ದ.ಕ ಜಿಲ್ಲೆಯಲ್ಲಿ ಸಂಘರ್ಷ ಹೆಚ್ಚಾಗಲು ಕೋಮುವಾದಿ ಸಂಘಟನೆಗಳೇ ಕಾರಣ-ಗೃಹ ಸಚಿವ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಕೋಮು ಸಂಘರ್ಷ ಹೆಚ್ಚಾಗಿದೆ. ಇದಕ್ಕೆ ಕೋಮುವಾದಿ ಸಂಘಟನೆಗಳೇ ಕಾರಣ. ಜನರಿಗೆ ಇದಾವುದೂ ಬೇಕಾಗಿಲ್ಲ. ಸಂಘಟನೆಗಳು ಸುಮ್ಮನಿದ್ದರೆ, ಇಂತಹ ಘಟನೆಗಳೂ ನಡೆಯುವುದಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮ್ಮನಿರದೇ ಇದ್ದರೆ, ಈ ಸಂಘಟನೆಗಳ ವಿರುದ್ಧ ಜನರೇ ರೊಚ್ಚಿಗೇಳಲಿದ್ದಾರೆ ಎಂದು ಎಚ್ಚರಿಸಿದರು.

ನಿಷೇಧ ಮಾಡುವುದಾದರೆ, ಎರಡೂ ಕಡೆಗಳ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಪಿಎಫ್ಐ, ಎಸ್ಡಿಪಿಐ ಒಂದೆಡೆಯಾದರೆ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರೂ 9 ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಮುಖ್ಯಮಂತ್ರಿ ಪ್ರವಾಸದಲ್ಲಿದ್ದು, ಅವರು ಮರಳಿದ ನಂತರ ಈ ಕುರಿತು‌ ವಿಸ್ತೃತ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಮೂಡಿಗೆರೆಯ ಧನ್ಯಶ್ರೀ ಪ್ರಕರಣದಲ್ಲಿ ಬಿಜೆಪಿಯವರ ದ್ವಂದ್ವ ನಿಲುವು ಬಯಲಾಗಿದೆ. ಮೇಸ್ತ ಪ್ರಕರಣದಲ್ಲಿ ನಮ್ಮ ಕಾರ್ಯಕರ್ತನ ಕೊಲೆ ಅಗಿದೆ ಎಂದು ಬೊಬ್ಬೆ ಇಟ್ಟವರು, ಅವರದ್ದೆ ಪಕ್ಷದ ಮುಖಂಡ‌ ಮಾಡಿರುವ ಅಪರಾಧವನ್ನು ಖಂಡಿಸುವುದಕ್ಕೂ ಹೋಗಿಲ್ಲ ಎಂದು‌ ಟೀಕಿಸಿದರು.

ಬಿಜೆಪಿಯವರು ಸ್ವಾತಂತ್ರ್ಯ ಚಳವಳಿಯಲ್ಲಿ‌ ಭಾಗವಹಿಸಿಲ್ಲ. ಜೈಲೂ ಸೇರಿಲ್ಲ. ಪಾಪ ಅದಕ್ಕಾಗಿ ಈಗ ಜೈಲ್ ಭರೋ ಚಳವಳಿ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ‌ ಪ್ರತಿಭಟಿಸುವ ಹಕ್ಕು ಎಲ್ಲರಿಗೆ ಇದೆ. ಆದರೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಪೊಲೀಸರು ಒಳ್ಳೆಯ ಕೆಲಸ‌ ಮಾಡಿದ್ದಾರೆ.‌ ಮೂರೂ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು.

ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ, ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ ಅವರುಗಳು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕದಡುವ ಕೆಲಸ ಮಾಡಿದ್ದಾರೆ. ಹಾಗಾಗಿ ಇವರ ಹೇಳಿಕೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ಉಗ್ರಗಾಮಿ ಎಂಬ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!