ಹಲ್ಲೆಗೊಳಗಾಗಿದ್ದ ಅಹ್ಮದ್ ಬಶೀರ್ ನಿಧನ-ಕೂಳೂರು ಮಸೀದಿಯಲ್ಲಿ ಜನಾಝ ಸಂಸ್ಕರಣೆ

ಮಂಗಳೂರು: ನಗರದ ಕೊಟ್ಟಾರ ಚೌಕಿ ಬಳಿ ಬುಧವಾರ ರಾತ್ರಿ ಸಮಾಜಘಾತುಕ ಶಕ್ತಿಗಳಿಂದ ಹಲ್ಲೆಗೊಳಗಾಗಿದ್ದ ಆಕಾಶಭವನ ನಿವಾಸಿ ಅಹ್ಮದ್ ಬಶೀರ್ ಇಲ್ಲಿನ ಎ.ಜೆ. ಆಸ್ಪತ್ರೆಯಲ್ಲಿ ಭಾನುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

ಬಶೀರ್ ಅವರಿಗೆ ಹಲವು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ತೀವ್ರನಿಗಾ ಘಟಕದಲ್ಲಿದ್ದ ಅವರು ಬೆಳಿಗ್ಗೆ 8.05ಕ್ಕೆ ನಿಧನರಾದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಕಾಟಿಪಳ್ಳದಲ್ಲಿ ದೀಪಕ್ ರಾವ್ ಕೊಲೆ ನಡೆದ ಬಳಿಕ ಪ್ರತೀಕಾರವಾಗಿ ನಾಲ್ವರು ಬಶೀರ್ ಮೇಲೆ ತಲವಾರುಗಳಿಂದ ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು.ಬಶೀರ್ ಮೇಲೆ‌ ದಾಳಿ‌ ನಡೆಸಿದ್ದ ಪಡೀಲ್ ನಿವಾಸಿಗಳಾದ ಧನುಷ್, ಕಿಶನ್, ಕಾಸರಗೋಡು ಜಿಲ್ಲೆಯ ಶ್ರೀಜಿತ್ ಮತ್ತು ಸಂದೇಶ್ ಕೋಟ್ಯಾನ್ ಎಂಬ ಯುವಕರನ್ನು ನಗರ ಅಪರಾಧ ಘಟಕದ ಪೊಲೀಸರು ಶನಿವಾರ ಬಂಧಿಸಿದ್ದರು.

ಕುಳೂರು ಮಸೀದಿಯಲ್ಲಿ ಜನಾಝ ಸಂಸ್ಕರಣೆ

ಅಹಮ್ಮದ್ ಬಶೀರ್ ಅವರ ಜನಾಝ ಸಂಸ್ಕರಣೆಯು  ಕೂಳೂರು ಮಸೀದಿಯಲ್ಲಿ ನಡೆಸಲಾಗುವುದು ಎಂದು ಮೃತರ ತಮ್ಮ ಹಕೀಂ ಹೇಳಿದರು.
ಬಶೀರ್ ನಿಧನವಾದ ಸುದ್ದಿ ಹಬ್ಬುತ್ತಿದ್ದಂತೆ ಆಸ್ಪತ್ರೆಯ ಶವಾಗಾರದ ಬಳಿ ನೂರಾರು ಮಂದಿ ನೆರೆದಿದ್ದರು. ಈ ಸಂದರ್ಭ ಮಾತನಾಡಿದ ಅವರು, ನಾವು ಪ್ರವಾದಿ ಮುಹಮ್ಮದ್ ಸ.ಅ ರವರ ಅನುಯಾಯಿಗಳು, ನನ್ನ ಸಹೋದರನ ಸಾವನ್ನು ನೆಪವಾಗಿಸಿ ಯಾರು ಕೂಡಾ ದೊಂಬಿ,ಗಲಭೆ ಸೃಷ್ಟಿಸಬಾರದು ಜಿಲ್ಲೆಯ ಜನತೆ ಸೌಹಾರ್ದತೆಯನ್ನು ಕಾಪಾಡಿಕೊಳ್ಳ ಬೇಕೆಂದು ನೀಡಿದ ಶಾಂತಿಯ ಸಂದೇಶ ಸಾವಲ್ಲೂ ಸಂಭ್ರಮಿಸಲು ಹವಣಿಸುವವರಿಗೆ ತೀಕ್ಷ್ಣವಾದ ಉತ್ತರ ವಾಗಿತ್ತು.

ಆಸ್ಪತ್ರೆಯಿಂದ ಪಾರ್ಥಿವ ಶರೀರವನ್ನು ಆಕಾಶಭವನದಲ್ಲಿರುವ ಮನೆಗೆ ಕೊಂಡೊಯ್ದು, ಅಂತಿಮದರ್ಶನಕ್ಕೆ ಅವಕಾಶ ನೀಡಲಾಗುವುದು. ಬಳಿಕ ಕೂಳೂರು ಮಸೀದಿಯಲ್ಲಿ ಎಲ್ಲರಿಗೂ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದರು.

ಶವಾಗಾರದ ಬಳಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು. ಬಿಗಿಭದ್ರತೆಗೆ ನೂರಾರು ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಎಡಿಜಿಪಿ ಕಮಲ್ ಪಂತ್ ಆಸ್ಪತ್ರೆಗೆ ಭೇಟಿ ನೀಡಿದರು. ಶಾಸಕ ಮೊಯಿದ್ದೀನ್ ಬಾವ ಸ್ಥಳದಲ್ಲಿದ್ದಾರೆ. ಬಶೀರ್ ಪಾರ್ಥಿವ ಶರೀರದ ಮೆರವಣಿಗೆ ಇಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ. ಶಾಂತಿಯುತವಾಗಿ ಎಲ್ಲವೂ ಕೊನೆಗೊಳ್ಳಲಿದೆ ಎಂದು ಆಶಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಸಚಿವ ಯು.ಟಿ.ಖಾದರ್ ಕುಟುಂಬದವರ ನಿರ್ಧಾರವನ್ನು ಶ್ಲಾಘಿಸಿದ್ದು, ಶಾಂತಿ ಕಾಪಾಡಲು ಮನವಿ ಮಾಡಿದ್ದಾರೆ. ಬಶೀರ್ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡುವುದಾಗಿ ಆಸ್ಪತ್ರೆಗೆ ಬಂದಿರುವ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!