್ಲಿ ಲಕ್ಷಾಂತರ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ, ಅವರಿಗೆ ಇದುವರೆಗೆ ಪರಿಹಾರವನ್ನು ಕೊಟ್ಟಿಲ್ಲ. ಅವರಿಗೆ ಜನರ ಬಗ್ಗೆ ಕಾಳಜಿಯಿಲ್ಲ ಎಂದು ಬಿಎಸ್ವೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಸರ್ಕಾರದ ಅವಧಿಯಲ್ಲಿ ಪ್ರಾರಂಭಿಸಲಾಗಿದ್ದ ಕೃಷಿ ಹೊಂಡ, ಅನ್ನಭಾಗ್ಯ,ಇಂದಿರಾ ಕ್ಯಾಂಟೀನ್ ಬಗ್ಗೆ ತನಿಖೆ ಮಾಡಿ ಅಂತಾರೆ. ಅಕ್ರಮ, ಭ್ರಷ್ಟಾಚಾರ ನಡೆದಿದ್ದರೆ ತನಿಖೆ ಮಾಡಲಿ. ನಾವು ಕಾನೂನಿಗೆ ಅಡ್ಡ ಬರುವುದಿಲ್ಲ. ಆದರೆ ದ್ವೇಷ ಸೇಡಿನಿಂದ ರಾಜಕಾರಣ ಮಾಡಬಾರದು. ದ್ವೇಷದಿಂದ ರಾಜ್ಯದ ಅಭಿವೃದ್ಧಿಯಾಗುವುದಿಲ್ಲ. ರೈತರು ಕೃಷಿ ಹೊಂಡ ಯೋಜನೆಯನ್ನು ಸ್ವಾಗತಿಸಿದ್ದರು. ಈಗ ಯಾರದೋ ಮಾತು ಕೇಳಿ ಅದನ್ನು ತನಿಖೆಗೆ ಕೊಟ್ಟಿದ್ದಾರೆ. ಇಂತಹ ರಾಜಕಾರಣ ಬಹಳ ದಿನ ಉಳಿಯುವುದಿಲ್ಲ. ನಾನು ಐದು ವರ್ಷ ಅಧಿಕಾರ ಮಾಡಿದ್ದೆ. ಆದರೆ, ಯಾರ ಮೇಲೂ ದ್ವೇಷದ ರಾಜಕಾರಣ ಮಾಡಲಿಲ್ಲ. ದ್ವೇಷದ ರಾಜಕಾರಣ ಮಾಡಲೂಬಾರದು ಎಂದು ಬಿಎಸ್ವೈ ತನಿಖೆಗೆ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.