janadhvani

Kannada Online News Paper

ಕೇರಳ: ಉಕ್ಕಿ ಹರಿದ ಜಲಾಶಯಗಳು: 6,500 ಕುಟುಂಬಗಳ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ

ಪತ್ತನಂತಿಟ್ಟ: ಕೇರಳದಲ್ಲಿ ಬಿರುಸಿನ ಮಳೆಯಾಗುತ್ತಿದ್ದು, ಶುಕ್ರವಾರ ಸಂಜೆ ಹೊತ್ತಿಗೆ ಮಳೆ ನಿಯಂತ್ರಣಕ್ಕೆ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ರಾಜ್ಯದ ಎಲ್ಲ ಭಾಗಗಳಲ್ಲೂ ಮಳೆಯ ಅಬ್ಬರ ಜೋರಾಗಿದ್ದು ಜಲಾಶಯಗಳು ತುಂಬಿ ಹರಿದಿದೆ. ಇಡುಕ್ಕಿ ಅಣೆಕಟ್ಟಿನಲ್ಲಿ ನೀರಿನ ಹರಿವು ಜಾಸ್ತಿಯಾಗಿದ್ದು, 5 ಶಟರ್‌ಗಳಲ್ಲಿ ಮೂರು ಶಟರ್‌ಗಳನ್ನು 1 ಮೀಟರ್ ಮತ್ತು ಎರಡು ಶಟರ್‌ಗಳನ್ನು 50 ಸೆಂಟಿಮೀಟರ್‌ನಷ್ಟು ತೆರೆಯಲಾಗಿದೆ, ಶಟರ್ ತೆರೆದು ನೀರು ಹೊರಕ್ಕೆ ಹರಿಯ ಬಿಟ್ಟಿರುವುದರಿಂದ ಚೆರುತೋಣಿ ನಗರ ಸಂಪೂರ್ಣ ಜಲಾವೃತವಾಗಿದೆ. 5ನೇ ಶಟರ್ ತೆರೆದಿರುವುದಿಂದ ಪೆರಿಯಾರ್ ನದಿ ಉಕ್ಕಿ ಹರಿಯುತ್ತಿದೆ. ಪೆರಿಯಾರ್ ನದಿ ತಟದಲ್ಲಿರುವ 6,500 ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ಕಾರ್ಯ ಮುಂದುವರಿದಿದೆ.

ಚೆರುತೋಣಿ ನಗರದ ರಸ್ತೆ ಕುಸಿದಿದ್ದು, ಚೆರುತೋಣಿ-ಕಟ್ಟಪ್ಪನ ರಸ್ತೆಯಲ್ಲಿ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇಲ್ಲಿ ವಿದ್ಯುಕ್ ಸಂಪರ್ಕವೂ ಕಡಿತಗೊಂಡಿದೆ, 5 ಶಟರ್‌ಗಳನ್ನು ತೆರೆದಿರುವುದರಿಂದ ಪ್ರತಿ ಸೆಕೆಂಡಿಗೆ 300 ಕ್ಯುಸೆಕ್ ನೀರು ಹೊರ ಹರಿಯುತ್ತಿದ್ದು, ಮುಂದಿನ ಹಂತಗಳಲ್ಲಿ 499, 500, 600 ಕ್ಯುಸೆಕ್ ನೀರನ್ನು ಹೊರ ಹರಿಯಬಿಡಲಾಗುವುದು  ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಸದ್ಯ ನೀರಿನ ಮಟ್ಟ 2401. 72 ಅಡಿಯಿದೆ, ಅಣೆಕಟ್ಟಿನ ನೀರು ಸಂಗ್ರಹ ಸಾಮರ್ಥ್ಯ  2403 ಅಡಿಯಷ್ಟಿದೆ. ಇಡುಕ್ಕಿ ಜಿಲ್ಲೆಯ ವಾಳತ್ತೋಪ್ಪ್, ಕಂಞುಂಕ್ಕುಳಿ, ಮರಿಯಾಪುರಂ, ವಾತ್ತಿಕ್ಕುಡಿ ಪಂಚಾಯತ್‍ಗಳು ಪ್ರವಾಹದಿಂದ ನಲುಗಿವೆ. ವಾಳತ್ತೋಪ್ಪಿಲ್‍ನಲ್ಲಿ 36  ಮತ್ತು ಕಂಞುಂಕ್ಕುಳಿಯಲ್ಲಿ 80 ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ಇಡುಕ್ಕಿಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಹರಿಯಬಿಟ್ಟರೆ ಇಡಮಲಯಾರ್ ಅಣೆಕಟ್ಟಿನಲ್ಲಿ ಶಟರ್ ಕೆಳಗಿಳಿಸಿ ನೀರನ್ನು ನಿಯಂತ್ರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ.

ಸದ್ಯದ ಪರಿಸ್ಥಿತಿಯಲ್ಲಿ ಪೆರಿಯಾರ್ ನದಿ ಇಬ್ಭಾಗವಾಗುವ  ಆಲುವಾ ಮಣಪ್ಪುರಂ ಪ್ರದೇಶ ಮುಳುಗಡೆಯಾಗಿದೆ. ಅಂಗಮಾಲಿ, ಕಾಲಡಿ ಮೊದಲಾದ ಪ್ರದೇಶಗಳು ಪ್ರವಾಹ ಭೀತಿಯಲ್ಲಿದೆ. ಪೆರಿಯಾರ್ ನದಿ ತೀರದಲ್ಲಿ ವಾಸಿಸುವರು ಹೆಚ್ಚಿನ ಜಾಗ್ರತೆ ಪಾಲಿಸಬೇಕೆಂದು ಎಂದು ಅಧಿಕೃತರು  ಹೇಳಿದ್ದಾರೆ.  ಈಗಾಗಲೇ ಏಳು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಸಾವಿನ ಸಂಖ್ಯೆ  27:ಭಾರೀ ಪ್ರವಾಹದಿಂದಾಗಿ ಶುಕ್ರವಾರ ಸಾವಿನ ಸಂಖ್ಯೆ 27ಕ್ಕೇರಿದೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.  ಗುರುವಾರ ಸಾವಿನ ಸಂಖ್ಯೆ 20 ಆಗಿತ್ತು.

error: Content is protected !! Not allowed copy content from janadhvani.com