ಸೌದಿ,ಜಿಝಾನ್ ರಸ್ತೆ ಅಪಘಾತ: ಒಂದೇ ಕುಟುಂಬದ ಏಳು ಮಂದಿ ಮೃತ್ಯು;ಸಾರಿಗೆ ಡೈರೆಕ್ಟರ್ ಅಮಾನತು

ಜಿದ್ದಾ: ಜಿಝಾನ್ ನಗರಕ್ಕೆ ಸಮೀಪದ ಸಾಬಿಯ್ಯಾ ಪ್ರದೇಶದಲ್ಲುಂಟಾದ ವಾಹನಾಪಘಾತದಲ್ಲಿ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟಿದ್ದಾರೆ. ತಾಯಿ ಮತ್ತು ಮೂರು ಸಹೋದರರು ಹಾಗೂ ಮೂರು ಸಹೋದರಿಯರಾಗಿದ್ದಾರೆ ಮರಣ ಹೊಂದಿದವರು.

ಇವರು ಸಂಚರಿಸುತ್ತಿದ್ದ ಕಾರ್, ಟ್ರಕ್‌ನೊಂದಿಗೆ ಡಿಕ್ಕಿಹೊಡೆದು ಈ ಭೀಕರ ಅಪಘಾತ ಸಂಭವಿಸಿದೆ. ಕಾರ್ ಮತ್ತು ಟ್ರಕ್‌ನ ಡ್ರೈವರ್‌ಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಎಂಟು ಮಂದಿ ಕುಟುಂಬಿಕರು ಸಂಚರಿಸುತ್ತಿದ್ದ ಕಾರು, ಸಾಬಿಯ್ಯಾ-ಉರೂಬ್ ರಸ್ತೆಯ ಅಲ್ ಖದ್ಮಿಯಾದಲ್ಲಿ ಅಪಘಾತಕ್ಕೆ ಈಡಾಗಿತ್ತು. ಸಾಬಿಯ್ಯಾದ ಜನರಲ್ ಅಸ್ಪತ್ರೆಯ ಶವಾಗಾರದಲ್ಲಿ ಮೃತದೇಹಗಳನ್ನು ಇರಿಸಲಾಗಿದೆ.

ಅಲ್ಲಲ್ಲಿ ಹೊಂಡಗಳು ತುಂಬಿದ ದ್ವಿಪಥದಲ್ಲಿ ಅಪಘಾತ ಸರ್ವೇ ಸಾಧಾರಣವಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಟ್ರಕ್‌ಗಳು ಮತ್ತು ಟಿಪ್ಪರ್ಗಳು ಸಾಧಾರಣವಾಗಿ ಸಂಚರಿಸುವ ಈ ರಸ್ಥೆಯ ಶೋಚನೀಯ ಅವಸ್ಥೆಯನ್ನು ಸಂಬಂಧಪಟ್ಟವರು ಕಾಣಬೇಕು ಮತ್ತು ಟ್ರಕ್ಗಳಿಂದ ಈ ರಸ್ತೆಯನ್ನು ಮುಕ್ತವಾಗಿಸಬೇಕೆಂದು ಸ್ಥಳೀಯರು ಕೇಳಿಕೊಂಡಿದ್ದಾರೆ.

ಅಪಘಾತ ಸಂಭವಿಸಿದ ನಂತರ ಸಾರಿಗೆ ಸಚಿವ ಡಾ.ನಬೀಲ್ ಆಮೂದಿಯವರು ಜಿಝಾನ್ ವಲಯದ ಸಾರಿಗೆ ಡೈರೆಕ್ಟರ್ ಜನರಲ್ ರನ್ನು ಪದವಿಯಿಂದ ಅಮಾನತು ಮಾಡಿದ್ದಾರೆಂದು  ಸಚಿವಾಲಯದ ಅಧಿಕೃತ ವಕ್ತಾರರು ತಿಳಿಸಿದ್ದಾರೆ. ರಸ್ತೆಯನ್ನು ಕಾಲಕಾಲಕ್ಕೆ ದುರಸ್ತಿ ಗೊಳಿಸದ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಲಾಗುವುದು ಎಂದು ವಕ್ತಾರರು ತಿಳಿಸಿದ್ದಾರೆ.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!