ಕಲ್ಲಿಕೋಟೆ: ಯಾವುದೇ ರಾಜಕೀಯ ಪಕ್ಷಗಳ ಕೈಗೊಂಬೆಯಾಗಿರಲು ತಾವು ಸಿದ್ದರಿಲ್ಲ ಎಂದು ಅಖಿಲಭಾರತ ಸುನ್ನಿ ಉಲಮಾ ಒಕ್ಕೂಟದ ಪ್ರ.ಕಾರ್ಯದರ್ಶಿ ಕಾಂತಪುರಂ ಎ.ಪಿ. ಅಬುಬೂಕರ್ ಮುಸ್ಲಿಯಾರ್ ಹೇಳಿದ್ದಾರೆ.
ಅವರು ಮರ್ಕಝ್ ರೂಬಿ ಜುಬಿಲಿಯ ಸನದುದಾನ ಸಮಾರೋಪದ ಸನದುದಾನ ಭಾಷಣ ಮಾಡುತ್ತಿದ್ದರು.
ನ್ಯಾಯಕ್ಕೆ ವಿರುದ್ಧವಾಗಿ ನಡೆದವರು ಯಾರೇ ಆದರೂ ಅವರ ವಿರುದ್ಧ ಸಾಂವಿಧಾನಿಕ ಚೌಕಟ್ಟಿನಲ್ಲಿ ಧ್ವನಿಯೆತ್ತುವೆವು ಎಂದ ಅವರು, ಆದರ್ಶಬದ್ದ ಐಕ್ಯತೆಗೆ ಸದಾ ಸಿದ್ಧ ಎಂದೂ ಘೋಷಿಸಿದರು. ತನ್ನ ಭಾಷಣದಲ್ಲಿ ತಲಾಕ್ ವಿರೋಧಿ ಮಸೂದೆ, ಧರ್ಮದ ವಿಷಯಗಳಲ್ಲಿ ಸುಧಾರಣಾವಾದಿಗಳ ಹಸ್ತಕ್ಷೇಪ, ಟ್ರಂಪ್ ನಿರ್ಧಾರ, ಕೇರಳದ ರಾಜಕೀಯ ಪಕ್ಷವೊಂದು ಮರ್ಕಝ್ ಗೆ ಬಹಿಷ್ಕಾರ ಹಾಕಿರುವ ಸುದ್ದಿ ಮುಂತಾದ ಹತ್ತು ಹಲವು ವಿಷಯಗಳ ಪ್ರಸ್ತಾಪ ಮಾಡಿ ತಮ್ಮ ನಿಲುವು ಸ್ಪಷ್ಟಪಡಿಸಿದರು. ಶಮ್ಸುಲ್ ಉಲಮಾ ಇ.ಕೆ.ಅಬೂಬಕರ್ ಮುಸ್ಲಿಯಾರ್ ಸಹಿತ ಮರ್ಕಝ್ ನ ಹುಟ್ಟು- ಬೆಳವಣಿಗೆಗಳಲ್ಲಿ ಜೊತೆಯಾಗಿದ್ದ, ಈಗ ನಿಧನರಾಗಿರುವ ಹಲವು ಪ್ರಮುಖರನ್ನು ತನ್ನ ಭಾಷಣದಲ್ಲಿ ಕಾಂತಪುರಂ ಸ್ಮರಿಸಿದರು.
ಕಾಂತಪುರಂ ಉಸ್ತಾದರ ಭಾಷಣದ ಪ್ರಮುಖ ಅಂಶಗಳು
- ತ್ರಿವಳಿ ತ್ವಲಾಖ್ ಮಹಳಾ ವಿರೋಧಿಯಲ್ಲ. ಅದು ಮಹಿಳಾ ಪರ,ತ್ವಲಾಖ್ ನಿಷೇಧ ಮಸೂದೆ ಮಹಿಳಾ ವಿರೋಧಿ.
- ತ್ವಲಾಖ್, ವಿವಾಹ ಮತ್ತಿತರ ವಿಷಯಗಳಲ್ಲಿ ಧಾರ್ಮಿಕ ಜ್ಞಾನ-ನಂಬಿಕೆ ಇಲ್ಲದ ಮುಸ್ಲಿಂ ನಾಮಧಾರಿಗಳು ಮಾಧ್ಯಮಗಳಲ್ಲಿ ತಪ್ಪು ಸಂದೇಶ ರವಾನಿಸುತ್ತಿದ್ದಾರೆ,ಧರ್ಮದ ವಿಷಯವನ್ನು ಹೇಳಲು ಧಾರ್ಮಿಕ ವಿದ್ವಾಂಸರಿದ್ದಾರೆ. ಅದನ್ನು ಧರ್ಮದ ಗಂಧಗಾಳಿಯಿಲ್ಲದ ಸುಧಾರಣಾವಾದಿಗಳು ಹಸ್ತಕ್ಷೇಪ ಮಾಡಬೇಡಿ.
- ಪ್ರಸ್ತಾಪಿತ ತಲಾಖ್ ವಿರೋಧಿ ಮಸೂದೆಯಲ್ಲಿ ತಲಾಕ್ ನೀಡಿದಾತನಿಗೆ ಜೈಲು ಶಿಕ್ಷೆಯ ಪ್ರಸ್ತಾಪವಿದೆ. ಸಿವಿಲ್ ವಿಷಯಗಳಾಗಿರುವ ವಿವಾಹ-ತಲಾಕ್ ನ ವಿಷಯಗಳು ಜೈಲಿಗಟ್ಟುವಂತಹ ಕ್ರಿಮಿನಲ್ ವ್ಯಾಪ್ತಿಗೆ ಹೇಗೆ ಬಂತು?’ ಕಾಂತಪುರಂ ಪ್ರಶ್ನೆ
- ಇಸ್ರೇಲ್ ರಾಜಧಾನಿಯ ಘೋಷಣೆಯು ಟ್ರಂಪ್ ರ ದರ್ಪದ ಪರಮಾವಧಿ.