ದುಬೈ: ಎಮಿರೇಟ್ಸ್ ನಲ್ಲಿ ಮೌಲ್ಯ ವರ್ಧಿತ ಸೇವೆ (ವ್ಯಾಟ್)ಯ ಮರೆಯಲ್ಲಿ ಅಧಿಕ ವಸೂಲಿ ಮಾಡುವ ವ್ಯಾಪಾರಿಗಳ ವಿರುದ್ದ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಸಾರ್ವಜನಿಕ ರ ದೂರಿನ ಅನುಸಾರ ನಡೆದ ಕಾರ್ಯಾಚರಣೆಯಲ್ಲಿ 30 ಸ್ಥಾಪನೆಗಳು ಕಾನೂನು ಉಲ್ಲಂಘನೆ ಮಾಡಿರುವುದಾಗಿ ಪತ್ತೆ ಹಚ್ಚಲಾಗಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.ಅದೇ ವೇಳೆ ಮೌಲ್ಯ ವರ್ಧಿತ ಸೇವೆಗಳ ಕುರಿತು ಸಾರ್ವಜನಿಕರ ದೂರು ಹೆಚ್ಚಾಗಿ ಕೇಳಿಬರುತ್ತಿರುವ ಕಾರಣ ವ್ಯಾಪಾರ ವಲಯದ ತಪಾಸಣೆಗಾಗಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅದೇ ರೀತಿ ಎಮಿರೇಟ್ಸ್ ನ ವ್ಯಾವಹಾರಕ್ಕೆ ಸಂಬಂಧಿಸಿದ ದೂರಿಗೆ ‘ಅಹ್ಲನ್ ದುಬಾಯ್’ ಯ ಸಂಖ್ಯೆಯಾದ 600545555 ಗೆ ಕರೆಮಾಡಿ ವಿವರ ನೀಡುವಂತೆ ತಿಳಿಸಲಾಗಿದೆ.
ಸಚಿವಾಲಯದಿಂದ ನೋಂದಣಿ ಪಡೆದ ಎಲ್ಲಾ ವ್ಯಾಪಾರಿ ಕೇಂದ್ರಗಳು ತೆರಿಗೆಗೆ ಸಂಬಂಧಿಸಿದ ನಿರ್ದೇಶನ ಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅಧಿಕಾರಿಗಳು ಆದೇಶ ನೀಡಿದ್ದಾರೆ. ಕಾನೂನು ಪಾಲಿಸದೆ ಸುಲಿಗೆ ನಡೆಸುವವರ ವಿರುದ್ಧ ಕಾನೂನು ರೀತ್ಯಾ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಕೇಂದ್ರಗಳು ಸಣ್ಣದು- ದೊಡ್ಡದು ಎನ್ನುವ ಭೇದವಿಲ್ಲದೆ ಉಲ್ಲಂಘನೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ವರೆಗೆ ಸಚಿವಾಲಯಕ್ಕೆ ಉಲ್ಲಂಘನೆಯ 454 ದೂರುಗಳು ಲಭಿಸಿದೆ ಎಂದು ತಿಳಿದು ಬಂದಿದೆ. ವ್ಯಾಟ್ ಚಾಲ್ತಿಗೆ ಬಂದ ನಂತರ ದೂರುಗಳು ದಾಖಲಾಗುತ್ತಿದೆ. ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚು ವಸೂಲಿ ಮಾಡುವುದಾಗಿ ದೂರುದಾರರು ತಿಳಿಸಿದ್ದಾರೆ. ಅದೇ ವೇಳೆ ಪಡೆದ ಮೊತ್ತವನ್ನು ಬಿಲ್ನಲ್ಲಿ ನಮೂದಿಸದ ವ್ಯಾಪಾರಿಗಳೂ ಇದ್ದಾರೆ ಎನ್ನಲಾಗಿದೆ. ದೂರು ನೀಡಲ್ಪಟ್ಟ ವರ ಪೈಕಿ 77 ವ್ಯಾಪಾರಿಗಳನ್ನು ಕರೆಸಿ ಅವರಿಂದ ಮಾಹಿತಿ ಪಡೆಯಲಾಗಿದೆ ಎಂದು ಆರ್ಥಿಕ ಸಚಿವಾಲಯದ ಗ್ರಾಹಕ ಕ್ಷೇಮಾಭಿವೃದ್ಧಿ ಖಾತೆಯ ಆ್ಯಕ್ಟಿಂಗ್ ಡಯರಕ್ಟರ್ ಅಹ್ಮದ್ ಅಲ್ ಸಆಬಿ ತಿಳಿಸಿದ್ದಾರೆ.
ಬಿಲ್ ಮತ್ತು ಉತ್ಪನ್ನ ಗಳಲ್ಲಿ ತಾಳೆ ಬೇಕು. ಗ್ರಾಹಕರಿಗೆ ನೀಡುವ ಬಿಲ್ನಲ್ಲಿ ಪಡೆದ ವ್ಯಾಟ್ನ್ನು ಸ್ಪಷ್ಟವಾಗಿ ನಮೂದಿಸಿರಬೇಕು. ಮಾರಾಟಕ್ಕಿಡುವ ವಸ್ತುವಿನಲ್ಲಿ ಅದರೆ ಬೆಲೆ ಮತ್ತು ವ್ಯಾಟ್ ಮೊತ್ತವನ್ನು ಬೇರೆ ಬೇರೆಯಾಗಿ ನಮೂದಿಸಿರಬೇಕು ಎಂದು ನಿರ್ದೇಶನ ನೀಡಲಾಗಿದೆ.
ಮಾರಾಟ, ವಸ್ತುವಿನ ಬೆಲೆ, ಸೇವಾ ಶುಲ್ಕ, ತೆರಿಗೆ ಹೀಗೆ ಎಲ್ಲವನ್ನೂ ಬೇರೆ ಬೇರೆ ನಮೂದಿಸಿರಬೇಕೆಂದು ಕಂಪೆನಿಗಳಿಗೆ ಆದೇಶಿಸಲಾಗಿದೆ ಎಂದು ಸಆಬಿ ತಿಳಿಸಿದ್ದಾರೆ. ಇದೀಗ ಕರೆಸಲಾದ 77 ವ್ಯಾಪಾರಿಗಳು ತಪ್ಪಿತಸ್ಥರೆಂದು ತಿಳಿದುಬಂದರೆ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಶೇಕಡಾ 5 ಕ್ಕಿಂತ ಹೆಚ್ಚು ವಸೂಲಿ ಮಾಡಿದವರನ್ನು ಕಾನೂನು ಉಲ್ಲಂಘನೆ ಮಾಡಿದವರು ಎಂದು ಗಣಿಸಿ ಶಿಕ್ಷೆ ವಿಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.