ಮಂಗಳೂರು, ಜು.29: ಮಂಜನಾಡಿ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ಸ್ಥಾಪಕ,ಹಿರಿಯ ಧಾರ್ಮಿಕ ವಿದ್ವಾಂಸ ಶರಫುಲ್ ಉಲಮಾ ಅಲ್ ಹಾಜ್ ಪಿ.ಎಂ. ಅಬ್ಬಾಸ್ ಉಸ್ತಾದ್ (73) ಅಲ್ಪ ಕಾಲದ ಅಸೌಖ್ಯದಿಂದ ಇಂದು ನಿಧನರಾಗಿದ್ದಾರೆ.
ಮಂಗಳೂರು ತಾಲೂಕಿನ ಮಂಜನಾಡಿ ಮತ್ತು ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮವನ್ನು ಸಂಗಮಿಸುವ ಮಂಜನಾಡಿಯಲ್ಲಿ ‘ಶರಫುಲ್ ಉಲಮಾ’ ಬಿರುದಾಂಕಿತ ಅಲ್ ಹಾಜ್ ಶೈಖುನಾ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ 1994ರಲ್ಲಿ ‘ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್’ ಸ್ಥಾಪಿಸಿದರು. ಕೇವಲ 11 ಯತೀಂ ಮಕ್ಕಳು ಮತ್ತು ಒಬ್ಬ ಸಹಾಯಕ ಅದ್ಯಾಪಕರೊಂದಿಗೆ ಸ್ಥಾಪಿಸಲ್ಪಟ್ಟ ಈ ಸಂಸ್ಥೆಯು ಇತ್ತೀಚೆಗೆ ಬೆಳ್ಳಿ ಹಬ್ಬ ಆಚರಿಸುವ ಮೂಲಕ ಗಮನ ಸೆಳೆದಿತ್ತು.
ಈ ಸಂಸ್ಥೆಯ ಅಧೀನದಲ್ಲಿ 500ಕ್ಕೂ ಅಧಿಕ ವಸತಿಯುತ ವಿದ್ಯಾರ್ಥಿಗಳಲ್ಲದೆ 3,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಯತೀಂ ಮಕ್ಕಳ ಪೋಷಣೆ ಮತ್ತು ಅವರಿಗೆ ಉಚಿತ ಶಿಕ್ಷಣ ನೀಡುವ ಉದ್ದೇಶದಿಂದ ಸ್ಥಾಪಿಸಲ್ಪಟ್ಟ ಈ ಸಂಸ್ಥೆಯ ಅಧೀನದಲ್ಲಿ ಹಲವು ಅಂಗಸಂಸ್ಥೆಯೂ ಕಾರ್ಯಾಚರಿಸುತ್ತಿವೆ. ಈ ಸಂಸ್ಥೆಯ ಸ್ಥಾಪನೆಯ ಸಂದರ್ಭ ಇದ್ದುದು ಕೇವಲ 1.75 ಎಕರೆ ಜಮೀನು ಮಾತ್ರ. ಆ ಬಳಿಕ ದಾನಿಗಳ ನೆರವಿನಿಂದ ಸುಮಾರು 20 ಎಕರೆಗೂ ಅಧಿಕ ಜಮೀನನ್ನು ಅಲ್ ಮದೀನಾ ಹೊಂದಿದೆ. ಭೋದಕ ಮತ್ತು ಭೋದಕೇತರ ಸಹಿತ 250ಕ್ಕೂ ಅಧಿಕ ಸಿಬ್ಬಂದಿ ವರ್ಗವು ಇಲ್ಲಿದೆ. ಇದರ ಹಿಂದೆ ಅಬ್ಬಾಸ್ ಮುಸ್ಲಿಯಾರರ ಶ್ರಮ ಅಪಾರ.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಹಾಕತ್ತೂರು ಎಂಬಲ್ಲಿ 1946ರ ಜನವರಿ 1ರಂದು ಮುಹಮ್ಮದ್ ಕುಂಞಿ-ಬೀಫಾತಿಮಾ ಹಜ್ಜುಮ್ಮ ದಂಪತಿಯ ಪುತ್ರನಾಗಿ ಅಬ್ಬಾಸ್ ಉಸ್ತಾದ್ ಜನಿಸಿದರು.
ಹಾಕತ್ತೂರಿನಲ್ಲಿ ಅಹ್ಮದ್ ಮುಸ್ಲಿಯಾರ್ ಅವರಿಂದ ಮದ್ರಸ ಕಲಿಕೆ ಆರಂಭ. 1957ರಲ್ಲಿ ಕೊಡಂಗೇರಿಯಲ್ಲಿ ದರ್ಸ್ ಗೆ ಸೇರ್ಪಡೆಗೊಂಡು ಕೆ.ಸಿ.ಅಬ್ದುಲ್ಲಾ ಕುಟ್ಟಿ ಮುಸ್ಲಿಯಾರ್ ರಿಂದ ಕಲಿಕೆ ಮುಂದುವರಿಕೆ. ಅಲ್ಲಿ 5 ವರ್ಷ ದರ್ಸ್ ಕಲಿತ ಬಳಿಕ ಕೇರಳದ ತಿರುಮಟ್ಟೂರಿನಲ್ಲಿ ಸಿಪಿ ಮುಹಮ್ಮದ್ ಕುಟ್ಟಿ ಮುಸ್ಲಿಯಾರ್ ರಿಂದ ಕಲಿಕೆ ಮುಂದುವರಿಕೆ. 1965ರಲ್ಲಿ ‘ಉಳ್ಳಾಲ ತಂಙಳ್’ ಎಂದೇ ಖ್ಯಾತರಾದ ಸೈಯದ್ ಅಬ್ದುರ್ರಹ್ಮಾನ್ ಕುಂಞಿಕೋಯ ತಂಙಳ್‌ರ ಬಳಿ ದರ್ಸ್ ಕಲಿಕೆ. ಬಳಿಕ ಅವರ ನಿರ್ದೇಶನದಂತೆ ದೇವ್ ಬಂದ್ ನಲ್ಲಿ ಕಾಲೇಜಿಗೆ ಸೇರ್ಪಡೆ. ಅಲ್ಲಿನ ಬಹ್ಮತುಲ್ ಇಸ್ಲಾಂ ಸ್ಟೂಡೆಂಟ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಸ್ಥಾನದ ಜವಾಬ್ದಾರಿ.
1968ರಲ್ಲಿ ಊರಿಗೆ ಮರಳಿ ಬಂದರಲ್ಲದೆ 1969ರಲ್ಲಿ ದೇಲಂಪಾಡಿ ಮಸೀದಿಯಲ್ಲಿ ಸೇವೆ ಆರಂಭಿಸಿದರು. ಅಲ್ಲಿ 5 ವರ್ಷ ಖತೀಬ್, ಮುದರ್ರಿಸ್ ಆಗಿ ಸೇವೆ ಸಲ್ಲಿಸಿದರು. ನಂತರ ಉಜಿರೆಯಲ್ಲಿ ಸೇವೆ ಆರಂಭಿಸಿದರು. ನಂತರ ಮಂಜನಾಡಿ ಉಸ್ತಾದ್ ಎಂದೇ ಖ್ಯಾತರಾದ ಸಿ.ಪಿ.ಮುಹಮ್ಮದ್ ಕುಂಞಿ ಮುಸ್ಲಿಯಾರ್‌ರ ಆಹ್ವಾನದ ಮೇರೆಗೆ 1975ರಲ್ಲಿ ಮಂಜನಾಡಿಯಲ್ಲಿ ಸೇವೆ ಆರಂಭ. ಮುದರ್ರಿಸ್ ಆಗಿ 21 ವರ್ಷ ಸೇವೆ ಸಲ್ಲಿಸಿದರು.
1979ರಲ್ಲಿ ಹಡಗಿನಲ್ಲಿ ಹಜ್ ಯಾತ್ರೆ ಮಾಡಿದ್ದರಲ್ಲದೆ 1990ರಲ್ಲಿ ತನ್ನ ತಾಯಿಯ ಕೋರಿಕೆಯಂತೆ ಹಜ್ ಯಾತ್ರೆ ಮಾಡಿದರು. 1972ರಲ್ಲಿ ಮಂಜನಾಡಿ ಉಸ್ತಾದ್ ರ ಮೂರನೇ ಮಗಳು ಆಸಿಯಾರನ್ನು ಮದುವೆಯಾದರು. ಉಳ್ಳಾಲ ತಂಙಳ್ ನಿಖಾಹ್ ನೇತೃತ್ವ ವಹಿಸಿದ್ದರು. ಈ ದಂಪತಿಗೆ 5 ಗಂಡು ಮತ್ತು 3 ಹೆಣ್ಮಕ್ಕಳಿದ್ದಾರೆ.
1980ರಲ್ಲಿ ಕಾಞಂಗಾಡಿನ ಪಯಕಡಪ್ಪುರಂಬ ಎಂಬಲ್ಲಿ ಮಾವನ ಮನೆಯ ಬಳಿಯೇ ಸ್ವಂತ ಮನೆ ನಿರ್ಮಿಸಿದರು.
►ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾದ ಮುಶಾವರದ ಸದಸ್ಯ
►ಕರ್ನಾಟಕ ಸುನ್ನಿ ಜಂ ಇಯ್ಯತುಲ್ ಉಲಮಾದ ಕೋಶಾಧಿಕಾರಿ
►ಸುನ್ನಿ ಕೋ ಆರ್ಡಿನೇಶನ್‌ನ ಅಧ್ಯಕ್ಷ
►ಕೊಡಗು ಜಂ ಇಯ್ಯತುಲ್ ಉಲಮಾದ ಅಧ್ಯಕ್ಷ
►ಮುಡಿಪು-ದೇರಳಕಟ್ಟೆ ಸಂಯುಕ್ತ ಜಮಾಅತ್‌ನ ಸಹಾಯಕ ಖಾಝಿ
ಕೃತಿಗಳು:
1976ರಲ್ಲಿ ಮಂಕೂಸ್ ಮೌಲೀದ್ ಮಲಯಾಳಂಗೆ ಅನುವಾದ
1977ರಲ್ಲಿ ಅಜ್ಮೀರ್ ಖ್ವಾಝಾರ ಬಗ್ಗೆ ಕನ್ನಡದಲ್ಲಿ ಕೃತಿ
1991ರಲ್ಲಿ ಮಂಕೂಸ್ ಮೌಲೀದ್ ಅರಬಿಯಲ್ಲಿ ವ್ಯಾಖ್ಯಾನ
______________________________________
ನಾಳೆ,ಜುಲೈ 30.ಬೆಳಗ್ಗೆ 9.00 ಘಂಟೆಗೆ ಅಲ್ ಮದೀನಾದಲ್ಲಿ ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರ ನೇತೃತ್ವದಲ್ಲಿ ಮಯ್ಯಿತ್ ನಮಾಝ್ ನಡೆಯಲಿದೆ.
please also tell about the him