janadhvani

Kannada Online News Paper

ಸೌದಿ ಅರೇಬಿಯಾ:ಕಾರ್ಮಿಕರ ಪಾಸ್ಪೋರ್ಟ್ ತಡೆಹಿಡಿಯುವುದು ಕಾನೂನು ಬಾಹಿರ

ರಿಯಾದ್: ಸೌದಿ ಅರೇಬಿಯಾದಲ್ಲಿನ ಕಾರ್ಮಿಕ ಕಾನೂನು ತಿದ್ದುಪಡಿ ಮಾಡಲಾಗಿದೆ. ಹೊಸ ಕಾನೂನಿನಂತೆ ವಿದೇಶಿ ನೌಕರರ ಪಾಸ್ ಪೋರ್ಟ್ ಮತ್ತಿತರ ದಾಖಲೆಗಳನ್ನು ತಡೆಹಿಡಿಯುವುದು ಕಾನೂನು ಬಾಹಿರವಾಗಿದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.

ಪಾಸ್ಪೋರ್ಟ್, ವಾಸ ಪುರಾವೆಯಾದ ಇಖಾಮ, ಆರೋಗ್ಯ ವಿಮೆ ಕಾರ್ಡ್ ಗಳನ್ನು ತಡೆಹಿಡಿಯಲು ಮಾಲೀಕನಿಗೆ ಅಧಿಕಾರವಿಲ್ಲ. ಅಂತಹ ದಾಖಲೆಗಳನ್ನು ಹೊಂದುವ ಹಕ್ಕು ಕಾರ್ಮಿಕರಿಗಿದೆ. ಇಂತಹ ಹಲವಾರು ಪ್ರಕರಣಗಳು ಈ ಹಿಂದೆ ಸೌದಿಯಾದ್ಯಂತ ವರದಿಯಾಗಿದ್ದವು.

ಎರಡು ವರ್ಷಗಳ ಹಿಂದೆ, ಕಾರ್ಮಿಕ ಸಚಿವಾಲಯವು ಈ ಬಗ್ಗೆ ಸುತ್ತೋಲೆ ಮೂಲಕ ಮಾಲೀಕರಿಗೆ ಎಚ್ಚರಿಕೆ ನೀಡಿ, ಕಾನೂನನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುವುದು ಎಂದಿದ್ದವು. ಆದರೆ ಇದೀಗ ಕಾರ್ಮಿಕರ ಹಕ್ಕುಗಳನ್ನು ಸಂರಕ್ಷಿಸಲು ಕಾನೂನನ್ನು ತಿದ್ದುಪಡಿ ಮಾಡಲಾಗಿದೆ.

ನೌಕರರು ಮುಂಚಿತವಾಗಿ ಅನುಮತಿ ಪಡೆಯದೆ ನಿರಂತರವಾಗಿ 15 ದಿನಗಳವರೆಗೆ ಅಥವಾ ಎಡೆಬಿಟ್ಟು 30 ದಿವಸಗಳು ಕೆಲಸದಿಂದ ದೂರ ಉಳಿದರೆ ಅಂತಹ ಕೆಲಸಗಾರನನ್ನು ಯಾವುದೇ ಸೇವಾ ಸೌಲಭ್ಯಗಳನ್ನು ನೀಡದೆ ವಜಾಗೊಳಿಸುವ ಹಕ್ಕು ಮಾಲೀಕರಿಗೆ ಇದೆ.

ಸಹ ಕಾರ್ಮಿಕರನ್ನು ಅಕ್ರಮಿಸುವುದು, ಕೆಲಸದಾತ, ಉನ್ನತಾಧಿಕಾರಿ ಮುಂತಾದವರನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ತೇಜೋವಧೆ ಮಾಡುವುದು ಮುಂತಾದ ಕೃತ್ಯಗಳಲ್ಲಿ ತೊಡಗಿಸಿಕೊಂಡವರನ್ನು ಯಾವುದೇ ಸೇವಾ ಸೌಲಭ್ಯಗಳನ್ನು ನೀಡದೆ ಉಚ್ಛಾಟಿಸಲು ಹೊಸ ಕಾನೂನಿನಲ್ಲಿ ಅನುಕೂಲ ಕಲ್ಪಿಸಲಾಗಿದೆ.

error: Content is protected !! Not allowed copy content from janadhvani.com