ಬಗ್ದಾದ್ ನಲ್ಲಿ ಅವಳಿ ಬಾಂಬ್ ಸ್ಫೋಟ: 38 ಮಂದಿ ಬಲಿ

ಬಗ್ದಾದ್,ಜ.15: ಇರಾಕ್ ರಾಜಧಾನಿ ಬಾಗ್ದಾದ್ ನಲ್ಲಿ  ಇಂದು ಬೆಳಿಗ್ಗೆ  ಸಂಭವಿಸಿದ ಎರಡು ಭೀಕರ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 38 ಮಂದಿ ಬಲಿಯಾಗಿದ್ದಾರೆ.
ದಿನಗೂಲಿ ಕೆಲಸಕ್ಕಾಗಿ ಭಾರೀ ಜನರು ಸೇರುತ್ತಿರುವ ನಗರದ ತ್ವಯಿರಾನ್ ಚೌಕದಲ್ಲಿ (ಬಾಬು ಶ್ಶರ್ಜಿ) ಬೆಳಿಗ್ಗೆ ಸ್ಥಳೀಯ ಕಾಲಮಾನ 7:10ಕ್ಕೆ  ಬಾಂಬ್ ದಾಳಿ ನಡೆದಿದ್ದು ,ಸದ್ಯ ಆತ್ಮಾಹುತಿ ಬಾಂಬ್ ದಾಳಿಯ ಹೊಣೆಯನ್ನು ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ. ಭೀಕರ ಬಾಂಬ್ ದಾಳಿಯಲ್ಲಿ 38 ಮಂದಿ ಮರಣ ಹೊಂದಿದ್ದು, 105 ಮಂದಿ ಗಾಯಗೊಂಡಿದ್ದಾರೆ ಎಂದು ಪೂರ್ವ ಬಾಗ್ದಾದಿನ ಆರೋಗ್ಯ ಇಲಾಖೆ ಮುಖ್ಯಸ್ಥ ಡಾ. ಅಬ್ದೇಲ್ ಘನೀ ಅಲ್ ಸಾದಿ ಹೇಳಿದ್ದಾರೆ.
ಐಸಿಸ್ ನಿಂದ ಮುಕ್ತಿ ಗೊಂಡ ಸಂತಸದಲ್ಲಿದ್ದ ಇರಾಕಿಗಳಿಗೆ ಈ ಬಾಂಬ್ ದಾಳಿಯು ಯಾವುದೋ ಉಗ್ರ ಸಂಘಟನೆಯ  ಎಚ್ಚರಿಕೆಯ ಕರೆಘಂಟೆಯಾಗಿರ ಬಹುದೇ ಎಂದು ಸಂಶಯ ಉದ್ಭವಿಸಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಆಡಳಿತ ಸರ್ಕಾರದ ವೈಫಲ್ಯ ವನ್ನು ಎತ್ತಿ ತೋರಿಸಲು ರಾಜಕೀಯ ಪಕ್ಷಗಳ ಪ್ರೇರಣೆಯಿಂದ ಈ ರೀತಿ ಬಾಂಬ್ ಸ್ಪೋಟಗಳು ಈ ಹಿಂದೆಯೂ ನಡೆದಿತ್ತು, ಇದು ಸರ್ವೇಸಾಮಾನ್ಯವಾಗಿ ಮಾರ್ಪಟ್ಟಿದೆ ಎಂದಿರುವ ನಾಗರಿಕರು, ರಾಜಕೀಯ ಪಕ್ಷಗಳಿಗೆ ಛೀಮಾರಿ ಹಾಕಿದ್ದಾರೆ. ತನ್ನ ಕುಟುಂಬವನ್ನು ಸಲಹುವ ನಿಟ್ಟಿನಲ್ಲಿ ಬೆಳ್ಳಂಬೆಳಗ್ಗೆ ದಿನಗೂಲಿಗೆಂದು ತೆರಳಿರುವ ಬಡ ಕಾರ್ಮಿಕರನ್ನು ಗುರಿಯಾಗಿಸಿ ನಡೆಸುತ್ತಿರುವ ಇಂತಹಾ ಅಮಾನವೀಯ ದಾಳಿಯು  ಸಾರ್ವಜನಿಕರ ಸುರಕ್ಷತೆಗೆ ಸವಾಲಾಗಿ ಪರಿಣಮಿಸಿದೆ.

Leave a Reply

Your email address will not be published. Required fields are marked *

error: Content is protected !!