janadhvani

Kannada Online News Paper

ಎತ್ತ ಸಾಗುತ್ತಿದೆ ದೇಶದ ನ್ಯಾಯಾಂಗ ವ್ಯವಸ್ಥೆ?!

ಹೌದು ,‌ ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆ ಯಾವ ಕಡೆಗೆ ಸಾಗುತ್ತಿದೆ ಎಂಬುದು ಈಗ ಎಲ್ಲರ ಮನಸ್ಸಿನಲ್ಲಿ ಮೂಡಿರುವಂತಹ ವಿಚಾರ. ಇದಕ್ಕೆ ಬಲವಾದ ಕಾರಣವೇನೆಂದರೆ, ದೇಶದ ಸರ್ವೋಚ್ಚ ನ್ಯಾಯಾಲಯ ಎನಿಸಿಕೊಂಡಿರುವ ಸುಪ್ರೀಂ ಕೋರ್ಟ್ ನೀಡುತ್ತಿರುವ ಕೆಲವೊಂದು ಅವೈಜ್ಙಾನಿಕ ತೀರ್ಪುಗಳು. ಎರಡು ಮೂರು ದಿನಗಳ ಹಿಂದೆ ಸುಪ್ರೀಂ ಕೊರ್ಟ್ ತೀರ್ಪೊಂದನ್ನು ಹೊರಡಿಸಿತ್ತು. ಅದೇನೆಂದರೆ, ಸ್ತ್ರೀ ಪುರುಷರ ನಡುವೆ ಇರುವ ಅನೈತಿಕ ಸಂಬಂಧ ಅಪರಾಧವಲ್ಲ.
ಇದು ಒಂದು ರೀತಿಯಲ್ಲಿ ಅತ್ಯಾಚಾರಿಗಳಿಗೆ ಹಾಗೂ ಅನೈತಿಕ ಸಂಬಂಧ ಹೊಂದಿರುವವರಿಗೆ ಪರವಾನಿಗೆ ನೀಡಿದ ಹಾಗೆ. ಅತ್ಯಾಚಾರ ಹಾಗೂ ಅನೈತಿಕ ಸಂಬಂಧ ಇಂದು ನಮ್ಮ ದೇಶಕ್ಕೆ ಅಂಟಿಕೊಂಡಿರುವ ಬಹುದೊಡ್ಡ ಸಮಸ್ಯೆಯಾಗಿದೆ. ಇಂತಹ ಸನ್ನಿವೇಶದಲ್ಲಿ ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯ ಇಂತಹ ಒಂದು ಅವೈಜ್ಙಾನಿಕ ತೀರ್ಪು ನೀಡಿದನ್ನು ನೋಡಿದರೆ, ಖಂಡಿತವಾಗಿಯೂ ನಮ್ಮ ದೇಶದ ಕಾನೂನು ವ್ಯವಸ್ಥೆಯ ಬಗ್ಗೆ ಜನಸಾಮಾನ್ಯರಲ್ಲಿ ಆತಂಕ ಉಂಟುಮಾಡಿದೆ.
ಇಂದು ನಮ್ಮ ದೇಶಕ್ಕೆ ಅಂಟಿಕೊಂಡಿರುವ ಹಲವಾರು ಸಮಸ್ಯೆಗಳು ಜನಸಾಮಾನ್ಯರನ್ನು ಹಲವು ರೀತಿಯಲ್ಲಿ ಕಾಡುತ್ತಿದೆ. ಇದರ ಬಗ್ಗೆ ಒಂದು ಸಮಗ್ರ ಅಧ್ಯಯನ ನಡೆಸಿ , ಅದರ ಪರಿಹಾರಕ್ಕೆ ಸೂಕ್ತವಾದ ಒಂದು ಕಾನೂನು ತರುವ ಬದಲು ,ಅನೈತಿಕ ಸಂಬಂಧ ಅಪರಾಧವಲ್ಲ ಎಂಬ ತೀರ್ಪು‌ ನೀಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯ ಮಾಡಿದೆ..
ದೇಶದ ಸರ್ವೋಚ್ಚ ನ್ಯಾಯಾಲಯದೊಂದಿಗೆ ನಮ್ಮೆಲ್ಲರ ವಿನಂತಿಯೇನೆಂದರೆ, ಈಗಾಗಲೇ ನೀಡಿರುವಂತಹ ತೀರ್ಪನ್ನು ಪುನಃ ಪರಿಶೋಧಿಸಿ,ಅನೈತಿಕ ಸಂಬಂಧ ಹಾಗೂ ಅತ್ಯಾಚಾರ ತಡೆಗಟ್ಟುವ ರೀತಿಯ ಕಾನೂನೊಂದನ್ನು ತರಬೇಕು. ಹಾಗಾಗಿದ್ದಲ್ಲಿ ಮಾತ್ರ ಈ ಭವ್ಯ ಭಾರತದಲ್ಲಿ ಅರಾಜಕತೆಯನ್ನು ಹೋಗಲಾಡಿಸಬಹುದು. ಇಲ್ಲವಾದಲ್ಲಿ ಸುಂದರವಾದ ಈ ಭಾರತ ಕೂಡ ಮುಂದೊಂದು ದಿನ ಅನೈತಿಕತೆಯ ಕೇಂದ್ರವಾಗಿ ಮಾರ್ಪಾಡಾಗುವ ಎಲ್ಲಾ ಸಾಧ್ಯತೆ ಇದೆ.
ಸಾರ್ವಜನಿಕರು ಇದರ ಬಗ್ಗೆ ಕೂಡಲೇ ಎಚ್ಚೆತ್ತುಕೊಳ್ಳುವುದು ಬಹಳ ಅಗತ್ಯ ಎಂದು ಹೇಳುತ್ತಾ ನನ್ನ ಪುಟ್ಟ ಅನಿಸಿಕೆಗೆ ವಿರಾಮ.

✍ ಹಸೈನಾರ್ ಕಾಟಿಪಳ್ಳ

error: Content is protected !! Not allowed copy content from janadhvani.com