janadhvani

Kannada Online News Paper

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕಿರುಕುಳ- ನಗ್ನಗೊಳಿಸಿ ಚಿತ್ರಹಿಂಸೆ

ಮಂಗಳೂರು: ಇಲ್ಲಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಸ್ಲಿಮ್ ಬೇಟೆ ಮುಂದುವರಿದಿದ್ದು, ಕೊಲ್ಲಿ ರಾಷ್ಟ್ರಗಳಿಂದ ರಜೆ ನಿಮಿತ್ತ ಊರಿಗೆ ಮರಳುವವರಿಗೆ ವಿನಾಕಾರಣ ಚಿತ್ರಹಿಂಸೆ ನೀಡಲಾಗುತ್ತಿದೆ ಎಂಬ ಆರೋಪ ಮತ್ತೆ ಕೇಳಿ ಬಂದಿದೆ. ಸದಾ ಒಂದಲ್ಲೊಂದು ಪ್ರಕರಣಗಳಿಂದ ಸುದ್ದಿಯಾಗುತ್ತಿರುವ ಈ ವಿಮಾನ ನಿಲ್ದಾಣದಲ್ಲಿ, ಕಳೆದ ಕೆಲವು ತಿಂಗಳ ಹಿಂದೆ ವಿದೇಶಕ್ಕೆ ತೆರಳುತ್ತಿದ್ದ ಮುಸ್ಲಿಮ್ ಮಹಿಳೆಯೊಬ್ಬರ ಪಾಸ್ಪೋರ್ಟ್ ನ್ನು ಹಾನಿಗೊಳಿಸಿ ವಿದೇಶ ಪ್ರಯಾಣವನ್ನು ಮೊಟಕು ಗೊಳಿಸಿದ ಅಧಿಕೃತರ ವಿರುದ್ಧ ವ್ಯಾಪಕ ಆಕ್ರೋಶಗಳು ಕೇಳಿಬಂದಿತ್ತು.

ಇದೀಗ ದುಬೈಯಿಂದ ಆಗಮಿಸಿದ ಕಾಸರಗೋಡಿನ ಮುಸ್ಲಿಮ್ ಯುವಕರನ್ನು ತಮ್ಮ ಹೊಟ್ಟೆಯಲ್ಲಿ ಚಿನ್ನವಿದೆ ಎಂದು ಆರೋಪಿಸಿ , ಪೂರ್ಣ ನಗ್ನರನ್ನಾಗಿಸಿ, ವೈದ್ಯ ಪರಿಶೋಧನೆ ಹಾಗೂ ಇನ್ನಿತರ ಎಲ್ಲಾ ತಪಾಸಣೆಯನ್ನು ನಡೆಸಿ ಚಿತ್ರ ಹಿಂಸೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.ತನ್ನ ತಂಗಿಯ ವಿವಾಹ ನಿಮಿತ್ತ ಆಗಮಿಸಿದ ಯುವಕನನ್ನು ಮದುವೆ ಸಮಾರಂಭದಲ್ಲಿ ಭಾಗವಹಿಸದಂತೆ ತಡೆಹಿಡಿದು ಮರುದಿನ ಬಿಡುಗಡೆ ಮಾಡಿದ್ದಾಗಿ ಯುವಕ ಆರೋಪಿಸಿದ್ದು, ಕಾಸರಗೋಡು ಭಾಗದವರು ಮಂಗಳೂರು ವಿಮಾನ ನಿಲ್ದಾಣವನ್ನು ಬಳಸದಂತೆ ಸಾಮಾಜಿಕ ತಾಣದಲ್ಲಿ ವಿನಂತಿಸಿ ಕೊಂಡಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದ ಅಧಿಕೃತರು ಇದಕ್ಕೆ ಸೂಕ್ತ ಪರಿಹಾರವನ್ನು ಕಂಡು ಕೊಳ್ಳಬೇಕಾಗಿದೆ.

ಇಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದರೆ, ಇನ್ನೊಂದು ಕಡೆ ಪ್ರಯಾಣಿಕರ ಹಾಗೂ ವಿಮಾನಗಳ ಸಂಖ್ಯೆ ಇಳಿಮುಖವಾಗುತ್ತಿದೆ. ನೆರೆಯ ಕೇರಳದ ಕಣ್ಣೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾದ ಬಳಿಕ ಈ ಬೆಳವಣಿಗೆ ನಡೆದಿದೆ. ಮಂಗಳೂರು ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ನಿಂದ ಕೇವಲ 150 ಕಿಮೀ. ದೂರದಲ್ಲಿರುವ ಕಣ್ಣೂರಿನಲ್ಲಿ ನೂತನ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ ಆರಂಭಗೊಂಡ ಬಳಿಕ ಮಂಗಳೂರಿನಲ್ಲಿ ವಿದೇಶಿ ಪ್ರಯಾಣಿಕರು ಮಾತ್ರವಲ್ಲದೆ ದೇಶೀಯ ಪ್ರಯಾಣಿಕರ ಸಂಖ್ಯೆ ಕೂಡ ಕುಸಿದಿದೆ. 2018 ಜನವರಿ ತಿಂಗಳಿಗೆ ಹೋಲಿಸಿದರೆ 2019 ಜನವರಿ ತಿಂಗಳಿನಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಸಂಖ್ಯೆ ಶೇ.25.3 ಇಳಿಕೆಯಾಗಿದೆ. ಹಾಗೆ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಕೂಡ ಶೇ.18ರಷ್ಟು ಕಡಿಮೆಯಾಗಿದೆ.

2018 ಜನವರಿ ತಿಂಗಳಿನಲ್ಲಿ ಮಂಗಳೂರು ಏರ್‌ಪೋರ್ಟ್‌ನಿಂದ 446 ಇಂಟರ್‌ನ್ಯಾಷನಲ್‌ ಫ್ಲೈಟ್‌ಗಳು ಹಾರಾಟ ನಡೆದಿವೆ. ಆದರೆ ಪ್ರಸ್ತುತ ವರ್ಷ ಮಂಗಳೂರು ಏರ್‌ಪೋರ್ಟ್‌ನಿಂದ ಕೇವಲ 333 ಇಂಟರ್‌ನ್ಯಾಪನಲ್‌ ಫ್ಲೈಟ್‌ಗಳು ಮಾತ್ರ ಇಳಿದಿವೆ. 2019 ಜನವರಿಯಲ್ಲಿ ಮಂಗಳೂರು ಏರ್‌ಪೋರ್ಟ್‌ನಿಂದ ಒಟ್ಟು 54,540 ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ.

ಆದರೆ 2018 ಜನವರಿಯಲ್ಲಿ 67,194 ಮಂದಿ ಪ್ರಯಾಣಿಕರು ಇಲ್ಲಿಂದ ಯಾನ ನಡೆಸಿದ್ದರು. ಕಳೆದ ಜನವರಿಯಲ್ಲಿ 1.4 ಲಕ್ಷ ಪ್ರಯಾಣಿಕರು ಮಂಗಳೂರು ಏರ್‌ಪೋರ್ಟ್‌ನಿಂದ ಸಂಚರಿಸಿದರೆ ಈ ವರ್ಷ ಜನವರಿಯಲ್ಲಿ ಪ್ರಯಾಣಿಕರ ಸಂಖ್ಯೆ 1.2 ಲಕ್ಷ ಕ್ಕೆ ಕುಸಿತ ಕಂಡಿದೆ. 2017 ಡಿಸೆಂಬರ್‌ನಲ್ಲಿ 445 ಅಂತಾರಾಷ್ಟ್ರೀಯ ವಿಮಾನಗಳು ಮಂಗಳೂರಿನಲ್ಲಿ ಇಳಿದಿವೆ. 2018 ಡಿಸೆಂಬರ್‌ನಲ್ಲಿ ಅದರ ಸಂಖ್ಯೆ 346ಕ್ಕೆ ಕುಸಿದಿದೆ. ಹೆಚ್ಚುಕಡಿಮೆ ಶೇ.17.4ರಷ್ಟು ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ. ದೇಶೀಯ ಪ್ರಯಾಣಿಕರ ಸಂಖ್ಯೆ ಕೂಡ 2018 ಡಿಸೆಂಬರ್‌ನಲ್ಲಿ ಶೇ.13.1ರಷ್ಟು ಇಳಿಮುಖವಾಗಿದೆ.

2018 ನವೆಂಬರ್‌ ತಿಂಗಳಿನಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರ ಹಾಗೂ ಅಂತಾರಾಷ್ಟ್ರೀಯ ವಿಮಾನಗಳ ಸಂಖ್ಯೆ ಸಕಾರಾತ್ಮಕವಾಗಿತ್ತು. ಆದರೆ

ದೇಶೀಯ ಪ್ರಯಾಣಿಕರ ಸಂಖ್ಯೆ ಮಾತ್ರ ನಕಾರಾತ್ಮಕವಾಗಿದ್ದು, ಶೇ.11.4ರಷ್ಟು ಇಳಿಕೆಯಾಗಿದೆ. ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಸ್ತಿತ್ವಕ್ಕೆ ಬಂದ ಬಳಿಕ ವಿಮಾನ ಹಾಗೂ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ ಎಂದು ಇಲ್ಲಿನ ಸಿಬ್ಬಂದಿ ಹೇಳುತ್ತಾರೆ.

ಮಂಗಳೂರಿನಿಂದ ಗಲ್ಫ್‌ಗೆ ದುಬಾರಿ!
ಕಣ್ಣೂರು ಏರ್‌ಪೋರ್ಟ್‌ನಿಂದ ಗಲ್ಫ್‌ ರಾಷ್ಟ್ರಗಳಿಗೆ ಹೋಗುವ ವಿಮಾನಗಳ ದರ ಮಂಗಳೂರು ಏರ್‌ಪೋರ್ಟ್‌ನಿಂದ ಗಲ್ಫ್‌ ರಾಷ್ಟ್ರಗಳಿಗೆ ಹೋಗುವ ವಿಮಾನಗಳ ದರಕ್ಕಿಂತ ತೀರಾ ಕಡಿಮೆ. 2018 ಡಿಸೆಂಬರ್‌ನಲ್ಲಿ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಸ್ತಿತ್ವಕ್ಕೆ ಬಂದ ಬಳಿಕ ಕೇರಳ ಮಾತ್ರವಲ್ಲ, ನೆರೆಯ ಕೊಡಗು ಜಿಲ್ಲೆಯಿಂದಲೂ ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ ಎಂಬ ವಿಷಯ ಅಂಕಿಅಂಶಗಳಿಂದ ತಿಳಿದು ಬಂದಿದೆ. ಅದೂ ಅಲ್ಲದೇ ಅಲ್ಲಿನ ಸಿಬ್ಬಂದಿಗಳ ಕಿರುಕುಳ ಕಾರಣ ದಕ್ಷಿಣ ಕನ್ನಡ ಜಿಲ್ಲೆಯವರು ಕೂಡಾ ಮಂಗಳೂರು ವಿಮಾನ ನಿಲ್ದಾಣವನ್ನು ಬಳಸಲು ಹಿಂಜರಿಯುತ್ತಿದ್ದಾರೆ.

2018 ಸೆಪ್ಟೆಂಬರ್‌ ತಿಂಗಳಿನಿಂದ ಅಂತಾರಾಷ್ಟ್ರೀಯ ಹಾಗೂ ದೇಶೀಯ ಕೆಲವು ವಿಮಾನಗಳನ್ನು ರದ್ದು ಮಾಡಿರುವುದರಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಕಾರಾತ್ಮಕ ಬೆಳವಣಿಗೆಯಾಗಿದೆ. ಪ್ರಯಾಣಿಕರಿಗೆ ವಿನಾಕಾರಣ ಚಿತ್ರಹಿಂಸೆ ನೀಡುವುದನ್ನು ನಿಯಂತ್ರಿಸದಿದ್ದಲ್ಲಿ ಮುಂದೊಂದು ದಿನ ಮಂಗಳೂರಿಗರಿಗೆ ಈ ವಿಮಾನ ನಿಲ್ದಾಣ ನಷ್ಟ ಹೊಂದುವ ಸಾಧ್ಯತೆ ಇದೆ.

error: Content is protected !! Not allowed copy content from janadhvani.com