ಜಾಲತಾಣದಲ್ಲಿ ಕಿರುಕುಳ: ಎಸ್‌ಎಫ್‌ಐ ನಾಯಕಿಯಿಂದ ಪೊಲೀಸರಿಗೆ ದೂರು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಘಟಕದ ಭಾರತೀಯ ವಿದ್ಯಾರ್ಥಿ ಫೆಡರೇಷನ್‌ (ಎಸ್‌ಎಫ್‌ಐ)  ಕಾರ್ಯದರ್ಶಿಯಾಗಿರುವ ಎಂ.ಕಾಂ ವಿದ್ಯಾರ್ಥಿನಿ ಮಾಧುರಿ ಅವರು ಮುಸ್ಲಿಂ ವಿದ್ಯಾರ್ಥಿಗಳ ಜತೆಗಿದ್ದ ಫೋಟೊ ಬಳಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಅಪಪ್ರಚಾರ ನಡೆಸುತ್ತಿದ್ದು, ಈ ಸಂಬಂಧ ವಿದ್ಯಾರ್ಥಿ ನಾಯಕಿ ಪೊಲೀಸರಿಗೆ ದೂರು ನೀಡಿದ್ದಾರೆ.ಮಾಧುರಿ ಅವರ ತಾಯಿ ಭಾರತಿ ಬೋಳಾರ ಸಿಪಿಎಂ ಸಂಯೋಜಿತ ಬೀಡಿ ಕಾರ್ಮಿಕರ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಮಗಳು ಅದೇ ಪಕ್ಷದ ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ ಜತೆ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷ ಅಧ್ಯಯನ ಶಿಬಿರವೊಂದಕ್ಕೆ ತೆರಳುತ್ತಿದ್ದಾಗ ಬಸ್‌ನಲ್ಲಿ ಸೆಲ್ಫಿ ಚಿತ್ರ ಸೆರೆ ಹಿಡಿದಿದ್ದು, ಅದನ್ನು ಸಹ ಕಾರ್ಯಕರ್ಯತರು ಫೇಸ್‌ಬುಕ್‌ನಲ್ಲಿ ಹಾಕಿದ್ದರು. ಎಸ್‌ಎಫ್‌ಐ ಕಾರ್ಯಕರ್ತರಾದ ಹಂಝ, ಸುಹಾಸ್‌ ಅಡಿಗ ಮತ್ತು ಗಣೇಶ್ ಬೋಳಾರ ಚಿತ್ರದಲ್ಲಿದ್ದರು.

‘ಹಿಂದೂಪರ ಕಾರ್ಯಕರ್ತರು ಎಂದು ಹೇಳಿಕೊಂಡಿರುವ ಕೆಲವರು ಕೆಲವು ದಿನಗಳಿಂದ ಈ ಚಿತ್ರವನ್ನು ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ‘ಹಂಝ ಕಿನ್ಯಾ ಹಿಂದೂ ಹುಡುಗಿಯರ ಜತೆ ಬೈಕ್‌ನಲ್ಲಿ ಓಡಾಡುತ್ತಿರುತ್ತಾನೆ. ಈತನ ಮೇಲೆ ಹಿಂದೂ ಕಾರ್ಯಕರ್ತರು ನಿಗಾ ಇಡಬೇಕು’ ಎಂಬ ಅಡಿಬರಹದೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ನನಗೆ ಮಾನಸಿಕ ಹಿಂಸೆಯಾಗಿದೆ’ ಎಂದು ಮಾಧುರಿ ಮಂಗಳೂರು ನಗರ ಸೈಬರ್‌ ಅಪರಾಧ ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಭಿನ್ನ ಧರ್ಮದ ಹುಡುಗ, ಹುಡುಗಿಯರು ಒಟ್ಟಾಗಿ ತಿರುಗಾಡುವುದು ಲವ್‌ ಜಿಹಾದ್‌ಗೆ ಕಾರಣವಾಗುತ್ತಿದೆ ಎಂದು ಆರೋಪಿಸಿ ಕೆಲವು ಸಂಘಟನೆಗಳ ಕಾರ್ಯಕರ್ತರು ಇತ್ತೀಚೆಗೆ ಹಲವೆಡೆ ಯುವಕ, ಯುವತಿಯರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಇದೇ ರೀತಿ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಸಿದ ಅಪಪ್ರಚಾರದಿಂದ ಮನನೊಂದ ವಿದ್ಯಾರ್ಥಿನಿಯೊಬ್ಬರು ಮೂಡಿಗೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ತಮ್ಮ ವಿರುದ್ಧ ಅಪಪ್ರಚಾರ ನಡೆಸಿ ಮಾನಸಿಕ ಹಿಂಸೆ, ನೋವಿಗೆ ಕಾರಣವಾಗಿರುವವರನ್ನು ಪತ್ತೆಮಾಡಿ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.

ತಾಯಿಯೊಂದಿಗೆ ಮಂಗಳೂರು ನಗರ ಪೊಲೀಸ್ ಕಮಿಷನರ್‌ ಟಿ.ಆರ್‌.ಸುರೇಶ್‌ ಅವರನ್ನು ಭೇಟಿ ಮಾಡಿದ ಮಾಧುರಿ, ತ್ವರಿತ ಕ್ರಮಕ್ಕೆ ಆಗ್ರಹಿಸಿದರು. ನಂತರ ಸೈಬರ್‌ ಅಪರಾಧ ಠಾಣೆಯಲ್ಲಿ ದೂರು ದಾಖಲಿಸಿದರು. ಎಫ್‌ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!