RSS ನಿರುದ್ಯೋಗಿಗಳ ಸಂಘ: ನೂತನ ‘ಜನ ಸಾಮಾನ್ಯರ ಪಕ್ಷ’ ಅಧ್ಯಕ್ಷರಿಂದ ಟೀಕೆ

ಕೂಡಲ ಸಂಗಮ: ರಾಜ್ಯದಲ್ಲಿ ರಾಜಕೀಯ ಪಕ್ಷಗಳಿಗೇನೂ ಬರ ಇಲ್ಲ ಎಂಬಂತೆ ಇನ್ನೊಂದು ಹೊಸ ಪಕ್ಷ ಉದಯಗೊಂಡಿದೆ.ರೈತಮಹಿಳೆ ನಿಂಬೆವ್ವ ದೊರೆ ಅವರು ಸಸಿಗೆ ನೀರೆರೆಯುವ ಮೂಲಕ ನೂತನ ‘ಜನ ಸಾಮಾನ್ಯರ ಪಕ್ಷ’ವನ್ನು ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿ ಭಾನುವಾರ ಉದ್ಘಾಟಿಸಿದರು.

ಉದ್ಘಾಟನೆ ಬಳಿಕ ಮಾತನಾಡಿದ ಪಕ್ಷದ ಅಧ್ಯಕ್ಷ ಡಾ.ಅಯ್ಯಪ್ಪ ಅವರು, ‘ದಿನಕ್ಕೆ ಐದು ತರಹ ಡ್ರೆಸ್ ಹಾಕುವ ಪ್ರಧಾನಿ ರೈತರ‌ ಕೈ ಹಿಡಿಯೋದಿಲ್ಲ. ಪ್ರಧಾನಿ ಭಾಷಣ ಮಾಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಮೋದಿ ಬರೀ ಯುದ್ಧದ ಬಗ್ಗೆ ಮಾತನಾಡುತ್ತಾರೆ. ನಿಮಗೆ ಅನ್ನ ಬೇಕಾ, ಯುದ್ಧ ಬೇಕಾ’ ಎಂದು ಜನರ ಮುಂದೆ ಪ್ರಶ್ನೆ ಇಟ್ಟರು.

ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಜನಸಾಮಾನ್ಯರ ಪಕ್ಷದಿಂದ ‌₹20 ಕೋಟಿ ಖರ್ಚು ಮಾಡಲು ಸಿದ್ಧರಿದ್ದೇವೆ. ಶ್ರಮದಾನದ ಮೂಲಕ ಕೆಲಸ ಮಾಡುತ್ತೇವೆ. ಕಳಸಾಬಂಡೂರಿ ನಾಲಾ ಕಾಮಗಾರಿಗೆ ಅನುಮತಿ‌ ಕೊಡಿ. ಒಂದು ತಿಂಗಳಲ್ಲಿ ಕಾಮಗಾರಿ ಮಾಡಿ ಮುಗಿಸುತ್ತೇವೆ ಎಂದು ಅವರು ಕೇಂದ್ರ ಸರಕಾರಕ್ಕೆ ಸವಾಲು ಹಾಕಿದರು.

ಆರ್‌ಎಸ್‌ಎಸ್ ಒಂದು ನಿರುದ್ಯೋಗಿಗಳ ಸಂಘ. ಪ್ರಧಾನಿ‌ ಮೋದಿ ನಿರುದ್ಯೋಗಿಗಳ ಸಂಘದ ಸದಸ್ಯ. ಬರೀ ಯಾವ ರೀತಿ ಭಾಷಣ ಮಾಡಬೇಕು ಎಂದು ಯೋಚಿಸುತ್ತಾರೆ. ಬರಿ ಭಾಷಣ ಮಾಡಿ ಜನರ ದಿಕ್ಕು ತಪ್ಪಿಸುತ್ತಾರೆ ಎಂದು ಅಯ್ಯಪ್ಪ ಮೋದಿ ವಿರುದ್ಧ ವಾಗ್ದಾಳಿ ಮಾಡಿದರು.

ರಾಜ್ಯ ಮತ್ತು ಕೇಂದ್ರ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿವೆ. ಶೀಘ್ರದಲ್ಲೇ ಭ್ರಷ್ಟಾಚಾರದ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದರು.

ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಾರೆ. ಮಹಾದಾಯಿ ಹೋರಾಟಗಾರ ವಿಜಯ ಕುಲಕರ್ಣಿ, ಪಕ್ಷದ ಸಂಸ್ಥಾಪಕ ಅಯ್ಯಪ್ಪ, ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಭಾಗಿಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ವಿವಿಧೆಡೆಯಿಂದ ಸಾವಿರಾರು ಮಂದಿ ಭಾಗವಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!