ನಾಪತ್ತೆಯಾಗಿದ್ದ ತೊಗಾಡಿಯಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ

ಹೊಸದಿಲ್ಲಿ: ಇಂದು ಬೆಳ್ಳಂಬೆಳಗ್ಗೆ ನಾಪತ್ತೆಯಾಗಿದ್ದ ವಿಶ್ವ ಹಿಂದೂ ಪರಿಷತ್‌ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್‌ ತೊಗಾಡಿಯಾ ಅವರು ಅಹಮದಾಬಾದ್‌ನ ಶಾಹಿಬಾಗ್‌ ಪ್ರದೇಶದಲ್ಲಿ ಸೋಮವಾರ ಸಂಜೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಶಾಹಿಬಾಗ್‌ನ ಚಂದ್ರಮಣಿ ಆಸ್ಪತ್ರೆಗೆ ತೊಗಾಡಿಯಾ (62) ಅವರನ್ನು ದಾಖಲಿಸಲಾಗಿದೆ ಎಂದು ಅಹಮದಾಬಾದ್‌ ಕ್ರೈಂ ಬ್ರಾಂಚ್‌ ಮೂಲಗಳು ತಿಳಿಸಿವೆ. ಅವರು ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದರು.ತೊಗಾಡಿಯಾ ಅವರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆತರಲಾಗಿದೆ ಎಂದು ಚಂದ್ರಮಣಿ ಆಸ್ಪತ್ರೆಯೆ ನಿರ್ದೇಶಕ ರೂಪ್‌ ಕುಮಾರ್‌ ಅಗರ್ವಾಲ್ ತಿಳಿಸಿದ್ದಾರೆ.’ಅವರು ಹೈಪೊಗ್ಲಿಸಿಮಿಯಾ (ರಕ್ತದಲ್ಲಿ ಸಕ್ಕರೆ ಅಂಶದ ಕೊರತೆ) ದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ನಿಧಾನವಾಗಿ ಅವರಿಗೆ ಪ್ರಜ್ಞೆ ಬರುತ್ತಿದೆ. ಆದರೆ ಹೇಳಿಕೆ ನೀಡುವಷ್ಟು ಸ್ಥಿರವಾಗಿಲ್ಲ’ ಎಂದು ಅಗರ್ವಾಲ್‌ ಅವರು ಟೈಮ್ಸ್‌ ಆಫ್‌ ಇಂಡಿಯಾಗೆ ತಿಳಿಸಿದರು.

ತೊಗಾಡಿಯಾ ಅವರನ್ನು ಯಾವುದೇ ಕೇಸಿಗೆ ಸಂಬಂಧಿಸಿದಂತೆ ರಾಜಸ್ಥಾನ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು ಎಂದು ವಿಹಿಂಪ ಮೊದಲು ಹೇಳಿಕೆ ನೀಡಿತ್ತಾದರೂ ನಂತರ ನಿರಾಕರಿಸಿತು.ನಿಷೇಧಾಜ್ಞೆ ಉಲ್ಲಂಘಿಸಿದ ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿ ಅವರ ಬಂಧನಕ್ಕೆ ರಾಜಸ್ಥಾನ ಪೊಲೀಸರು ವಾರಂಟ್‌ ಹಿಡಿದು ಆಗಮಿಸಿದ್ದರು. ಆದರೆ ಅವರು ನಿವಾಸದಲ್ಲಿ ಇರಲಿಲ್ಲ. ಸೆಕ್ಷನ್‌ 188ರಡಿ ಪ್ರಕರಣ ದಾಖಲಾಗಿತ್ತು ಎಂದು ಸ್ಥಳೀಯ ಸೋಲಾ ಪೊಲೀಸ್‌ ಠಾಣೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಂಜೆ ಸುಮಾರು 4 ಗಂಟೆ ವೇಳೆಗೆ 40 ಮಂದಿ ವಿಹಿಂಪ ಕಾರ್ಯಕರ್ತರ ತಂಡವೊಂದು ಸೋಲಾ ಠಾಣೆಗೆ ಮುತ್ತಿಗೆ ಹಾಕಿ, ಕಾರ್ಯಾಧ್ಯಕ್ಷರನ್ನು ತಕ್ಷಣ ಪತ್ತೆ ಮಾಡಿಕೊಡಿ ಎಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿತು.’ನಮ್ಮ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಬೆಳಗ್ಗೆ 10 ಗಂಟೆಯಿಂದ ನಾಪತ್ತೆಯಾಗಿದ್ದಾರೆ. ಅವರನ್ನು ಪತ್ತೆಹಚ್ಚುವುದು ಮತ್ತು ಭದ್ರತೆ ಹೊಣೆ ಆಡಳಿತದ್ದು’ ಎಂದು ಗುಜರಾತ್ ವಿಎಚ್‌ಪಿ ಘಟಕದ ಪ್ರಧಾನ ಕಾರ್ಯದರ್ಶಿ ರಾಂಚೋಡ್‌ ಭರ್ವಾಡ್‌ ಸುದ್ದಿಗಾರರಿಗೆ ತಿಳಿಸಿದ್ದರು.ನಂತರ ವಿಹಿಂಪ ಕಾರ್ಯಕರ್ತರ ಮತ್ತೊಂದು ತಂಡ ಸರ್ಖೇಜ್‌-ಗಾಂಧಿನಗರ ಹೆದ್ದಾರಿಗೆ ತಡೆಯೊಡ್ಡಿದರು. ಬಳಿಕ ಪೊಲೀಸರು ತಡೆಯನ್ನು ತೆರವುಗೊಳಿಸಿದರು.

2 thoughts on “ನಾಪತ್ತೆಯಾಗಿದ್ದ ತೊಗಾಡಿಯಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ

Leave a Reply

Your email address will not be published. Required fields are marked *

error: Content is protected !!