janadhvani

Kannada Online News Paper

ಪರನಿಂದೆ ಪರಾಜಿತರ ಪರಾಕ್ರಮವಷ್ಟೇ, ಆ್ಯಂಕರ್ ಸಾಬ್..!

✍🏻 ಕೆ.ಎಂ ಅಬೂಬಕರ್ ಸಿದ್ಧೀಖ್

ಶ್ರೀ ಅಜಿತ್ ಹನುಮಕ್ಕನವರಿಗೆ…

ನೀವು ಯಾರೆಂದು ನನಗೆ ಗೊತ್ತಿಲ್ಲ. ಟಿವಿ ಮುಂದೆ ಕೂರುವ ಅಭ್ಯಾಸ ಅಷ್ಟೇನೂ ಇಲ್ಲದ್ದರಿಂದ ನಿಮ್ಮ ಮುಖ ನೋಡಿಯೂ ಪರಿಚಯವಿರಲಿಲ್ಲ. ಇದೀಗ ವಿವಾದ ಹೇಳಿಕೆ ನೀಡಿದ್ದರಿಂದ ಸಾಮಾಜಿಕ ಜಾಲತಾಣಗಳ ಮೂಲಕ ನನ್ನ ಗಮನ ಸೆಳೆದಿರಿ. ಬಹುಷಃ ಈ ರೀತಿ ಪ್ರಚಾರ ಪಡೆಯುವುದೇ ನಿಮ್ಮ ಉದ್ಧೇಶವಾಗಿತ್ತೋ ಏನೋ, ಗೊತ್ತಿಲ್ಲ. ಆದರೆ ನನ್ನಂತಹ ಹಲವರಿಗೆ ಪರಿಚಯಿಸಿಕೊಡುವಲ್ಲಿ ಯಶಸ್ವಿಯಾಗಿದ್ದೀರಿ. ಕುಪ್ರಚಾರದಲ್ಲೂ ‘ಪ್ರಚಾರ’ ಇರುತ್ತದೆ ತಾನೇ?

ನಮಗೆ ಗೊತ್ತು ಪ್ರವಾದಿ ನಿಂದಕರಲ್ಲಿ ನೀವು ಮೊದಲಿಗರೇನೂ ಅಲ್ಲ. ಬಹುಷಃ ಕೊನೆಯವರೂ ಆಗಲಾರಿರಿ. ಏಕೆಂದರೆ ಅದೊಂದು ವಿಕಾರ ಮನಸ್ಸುಗಳ ಪರಂಪರೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಪ್ರಬೋಧನೆಗಿಳಿದ ಕಾಲದಿಂದಲೂ ಇಂತಹ ನಿಂದನೆಗಳು, ಟೀಕಾ ಪ್ರಹಾರಗಳು ಕಂಡು ಬಂದಿವೆ. ಇದನ್ನೆಲ್ಲಾ ಮೆಟ್ಟಿನಿಂತುಕೊಂಡೇ ‌ಅವರ ಧರ್ಮ ಜಗದಗಲ ಹರಡಿದೆ.

ನಿಮಗೆ ಗೊತ್ತಿರಲಿ, ಇಂದಿಗೂ ಅತೀ ಹೆಚ್ಚು ಜನರು ಮತಾಂತರಗೊಳ್ಳುತ್ತಿರುವುದು ಅವರ ಧರ್ಮಕ್ಕೆ. ಜಗತ್ತಿನಲ್ಲಿ ಅತೀ ಹೆಚ್ಚು ಜನರಿಗಿರುವ ಹೆಸರು ಅವರ ಹೆಸರು. ಜಗತ್ತಿನಲ್ಲಿ ಅತೀ ಹೆಚ್ಚು ಪುಸ್ತಕಗಳು ಹೊರಬರುತ್ತಿರುವುದು ಅವರ ಬಗೆಗಿನದು. ಜಗತ್ತಿನಲ್ಲಿ ಕ್ಷಣಕ್ಷಣವೂ ಮೊಳಗುತ್ತಿರುವ ವ್ಯಕ್ತಿಯ ಹೆಸರೊಂದಿದ್ದರೆ ಅವರದು, ಅವರೊಬ್ಬರದು ಮಾತ್ರ. ಅವರ ಒಂದೇ ಒಂದು ಭಾವಚಿತ್ರವಿಲ್ಲ, ವಿಗ್ರಹವಿಲ್ಲ. ಆದರೆ ಗೊತ್ತಿರಲಿ, ಅನುಯಾಯಿಗಳ ವೃಂದವೊಂದು ಕನಿಷ್ಟಪಕ್ಷ ದಿನಕ್ಕೈದು ಬಾರಿ ತಮ್ಮ ನಾಯಕನ ಹೆಸರು ಹೇಳುವ ಸೌಭಾಗ್ಯವೊಂದು ಧರ್ಮ ನಾಯಕರೊಬ್ಬರಿಗೆ ಒದಗಿದ್ದರೆ ಅದು ಅವರೊಬ್ಬರಿಗೆ ಮಾತ್ರ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್!
ಹೀಗೆ ಇನ್ನೂ ಬಹಳಷ್ಟಿದೆ. ಬೇಕಿದ್ದರೆ ಗೂಗಲ್ ನಲ್ಲಿ ಹುಡುಕಾಡಬಹುದು. ಮುಸ್ಲಿಮರು ಬರೆದ ಪುಸ್ತಕಗಳನ್ನು ಓದಬಹುದು. ಹಿಂದೂ ಧರ್ಮ ನಾಯಕನ ಬಗ್ಗೆ ಹಿಂದೂ ವಿದ್ವಾಂಸನಿಗೆ ಗೊತ್ತಿರುವಷ್ಟು ಮುಸಲ್ಮಾನನಿಗೆ ಗೊತ್ತಿರಲು ಸಾಧ್ಯವೇ? ಹಾಗೇ, ಮುಸ್ಲಿಂ ಧರ್ಮ ನಾಯಕರ ಬಗ್ಗೆ ಮುಸ್ಲಿಂ ಪಂಡಿತರಿಗೆ ಗೊತ್ತಿರುವಷ್ಟು ಇತರರಿಗೆ ಗೊತ್ತಿರಲಾರದಲ್ಲವೇ.!

ಆ್ಯಂಕರ್ ಸಾಬ್,
ನೀವು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ನಿಂದಿಸಲು ಬಳಸಿದ ಪದಗಳನ್ನು ನಾನಿಲ್ಲಿ ಉಲ್ಲೇಖಿಸುವುದಿಲ್ಲ. ಕೆಟ್ಟ ಮನಸ್ಸುಗಳಿಂದಷ್ಟೇ ಕೆಟ್ಟ ಪದಗಳು ಬರುತ್ತವೆ ಎನ್ನುವುದರಲ್ಲಿ ನಿಮಗೂ ಅನುಮಾನವಿರಲಾರದು. ಇನ್ನು ನೀವು ಬಳಸಿದ ಸಂದರ್ಭವನ್ನೊಮ್ಮೆ ಯೋಚಿಸಿ. ಅದ್ಯಾರೋ ಭಗವಾನ್ ಎಂಬ ಸಾಹಿತಿ ಶ್ರೀ ರಾಮನನ್ನು ಅವಹೇಳಿಸಿ ಪುಸ್ತಕ ಬರೆದರೆಂದು ನೀವು ಅವರನ್ನು ಚರ್ಚೆಗೆ ಕರೆದಿರಿ. ಶ್ರೀ ರಾಮನ ಮೇಲಿನ ಅವರ ಆರೋಪಗಳನ್ನು ನಿರಾಕರಿಸುವ ಅಂಶಗಳನ್ನಿಟ್ಟು ಅವರನ್ನು ನೀವು ತರಾಟೆಗೆ ತೆಗೆದುಕೊಳ್ಳಬಹುದಿತ್ತು. ಆದರೆ ಬಹುಷಃ ನಿಮ್ಮಲ್ಲಿ ಅದಕ್ಕೆ ಸಾಕಷ್ಟು ಸಲಕರಣೆಗಳಿಲ್ಲವೆಂದು ತೋರುತ್ತದೆ. ಚರ್ಚೆಯಲ್ಲಿ ಮೇಲುಗೈ ಸಾಧಿಸುವುದಕ್ಕಾಗಿಯೇ ಏನೋ, ಇನ್ನೊಂದು ಧರ್ಮಕ್ಕೆ ಕೈ ಹಾಕಿದಿರಿ!
ಶ್ರೀ ರಾಮನನ್ನು ಸಮರ್ಥಿಸಲು ಶ್ರೀ ರಾಮನಲ್ಲೇ ಸಾಕಷ್ಟು ಆದರ್ಶಗಳಿಲ್ಲವೇ? ಮತ್ಯಾಕೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಲ್ಲಿ ಕೊರತೆ ಕಾಣಲು ಹೊರಟಿರಿ. ನಮ್ಮಲ್ಲಿ ಪಾಸಿಟಿವ್ ಗಳಿಲ್ಲದಿದ್ದರೆ ಮಾತ್ರ ಮತ್ತೊಬ್ಬರ ನೆಗಟಿವ್ ಗೆ ಆಶ್ರಯಿಸಬೇಕಾಗುತ್ತದೆ ಅಲ್ಲವೇ? ಯೋಚಿಸಿ ನೋಡಿ, ಇದು ನೀವು ರಾಮನಿಗೂ ಮಾಡಿದ ಅವಮಾನ!

ಇನ್ನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಮದುವೆ ವಿಚಾರ. ಒಂಬತ್ತು ವರ್ಷದ ಹುಡುಗಿಯನ್ನು ಮದುವೆಯಾದ ಬಗ್ಗೆ ತಗಾದೆ ಎತ್ತಿದಿರಿ. ಏಳನೇ ಶತಮಾನದ ಅರೇಬಿಯನ್ ನಾಡಿನ ಅಂದಿನ ವಾತಾವರಣದಲ್ಲಿ, ಸಂಪ್ರದಾಯದಲ್ಲಿ ಮದುವೆಗೆ ಪ್ರಾಯವೋ, ವಯಸ್ಸಿನ ಅಂತರವೋ ಅಡ್ಡಿಯಾಗಿರಲಿಲ್ಲ. ಆದ್ದರಿಂದಲೇ ಜೀವಮಾನದುದ್ದಕ್ಕೂ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ವಿರೋಧಿಸುತ್ತಾ ಬಂದ ಅಬೂಜಹಲ್ ನಂತಹ ಶತ್ರು ನಾಯಕರು ಕೂಡಾ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ವಿವಾಹವನ್ನು ವಿವಾದ ಮಾಡಿರಲಿಲ್ಲ. ಮದುವೆಯಂತಹ ಸಂಪ್ರದಾಯ ಸಮಾಜದಿಂದ ಸಮಾಜಕ್ಕೆ, ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗುತ್ತದೆ ಎಂಬ ಸಾಮಾನ್ಯ ಜ್ಞಾನ ನಿಮಗಿದ್ದಿದ್ದರೆ ನೀವದನ್ನು ಪ್ರಶ್ನಿಸುತ್ತಿರಲಿಲ್ಲ. ಬೇಡಬಿಡಿ, ಶ್ರೀರಾಮನನ್ನು ನಿಮಗಿಂತ ಚೆನ್ನಾಗಿ ತಿಳಿದಿರುವ ಶ್ರೀ ರಾಮಕೃಷ್ಣ ಪರಮಹಂಸರು ಶಾರದಾ ದೇವಿಯನ್ನು ಮದುವೆಯಾಗುವಾಗ ಶಾರದಾ ದೇವಿಯ ಪ್ರಾಯ ಕೇವಲ 5 ವರ್ಷ ಮಾತ್ರವಿತ್ತು ಎನ್ನುವುದು ಗೊತ್ತೇನು? ಅದು ನಡೆದ 1853 ಕ್ಕೂ ನಮ್ಮ ಕಾಲಕ್ಕೂ ನಡುವಿನ ಅಂತರ ಕೇವಲ 165 ವರ್ಷ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಮದುವೆ ಕಾಲಕ್ಕೂ ,ಈ ಕಾಲಕ್ಕೂ ಇರುವ ಅಂತರ ಬರೋಬ್ಬರಿ 1400 ವರ್ಷಗಳು. ಒಂದೂವರೆ ಶತಮಾನದ ಹಿಂದೆ ನಡೆಯಬಹುದಾದ ಶಿಶು ವಿವಾಹ ಹದಿನಾಲ್ಕು ಶತಮಾನಗಳ ಹಿಂದೆ ನಡೆಯಬಾರದಿತ್ತು ಎಂದು ಭಾವಿಸುವುದಕ್ಕೆ ಏನರ್ಥವಿದೆ? ಹಾಗೆಂದು ನಿಮ್ಮಂತೆ ಪರಮಹಂಸರ ಮೇಲೆ ಶಿಶುಕಾಮ ಕಲ್ಪಿಸಲು ನಾವಿಲ್ಲ. ವಿವಾಹದಲ್ಲಿ ಕಾಮವೊಂದನ್ನು ಮಾತ್ರ ನೋಡುವ ಕಾಮಾಲೆ ರೋಗಿಗಳಿಗಷ್ಟೇ ಅದು ಸಾಧ್ಯ.

ನಿರೂಪಕರೇ,
ನಿಮ್ಮ ಬಗ್ಗೆ ನಮ್ಮಲ್ಲಿ ಆಕ್ರೋಶ ಮೂಡಿರಬಹುದು. ಜತೆಗೆ ಅನುಕಂಪವೂ ಇದೆ. ಟಿವಿ ನಿರೂಪಣೆ ಎನ್ನುವುದು ನಿಮ್ಮ ಜೀವನಮಾರ್ಗ. ಯಾರನ್ನಾದರೂ ಮೆಚ್ಚಿಸಬೇಕಾದ ಅನಿವಾರ್ಯತೆ ನಿಮಗಿರಬಹುದು. ಯಾರಾದರೂ ನಿಮ್ಮ ಮೂಲಕ ಹೇಳಿಸಿರಬಹುದೇ ಎಂಬ ಅನುಮಾನವೂ ಇದೆ. ಮುಸ್ಲಿಮರನ್ನು ಉದ್ರೇಕಗೊಳಿಸಿ, ಅವರನ್ನು ಹಿಂಸಾಚಾರಕ್ಕಿಳಿಸಿ ಸಮಾಜದಲ್ಲಿ ಶಾಂತಿ ಕದಡುವ ದುರಾಲೋಚನೆ ಮತ್ತು ಸಮೀಪವಿರುವ ಚುನಾವಣೆಯಲ್ಲಿ ಬೇಳೆ ಬೇಯಿಸುವ ದೂರಾಲೋಚನೆ ಇದರ ಹಿಂದಿರಬಹುದೇ? ಗೊತ್ತಿಲ್ಲ. ಆದರೆ ಮುಸ್ಲಿಮರು ಪ್ರಜ್ಞಾವಂತರಿದ್ದಾರೆ. ತಮ್ಮ ಮನಸ್ಸಿನ ನೋವನ್ನು ಮಾಧ್ಯಮಗಳು ಮತ್ತು ಪೋಲೀಸ್ ಠಾಣೆಗಳನ್ನು ಬಳಸುವ ಮೂಲಕ ಪ್ರಜಾಸತ್ತಾತ್ಮಕವಾಗಿ ಹೊರಗೆಡಹಿದ್ದಾರೆ. ಯಾವುದೇ ಪ್ರತೀಕಾರದ ಭಯ ಬೇಕಿಲ್ಲ. ಬಾಂಬು ಹಾಕುವ, ಬಂದೂಕು ಬಳಸುವ ಭಯಬಿಡಿ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿದ ಕಾರಣಕ್ಕೆ ಬಂದೂಕಿಗೆ ಬಲಿಯಾದ ಗೌರಿ ಲಂಕೇಶ್, ಎಂ.ಎಂ ಕಲಬುರ್ಗಿಯಂತಹವರ ಹತ್ಯೆಯಲ್ಲಿ ‌ಯಾವನೇ ಮುಸ್ಲಿಮನ ಹೆಸರಿಲ್ಲವಲ್ಲ! ಗಾಂಧೀಜಿ ಹತ್ಯೆಯಲ್ಲಿ ಕೂಡಾ.

ಆ್ಯಂಕರ್ ಸಾಬ್,
ಒಂದು ಮಾತು. ಮುಸ್ಲಿಮರ ಭಾವನೆಗಳನ್ನು ಕೆರಳಿಸಿರುವ ಕಾರಣಕ್ಕಾಗಿ ನಿಮಗೆ ಏನೂ ಅಪಾಯವಾಗದಿರಬಹುದು. ಆದರೆ ನೀವು ಕುಳಿತಿರುವ ಕುರ್ಚಿಗೊಂದು ಗೌರವ ಇದೆ. ಪ್ರಜಾಪ್ರಭುತ್ವದಲ್ಲಿ ಸಮೂಹ ಮಾಧ್ಯಮಕ್ಕಿರುವ ಬೆಲೆ – ನೆಲೆಗಳನ್ನು, ಹೊಣೆಗಾರಿಕೆಗಳನ್ನು ಜರ್ನಲಿಝಂನ ಪ್ರಾಥಮಿಕ ಪಾಠಗಳಲ್ಲೇ ನೀವು ಓದಿರಬಹುದು. ಅದಕ್ಕೆ ಧಕ್ಕೆ ಉಂಟುಮಾಡಿದರೆ ಉಂಟಾಗುವ ಅಪಕೀರ್ತಿ ನಿಮಗೆ ಸಂತೋಷ ಕೊಟ್ಟೀತೆ? ನೋವುಂಡವರ ಮನಸ್ಸಿನ ಶಾಪಕ್ಕಿಂತ ದೊಡ್ಡ ಶಿಕ್ಷೆಯನ್ನು ಯಾವ ಕೋರ್ಟು ಕೂಡಾ ಕೊಡಲಾರದೆಂದು ನನ್ನ ಭಾವನೆ. ಇನ್ನಾದರೂ ಬದಲಾಗಲು ಪ್ರಯತ್ನಿಸಿ. ಹೇಗೂ ಬದುಕಬಹುದು, ಆದರೆ ಆತ್ಮತೃಪ್ತಿಯಿಂದ ಬದುಕಬೇಕಲ್ಲವೇ?

error: Content is protected !! Not allowed copy content from janadhvani.com