janadhvani

Kannada Online News Paper

ಫ್ರಿಡ್ಜ್,ವಾಶಿಂಗ್ ಮೆಷಿನ್ ಸಮೇತ 19 ವಸ್ತುಗಳ ದರ ಹೆಚ್ಚಳ- ನಾಳೆಯಿಂದ ಜಾರಿ

ನವದೆಹಲಿ: ಏ.ಸಿ, ರೆಫ್ರಿಜರೇಟರ್‌, ವಾಷಿಂಗ್‌ಮಷಿನ್‌, ವಿಮಾನ ಇಂಧನ ಒಳಗೊಂಡಂತೆ 19 ಸರಕುಗಳ ಆಮದು ಸುಂಕವನ್ನು ಹೆಚ್ಚಿಸಲಾಗಿದೆ.ಅಗತ್ಯವಲ್ಲದ ಸರಕುಗಳ ಆಮದು ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಬುಧವಾರ ಮಧ್ಯರಾತ್ರಿಯಿಂದಲೇ ಇದು ಜಾರಿಗೆ ಬರಲಿದೆ.

ಆಮದು ಸುಂಕ ಹೆಚ್ಚಿಸಿದ ಸರಕುಗಳ ಪಟ್ಟಿಯಲ್ಲಿ ಸ್ಪೀಕರ್‌, ರೇಡಿಯಲ್‌ ಕಾರ್‌ ಟೈರ್‌, ಚಿನ್ನಾಭರಣಗಳು, ಅಡುಗೆ ಮನೆ ಪರಿಕರ, ಕೆಲ ಪ್ಲಾಸ್ಟಿಕ್‌ ಸರಕು ಮತ್ತು ಸೂಟ್‌ಕೇಸ್‌ಗಳು ಸೇರಿವೆ.

ಕೆಲ ಸರಕುಗಳ ಆಮದು ಪ್ರಮಾಣಕ್ಕೆ ಕಡಿವಾಣ ವಿಧಿಸಲು ಕೇಂದ್ರ ಸರ್ಕಾರವು ಮೂಲ ಕಸ್ಟಮ್ಸ್‌ ಡ್ಯೂಟಿಯಲ್ಲಿ ಹೆಚ್ಚಳ ಮಾಡಿದೆ. ಇದರಿಂದ ಚಾಲ್ತಿ ಖಾತೆ ಕೊರತೆಯು ಕಡಿಮೆಯಾಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಕೆಲ ಏ.ಸಿ, ರೆಫ್ರಿಜರೇಟರ್‌ ಮತ್ತು 10 ಕೆ.ಜಿಗಿಂತ ಕಡಿಮೆ ತೂಕದ ವಾಷಿಂಗ್ ಮಷಿನ್‌ಗಳ ಮೇಲಿನ ಆಮದು ಸುಂಕವನ್ನು ದುಪ್ಪಟ್ಟುಗೊಳಿಸಿ ಶೇ 20ರಷ್ಟಕ್ಕೆ ಹೆಚ್ಚಿಸಲಾಗಿದೆ.

ಹೆಚ್ಚುತ್ತಿರುವ ಚಾಲ್ತಿ ಖಾತೆ ಕೊರತೆಗೆ ಕಡಿವಾಣ ವಿಧಿಸಲು ಮತ್ತು ಬಂಡವಾಳ ಹೊರ ಹರಿವು ತಗ್ಗಿಸಲು ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಐದು ಅಂಶಗಳ ಕಾರ್ಯಕ್ರಮಗಳ ಅಡಿ, ಅವಶ್ಯಕವಲ್ಲದ ಸರಕುಗಳ ಆಮದು ನಿರ್ಬಂಧಿಸುವುದೂ ಸೇರಿದೆ.

ವಿದೇಶಿ ವಿನಿಮಯದ ಒಳಹರಿವು ಮತ್ತು ಹೊರ ಹರಿವಿನ ನಡುವಣ ವ್ಯತ್ಯಾಸವೇ ಚಾಲ್ತಿ ಖಾತೆ ಕೊರತೆ (ಸಿಎಡಿ) ಆಗಿರುತ್ತದೆ. ಆಮದು ಮತ್ತು ರಫ್ತು ವಹಿವಾಟಿನ ವ್ಯತ್ಯಸವೂ ಇದಾಗಿರುತ್ತದೆ.

ಹಿಂದಿನ ಹಣಕಾಸು ವರ್ಷದಲ್ಲಿ ಇಂತಹ ಅವಶ್ಯಕವಲ್ಲದ ಸರಕುಗಳನ್ನು ಆಮದಿಗೆ ಮಾಡಿದ ವೆಚ್ಚವು ₹ 86 ಸಾವಿರ ಕೋಟಿಗಳಾಗಿತ್ತು ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

error: Content is protected !! Not allowed copy content from janadhvani.com