ರಿಯಾದ್: ಸೌದಿ ಅರೇಬಿಯಾದ ಖಾಸಗಿ ವಲಯದಲ್ಲಿನ ಕಾರ್ಮಿಕರು ನಾಲ್ಕು ದಿನಗಳ ಈದ್ ರಜೆಗೆ ಅರ್ಹರು ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ. ಸಾರ್ವಜನಿಕ ಮತ್ತು ವೈಯಕ್ತಿಕವಾದ ರಜೆಗಳು ಕಾರ್ಮಿಕರ ಹಕ್ಕುಗಳಾಗಿವೆ ಎಂದು ಸಚಿವಾಲಯವು ಒತ್ತಿ ಹೇಳಿದೆ.
ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೆ ನೀಡಬೇಕಾದ ಸಾರ್ವಜನಿಕ ರಜೆಗೆ ಸಂಬಂಧಿಸಿದಂತೆ ಸೌದಿ ಕಾರ್ಮಿಕ ಸಚಿವಾಲಯ ವಿವರಣೆ ನೀಡಿದೆ. ಈದುಲ್ ಫಿತರ್ ಮತ್ತು ಬಕ್ರೀದ್ ಹಬ್ಬಗಳಿಗೆ ಕನಿಷ್ಠ ನಾಲ್ಕು ದಿನಗಳ ರಜೆ ನೀಡಬೇಕು ಎಂದು ಅಧಿಕೃತ ಟ್ವಿಟರ್ ಖಾತೆ ಮೂಲಕ ಸಚಿವಾಲಯ ತಿಳಿಸಿದೆ.
ಉಮ್ಮುಲ್ ಖುರಾ ಕ್ಯಾಲೆಂಡರ್ ಪ್ರಕಾರ ರಮಝಾನ್ ಇಪ್ಪತ್ತೊಂಬತ್ತು ಈದುಲ್ ಫಿತರ್ ರಜೆಯ ಹಿಂದಿನ ಕೊನೆಯ ಕೆಲಸದ ದಿನ. ಬಕ್ರೀದ್ ರಜೆ ಅರಫಾ ದಿನದಿಂದ ಪ್ರಾರಂಭವಾಗುತ್ತದೆ.
ಸೌದಿ ರಾಷ್ಟ್ರೀಯ ದಿನಕ್ಕೆ ಒಂದು ದಿನದ ರಜೆ ನೀಡಬೇಕು. ವಾರಾಂತ್ಯದ ರಜಾ ದಿನಗಳಲ್ಲಿ ರಾಷ್ಟ್ರೀಯ ದಿನವು ಬರುವಲ್ಲಿ ಒಂದು ದಿನ ಮೊದಲು ಅಥವಾ ನಂತರ ರಜೆ ನೀಡಬೇಕು. ಆದರೆ ಈದ್ ರಜಾ ದಿನಗಳಲ್ಲಿ ರಾಷ್ಟ್ರೀಯ ದಿನಗಳು ಬಂದಲ್ಲಿ ವಿಶೇಷ ರಜೆ ನೀಡಬೇಕಾಗಿಲ್ಲ.
ಹೆಂಡತಿಯ ಹೆರಿಗೆ ಸಂಬಂಧಿಸಿ ವೇತನ ಸಹಿತ ಮೂರು ದಿನಗಳ ರಜೆ ಪಡೆಯಲು ಖಾಸಗಿ ವಲಯದಲ್ಲಿನ ಕೆಲಸಗಾರರಿಗೆ ಅರ್ಹತೆ ಇದೆ. ತಮ್ಮ ವಿವಾಹಕ್ಕೆ ಐದು ದಿನಗಳ ರಜೆ ಲಭಿಸಲಿದೆ. ಪತ್ನಿ, ಮಾತಾ ಪಿತರು, ಮಕ್ಕಳು ಇವರ ಪೈಕಿ ಯಾರಾದರೂ ಮರಣಹೊಂದಿದರೆ ಐದು ದಿನಗಳ ರಜೆ ನೀಡತಕ್ಕದ್ದು ಎಂದು ಸಚಿವಾಲಯವು ನೆನಪಿಸಿದೆ. ಮಹಿಳಾ ನೌಕರರಿಗೆ ವೇತನ ಸಹಿತ 10 ವಾರಗಳ ಪ್ರಸವ ರಜೆಗೆ ಕಾರ್ಮಿಕ ಕಾನೂನಿನಲ್ಲಿ ಅವಕಾಶವಿದೆ.