PFI ಯನ್ನು ನಿಷೇಧಿಸಲು ಮುಂದಾಗಿರುವ ಕೇಂದ್ರ ಸರ್ಕಾರ

ಬೆಂಗಳೂರು:-ರಾಜ್ಯ ಸರ್ಕಾರ ಪಿಎಫ್‍ಐ, ಎಸ್‍ಡಿಪಿಐ, ಭಜರಂಗದಳ ಮತ್ತು ಶ್ರೀರಾಮಸೇನೆಯ ಸಂಘಟನೆಗಳನ್ನು ನಿಷೇಧ ಹೇರಲು ಚಿಂತನೆ ನಡೆಸಿತ್ತು, ಈಗಾಗಲೇ ಗೃಹ ಇಲಾಖೆ ಅಧಿಕಾರಿಗಳು ಈ ಸಂಘಟನೆಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸಿದ್ದತೆ ನಡೆಸಿತ್ತು. ಇದರ ಸುಳಿವು ಅರಿತಿರುವ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಶಿಫಾರಸ್ಸು ಮಾಡುವ ಮೊದಲೇ ಪಿಎಫ್‍ಐ ಸಂಘಟನೆಯನ್ನು ನಿಷೇಧಿಸಲು ಮುಂದಾಗಿದೆ.

ಈ ಸಂಘಟನೆ ಭಯೋತ್ಪಾದನೆ ಚಟುವಟಿಕೆ ಹಾಗೂ ನಿರ್ದಿಷ್ಟ ಸಂಘಟನೆಯ ಕಾರ್ಯಕರ್ತರ ಹತ್ಯೆ ಹಿನ್ನೆಲೆಯಲ್ಲಿ ನಿಷೇಧಕ್ಕೆ ಮುಂದಾಗಿದೆ.  ಕರ್ನಾಟಕ ವಿಧಾನಸಭೆ ಚುನಾವಣೆ ಏಪ್ರಿಲ್ ತಿಂಗಳಿನಲ್ಲಿ ನಡೆಯುವ ಸಾಧ್ಯತೆ ಇದೆ. ಕೇಂದ್ರ ಚುನಾವಣಾ ಆಯೋಗ ಮಾರ್ಚ್ ತಿಂಗಳಿನಲ್ಲಿ ಚುನಾವಣಾ ದಿನಾಂಕವನ್ನು ನಿಗದಿಪಡಿಸಲಿದೆ. ಆಯೋಗ ದಿನಾಂಕ ಘೋಷಿಸಿದರೆ ಅಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ. ಹೀಗಾಗಿ ಆಯೋಗ ದಿನಾಂಕ ನಿಗದಿಪಡಿಸುವ ಮೊದಲೇ ಕೇಂದ್ರ ಸರ್ಕಾರ ಪಿಎಫ್‍ಐಗೆ ಮೂಗುದಾರ ಹಾಕಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ನಿಷೇಧಕ್ಕೆ ಶಿಫಾರಸ್ಸು:

ಇನ್ನು ಪಿಎಫ್‍ಐ ಸಂಘಟನೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಕೇಂದ್ರ ಗೃಹ ಇಲಾಖೆಗೆ ಶಿಫಾರಸು ಮಾಡಿತ್ತು. ಕೇರಳದ ಕಣ್ಣನೂರು, ಕಾಸರಗೋಡು, ತಿರುವನಂತಪುರಂ, ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಕಾರವಾರ, ಶಿವಮೊಗ್ಗ , ಚಿಕ್ಕಮಗಳೂರು ಸೇರಿದಂತೆ ಮತ್ತಿತರ ಜಿಲ್ಲೆಗಳಲ್ಲಿ ಈ ಸಂಘಟನೆ ಕೋಮುಗಲಭೆ, ಭಯೋತ್ಪಾದನೆ ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ ಎಂದು ವರದಿ ನೀಡಲಾಗಿತ್ತು. ಈ ಹಿಂದೆ ನಿಷೇಧಕ್ಕೊಳಪಟ್ಟಿದ್ದ ಸಿಮಿ ಸಂಘಟನೆಯ ಪ್ರತಿರೂಪದಂತಿರುವ ಪಿಎಫ್‍ಐ ಮೂಲಭೂತ ಸಂಘಟನೆಯಾಗಿದ್ದು, ಮುಂದೊಂದು ದಿನ ದೇಶದ ಆಂತರಿಕ ಭದ್ರತೆಗೆ ಸವಾಲಾಗಿ ಪರಿಣಮಿಸಬಹುದು ಎಂದು ಎನ್‍ಐಎ ವರದಿಯಲ್ಲಿ ಉಲ್ಲೇಖ ಮಾಡಿತ್ತು.

ಪ್ರತ್ಯೇಕ ಕಾಶ್ಮೀರಕ್ಕಾಗಿ ಹೋರಾಟ ಮಾಡುತ್ತಿರುವ ಕೆಲವು ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆಗಳ ಜೊತೆ ಪಿಎಫ್‍ಐ ಕೈ ಜೋಡಿಸಿರುವ ಸಾಧ್ಯತೆ ಇದೆ. ಕೆಲವು ಕುಖ್ಯಾತ ಭಯೋತ್ಪಾದಕರಿಗೆ ಈ ಸಂಘಟನೆಗಳ ಸದಸ್ಯರು ಸಾಥ್ ನೀಡಿದ್ದಾರೆ ಎಂಬುದನ್ನು ಪತ್ತೆ ಮಾಡಲಾಗಿತ್ತು. ಎನ್‍ಐಎ ನೀಡಿರುವ ಶಿಫಾರಸ್ಸಿನಂತೆ ಕೇಂದ್ರ ಸರ್ಕಾರ ಪಿಎಫ್‍ಐನ್ನು ನಿಷೇಧಿಸಲು ಚಿಂತನೆ ನಡೆಸಿದೆ.

ಬೆಂಗಳೂರಿನ ಶಿವಾಜಿನಗರದಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆಯಲ್ಲಿ ಬಂಧನಕ್ಕೊಳಪಟ್ಟ ಕಾರ್ಯಕರ್ತರು ಇದೇ ಸಂಘಟನೆಗೆ ಸೇರಿದ್ದವರು. ಇತ್ತೀಚೆಗಷ್ಟೆ ನ್ಯಾಯಾಲಯ ಇವರನ್ನು ಆರೋಪಿಗಳೆಂದು ತೀರ್ಪು ನೀಡಿದ್ದು ಸದ್ಯದಲ್ಲೇ ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ. ಕೆಲ ದಿನಗಳ ಹಿಂದೆ ಬಿಜೆಪಿ ಸಂಸದರು ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಪಿಎಫ್‍ಐ ಸಂಘಟನೆಯನ್ನು ನಿಷೇಧಿಸುವಂತೆ ಮನವಿ ಮಾಡಿದ್ದರು. ಇತ್ತ ರಾಜ್ಯ ಸರ್ಕಾರ ಪಿಎಫ್‍ಐ, ಎಸ್‍ಡಿಪಿಐ, ಭಜರಂಗದಳ ಹಾಗೂ ಶ್ರೀರಾಮಸೇನೆಯನ್ನು ನಿಷೇಧಿಸಲು ಸಜ್ಜಾಗುತ್ತಿರುವಂತೆ ಕೇಂದ್ರ ಸರ್ಕಾರ ಮೊದಲೇ ನಿಷೇಧಾಸ್ತ್ರಕ್ಕೆ ಮುಂದಾಗಿದೆ. ಈ ಹಿಂದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸಿಮಿ ಸಂಘಟನೆಗೆ ನಿಷೇಧ ಹೇರಿದ್ದರು.

ಕೃಪೆ:ಈಸಂಜೆ

6 thoughts on “PFI ಯನ್ನು ನಿಷೇಧಿಸಲು ಮುಂದಾಗಿರುವ ಕೇಂದ್ರ ಸರ್ಕಾರ

  1. ಬಿ.ಜೆ.ಪಿ. ಮಾದ್ಯಮ ಜನದ್ವನಿ .. ಕೇವಲ ಆರೋಪದಿಂದ ನೀಷೆದ ಅಸಾದ್ಯ ಎಂಬುದನ್ನು ಜನದ್ವನಿ ಪತ್ರಕರ್ತ ಮಂಕುತಿಮ್ಮ ತಿಳಿಯದೇ ಹೋಗಿರೊದು ವಿಪರ್ಯಾಸ.

  2. ಜನಧ್ವನಿ ಪತ್ರಿಕೆ ಜನಪರವಾಗಿಯೇ ವರದಿ ಮಾಡುತ್ತಿದೆ ಎಂಬುದೇ ನನ್ನ ಅಭಿಪ್ರಾಯ, ಪಿಎಫ್ಐ ಯನ್ನು ಕೇಂದ್ರ ಸರಕಾರ ನಿಷೇಧಿಸಲು ಮುಂದಾಗುತ್ತಿದೆ ಎಂಬುದು ವರದಿಯಾಗಿದೆ,ಹೊರತು ನಿಷೇಧಿಸಬೇಕೆಂದು ಜನಧ್ವನಿ ಮನವಿ ಮಾಡಿದ್ದಲ್ಲ. ಆದ್ದರಿಂದ ಜನಧ್ವನಿ ಯ ಯಾವುದೇ ತಪ್ಪಿಲ್ಲ ಎಂದು ಭಾವಿಸುತ್ತೇನೆ.

Leave a Reply

Your email address will not be published. Required fields are marked *

error: Content is protected !!