ದೇಶದಲ್ಲಿ ಎಲ್ಲ ಪ್ರಾಣಿಗಳ ಹತ್ಯೆ ನಿಷೇಧ ಮಾಡಲಿ-ರಾಮಲಿಂಗಾರೆಡ್ಡಿ

ಬೆಂಗಳೂರು: ದೇಶದಲ್ಲಿ ಎಲ್ಲ ಪ್ರಾಣಿಗಳ ಹತ್ಯೆ ನಿಷೇಧ ಮಾಡಲಿ ಎಂದು ರಾಮಲಿಂಗಾರೆಡ್ಡಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆಗೆ ತಿರುಗೇಟು ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಪ್ರತಿದಿನ ಕೋಳಿ, ಕುರಿ, ಹಂದಿ ಸೇರಿದಂತೆ ಲಕ್ಷಾಂತರ ಪ್ರಾಣಿಗಳ ಹತ್ಯೆಯಾಗುತ್ತದೆ. ಗೋ ಮಾತ್ರ ಏಕೆ, ಎಲ್ಲ ಪ್ರಾಣಿಗಳ ವಧೆಯನ್ನೂ ನಿಲ್ಲಿಸುವ ಅಗತ್ಯವಿದೆ.

ರಾಷ್ಟ್ರೀಯ ಮಟ್ಟದಲ್ಲಿ ಗೋ ಹತ್ಯೆಯನ್ನು ನಿಷೇಧಿಸಲಿ ಮತ್ತು ಗೋ ಮಾಂಸ ರಫ್ತು ಮಾಡುವುದನ್ನು ನಿಯಂತ್ರಿಸಲಿ ಎಂದು ಅವರು ಹೇಳಿದರು.  ಆದಿತ್ಯನಾಥ್ ಅವರ ರಾಜ್ಯದಲ್ಲಿ ಮೊದಲು ಕಾನೂನು ಸುವ್ಯವಸ್ಥೆಯನ್ನು ಸರಿಯಾಗಿ ಕಾಪಾಡಲಿ. ಜಂಗಲ್ ರಾಜ್ಯವಾಗಿರುವ ಉತ್ತರ ಪ್ರದೇಶವನ್ನು ಮೊದಲು ಸರಿಪಡಿಸಲಿ. ಆಮೇಲೆ ಬೇರೆ ರಾಜ್ಯದ ಬಗ್ಗೆ ಮಾತನಾಡಲಿ. ಅಲ್ಲಿ ಶಿಶುಗಳ ಸರಣಿ ಸಾವು ಸಂಭವಿಸಿದೆ. ಆ ಬಗ್ಗೆ ಮಾತನಾಡದ ಯೋಗಿಯವರು ಇಲ್ಲಿನ ಪರಿಸ್ಥಿತಿ ಬಗ್ಗೆ ಮಾತನಾಡುತ್ತಾರೆ. ನಾವೆಲ್ಲ ಹಿಂದೂಗಳಲ್ಲವೆ ಎಂದು ಪ್ರಶ್ನಿಸಿದರು. ಶೋಭಾ ಕರಂದ್ಲಾಜೆಯಂತಹವರು ರಾಜಕೀಯದಲ್ಲಿರಲು ನಾಲಾಯಕ್ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದರು.

ಗೃಹ ಸಚಿವರಿಗೆ ನಿಮ್ಹಾನ್ಸ್‍ನಲ್ಲಿ ಚಿಕಿತ್ಸೆ ಕೊಡಿಸಬೇಕೆಂಬ ಶೋಭಾ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಾಮಲಿಂಗಾರೆಡ್ಡಿ ಶೋಭಾ ಅವರು ಬಂದಿರುವುದೇ ನಿಮ್ಹಾನ್ಸ್‍ನಿಂದ ಎಂದರು. ಯಾರ ಬಗ್ಗೆಯಾದರೂ ಮಾತನಾಡುವಾಗ ಗೌರವವಿರಬೇಕು. ಇವರೆಲ್ಲ ರಾಜಕೀಯದಲ್ಲಿರಲು ನಾಲಾಯಕ್ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಿಎಫ್‍ಐ ಜತೆ ಬಿಜೆಪಿಯವರ ನಿಕಟ ಸಂಪರ್ಕವಿದೆ. ಸವಣೂರು ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಪಿಎಫ್‍ಐ ಜತೆ ಹೊಂದಾಣಿಕೆ ಮಾಡಿಕೊಂಡಿತ್ತು. ತಾಲಿಬಾನ್‍ಗಳ ಜತೆ ನಾವು ಹೊಂದಾಣಿಕೆ ಮಾಡಿಕೊಂಡಿಲ್ಲ. ಅದನ್ನು ಬಿಜೆಪಿಯವರು ಮಾಡಿದ್ದಾರೆ. ಹೀಗಿದ್ದು ಕೂಡ ಅನಗತ್ಯ ಆರೋಪ ಮಾಡುತ್ತಾರೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!