ಸುನ್ನೀ ಐಕ್ಯತೆಗೆ ಸಿದ್ಧ: ಸಮಸ್ತ ಮುಶಾವರದಲ್ಲಿ ಘೋಷಣೆ

ಕಲ್ಲಿಕೋಟೆ: ಸುನ್ನೀ ಐಕ್ಯತೆಗೆ ಸಿದ್ಧರಿರುವುದಾಗಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಮುಶಾವರ ಸಭೆ ಘೋಷಿಸಿದೆ.ವಿಶ್ವಾಸ ಕಾರ್ಯಗಳಲ್ಲಿ ಒಂದೇ ನಿಲುವು ಇರುವ ಸತ್ಯ ವಿಶ್ವಾಸಿ ವೃಂದ ಏಕತೆ ಯೊಂದಿಗೆ ಕಾರ್ಯಾಚರಣೆ ಮಾಡುವುದು ವರ್ತಮಾನ ಕಾಲದ ಅನಿವಾರ್ಯತೆಯಾಗಿದೆ.

ಧರ್ಮದಲ್ಲಿ ಕಲಬೆರಕೆ ಮಾಡಿ, ವಿವಿಧ ಹೆಸರುಗಳಲ್ಲಿ ಕಾರ್ಯಾಚರಣೆ ಮಾಡುತ್ತಿರುವ  ನೂತನವಾದಿ ಪಂಥಗಳು ಯುವಕರನ್ನು ಭಯೋತ್ಪಾದಕ ಸಂಘಟನೆ ಗಳಿಗೆ ಹತ್ತಿರವಾಗುವಂತೆ ಮಾಡುವ ಕೃತ್ಯಗಳು ಈಗಾಗಲೇ ಬೆಳಕಿಗೆ ಬಂದಿದ್ದು ಇದು ಅಪಾಯಕಾರಿ ಬೆಳವಣಿಗೆಯಾಗಿದೆ.

ಧರ್ಮದ ಬಗ್ಗೆ ಹೇಳುವ ಅಧಿಕಾರ ಉಲಮಾ ವರ್ಗಕ್ಕೆ ಮಾತ್ರ ಸೀಮಿತವಾಗಿದ್ದು ಇಂದು ಕೆಲವು ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ಧರ್ಮದ ಬಗ್ಗೆ ತಮಗೆ ಬೇಕಾದಂತೆ ವ್ಯಾಖ್ಯಾನಿಸಿ ಇಸ್ಲಾಂ ಧರ್ಮದ ಬಗ್ಗೆ ಇತರರು ತಪ್ಪು ತಿಳುವಳಿಕೆ ಇಡಲು ಕಾರಣರಾಗುತ್ತಿದ್ದಾರೆ.

ಸುನ್ನೀ ಏಕತೆ ಬಗ್ಗೆ ಚರ್ಚಿಸಲು ನಾಲ್ಕು ಮಂದಿ ಸದಸ್ಯರ ಸಮಿತಿ ರಚಿಸಲಾಗಿದ್ದು
ನೂತನ ಸಮಿತಿ ಮುಂದಿನ ಕಾರ್ಯ ಯೋಜನೆ ಗಳ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಸಮಸ್ತ ಮುಶಾವರ ತಿಳಿಸಿದೆ.

ಸಮಸ್ತ ಪ್ರಧಾನ ಕಾರ್ಯದರ್ಶಿ ಖಮರುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಉದ್ಘಾಟಿಸಿದರು.ಸಮಸ್ತ ಅಧ್ಯಕ್ಷ ಇ.ಸುಲೈಮಾನ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು.ಪೊನ್ಮಳ ಅಬ್ದುಲ್ ಖಾದರ್ ಮುಸ್ಲಿಯಾರ್,ಸಯ್ಯಿದ್ ಇಬ್ರಾಹಿಂ ಖಲೀಲುಲ್ ಬುಖಾರಿ ಕಡಲುಂಡಿ,ಸಯ್ಯಿದ್ ಝಿಯಾವುಲ್ ಮುಸ್ತಫಾ ಮಾಟ್ಟೂಲ್,ಕೆ.ಪಿ.ಮುಹಮ್ಮದ್ ಮುಸ್ಲಿಯಾರ್ ಕೊಂಬಂ ಮೊದಲಾದವರು ಭಾಗವಹಿಸಿದ್ದರು.
ಎ.ಪಿ.ಮುಹಮ್ಮದ್ ಮುಸ್ಲಿಯಾರ್ ಕಾಂತಪುರಂ ಸ್ವಾಗತಿಸಿ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಕೃತಜ್ಞತೆ ಸಲ್ಲಿಸಿದರು.

ಈ ಹಿಂದೆ ಸಮಸ್ತ ಇಕೆ ವಿಭಾಗ ಕೂಡಾ ಮುಶಾವರ ಸಭೆ ಸೇರಿ ಸುನ್ನೀ ಐಕ್ಯತೆ ಬಗ್ಗೆ ಚರ್ಚಿಸಲು,ಡಾ.ಬಹಾವುದ್ದೀನ್ ನದ್ವಿ, ಉಮರ್ ಫೈಝಿ ಮುಕ್ಕಂ, ಎ.ವಿ ಅಬ್ದುಲ್ ರಹ್ಮಾನ್ ಮುಸ್ಲಿಯಾರ್, ಹಮೀದ್ ಫೈಝಿ ಅಂಬಲಕ್ಕಡವ್ ಎಂಬೀ  ನಾಲ್ಕು ಮಂದಿ ಸದಸ್ಯರ ಸಮಿತಿಯನ್ನು ರಚಿಸಿದೆ. ಸಮಸ್ತ ಮುಶಾವರ ನೇಮಕ ಮಾಡಿರುವ ಈ ಉಪ ಸಮಿತಿಗಳು ಆದಷ್ಟು ಬೇಗ ಉಪಯುಕ್ತ ಚರ್ಚೆಗಳನ್ನು ನಡೆಸಿ ಎರಡೂ ವಿಭಾಗ ಸುನ್ನಿಗಳು ಒಂದಾಗುವಂತಾಗಲಿ ಎಂಬುದೇ ಸುನ್ನೀ ಜನ ಸಮೂಹದ ಅಭಿಲಾಷೆ.

ಈ ಬೆಳವಣಿಗೆಯು ನೂತನವಾದಿ ಸಂಘಟನೆಗಳಿಗೆ ಆತಂಕ ತಂದೊಡ್ಡಿದ್ದು, ಸುನ್ನಿ ಹೆಸರಿನಲ್ಲಿ ಸುನ್ನಿಗಳನ್ನು ಪರಸ್ಪರ ಕಚ್ಚಾಡುವಂತೆ ಷಡ್ಯಂತ್ರ ನಡೆಸುವ ಸಂಭವವಿದೆ.ಆದ್ದರಿಂದ ಸುನ್ನೀ ಕಾರ್ಯಕರ್ತರು ಸ್ವತಃ ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೆ ನಮ್ಮ ಉಲಮಾ ನಾಯಕರ ಆಜ್ಞೆಗಳನ್ನು ಮಾತ್ರ ಪಾಲಿಸಿ ತಾಳ್ಮೆಯಿಂದ ವರ್ತಿಸಬೇಕಾಗಿದೆ.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!