janadhvani

Kannada Online News Paper

ಭಾರತ-ಯುಎಇ ನಡುವಿನ ಹೊಸ ಎರಡು ಒಪ್ಪಂದಗಳಿಗೆ ಸಹಿ

ಅಬುಧಾಬಿ:ಹೊಸ ಎರಡು ಒಪ್ಪಂದಗಳಿಗೆ ಭಾರತ ಮತ್ತು ಯುಎಇ ಮಂಗಳವಾರ ಸಹಿ ಹಾಕಿವೆ. ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಎರಡು ದಿನಗಳ ಭೇಟಿಗಾಗಿ ಇಲ್ಲಿಗೆ ಆಗಮಿಸಿದ  ಸಂದರ್ಭದಲ್ಲಿ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಸೋಮವಾರ ಇಲ್ಲಿಗೆ ಆಗಮಿಸಿದ ಸುಶ್ಮಾರನ್ನು ಯುಎಇ ವಿದೇಶಾಂಗ ಸಚಿವ ಅಬ್ದುಲ್ಲಾಹ್ ಬಿನ್ ಝಾಯೀದ್ ಅಲ್ ನಹ್ಯಾನ್ ಸ್ವಾಗತಿಸಿದರು.

ವ್ಯಾಪಾರ, ಭದ್ರತೆ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿನ ಉಭಯ ದೇಶಗಳ ನಡುವಿನ ಸಹಕಾರವನ್ನು ವೃದ್ಧಿಸುವ ನಿಟ್ಟಿನಲ್ಲಿ ಉಭಯ ನಾಯಕರು ‘ಜಂಟಿ ಆಯೋಗ ಸಭೆ’ (ಜೆಸಿಎಂ) ಮಾತುಕತೆ ನಡೆಸಿದರು.

‘‘ಸುಶ್ಮಾ ಸ್ವರಾಜ್ ಮತ್ತು ಯುಎಇ ವಿದೇಶಾಂಗ ಸಚಿವ ಅಬ್ದುಲ್ಲಾಹ್ ಬಿನ್ ಝಾಯೀದ್ ಅಲ್ ನಹ್ಯಾನ್ ಭಾರತ-ಯುಎಇ 12ನೇ ಜಂಟಿ ಆಯೋಗ ಸಭೆ ನಡೆಸಿದರು. ಇಂಧನ, ಭದ್ರತೆ, ವ್ಯಾಪರ, ಹೂಡಿಕೆ, ಬಾಹ್ಯಾಕಾಶ, ರಕ್ಷಣೆ, ಕಾನ್ಸುಲರ್ ಹಾಗೂ ಇತರ ವಿಷಯಗಳಲ್ಲಿ ಸಮಗ್ರ ಮಾತುಕತೆ ನಡೆಸಿದರು’’ ಎಂದು ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

‘‘ಸುಶ್ಮಾ ಸ್ವರಾಜ್‌ರ ಯುಎಇ ಭೇಟಿಯ ವೇಳೆ ಎರಡು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ: ಒಂದು, ಕರೆನ್ಸಿ ವಿನಿಮಯ ಒಪ್ಪಂದ, ಇನ್ನೊಂದು, ಆಫ್ರಿಕದಲ್ಲಿ ಅಭಿವೃದ್ಧಿ ಸಹಕಾರಕ್ಕಾಗಿ ತಿಳುವಳಿಕೆ ಪತ್ರ’’ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಕರೆನ್ಸಿ ವಿನಿಮಯ ಎಂದರೆ ಎರಡು ದೇಶಗಳು ತಮ್ಮ ನಡುವಿನ ವ್ಯಾಪಾರವನ್ನು ತಮ್ಮದೇ ಕರೆನ್ಸಿಗಳಲ್ಲಿ ಮಾಡುವುದು ಹಾಗೂ ಆಮದು ಮತ್ತು ರಫ್ತುಗಳಿಗೆ ಪೂರ್ವ ನಿರ್ಧರಿತ ವಿನಿಮಯ ದರದಲ್ಲಿ ತಮ್ಮದೇ ಕರೆನ್ಸಿಗಳನ್ನು ಪಾವತಿಸುವುದು. ಅಂದರೆ, ಅವುಗಳ ನಡುವಿನ ವ್ಯವಹಾರದಲ್ಲಿ ಅಮೆರಿಕ ಡಾಲರ್‌ನಂತಹ ಮೂರನೇ ಕರೆನ್ಸಿ ಬರುವುದಿಲ್ಲ.

error: Content is protected !! Not allowed copy content from janadhvani.com