“ತ್ರಿವಳಿ ತಲಾಖ್ ಮಸೂದೆ” ರಾಜ್ಯಸಭೆಯಲ್ಲಿ ಅನುಮೋದನೆ ಪಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲ

ನವದೆಹಲಿ: ಮುಸ್ಲಿಮರ ಸಾಂಪ್ರದಾಯಿಕ, ದಾಂಪತ್ಯ ಜೀವನವನ್ನು ಮುಂದುವರಿಸಲು ಯಾವುದೇ ನೆಲೆಯಲ್ಲೂ ಸಾಧ್ಯವಿಲ್ಲ ವೆಂಬ ಸನ್ನಿವೇಶದಲ್ಲಿ ಮಾತ್ರ ಬಳಸಬಲ್ಲ “ತ್ರಿವಳಿ ತಲಾಖ್” ಪತಿ,ಪತ್ನಿಯರ ವಿಚ್ಚೇದನಾ ಹಕ್ಕನ್ನು ಕಸಿದು ಕೊಳ್ಳುವ ರೀತಿಯಲ್ಲಿ ಕೇಂದ್ರ ಸರಕಾರ ರೂಪೀಕರಿಸಿದ  “ತ್ರಿವಳಿ ತಲಾಖ್ ನಿಷೇಧ ಮಸೂದೆ”ಗೆ  ಚಳಿಗಾಲದ ಅಧಿವೇಶನದಲ್ಲಿ  ಅನುಮೋದನೆ ಪಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದ್ದು,  ರಾಜ್ಯಸಭೆ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ.

ಈ ಹಿಂದೆ ಕೇಂದ್ರ ಸರ್ಕಾರ ಮಂಡಿಸಿದ್ದ ತ್ರಿವಳಿ ತಲಾಖ್ ಅನ್ನು ಲೋಕಸಭೆಯಲ್ಲಿ ಅನುಮೋದಿಸಲಾಗಿತ್ತು. ಆದರೆ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ವಿರೋಧದಿಂದಾಗಿ ತ್ರಿವಳಿ ತಲಾಖ್ ಮಸೂದೆಗೆ ಅನುಮೋದನೆ  ದೊರೆತಿರಲಿಲ್ಲ. ಮುಸ್ಲಿಂ ಮಹಿಳೆಯರ (ಮದುವೆ ಹಕ್ಕುಗಳ ರಕ್ಷಣೆ) ಮಸೂದೆ 2017ಕ್ಕೆ (ತ್ರಿವಳಿ ತಲಾಖ್‌ ನಿಷೇಧ ಮಸೂದೆ) ಸಂಬಂಧಿಸಿ ರಾಜ್ಯಸಭೆಯಲ್ಲಿ ಸೃಷ್ಟಿಯಾದ ಬಿಕ್ಕಟ್ಟು ಶುಕ್ರವಾರವೂ ಮುಂದುವರೆದಿದ್ದು, ತ್ರಿವಳಿ ತಲಾಖ್  ಗೆ ರಾಜ್ಯಸಭೆಯಲ್ಲಿ ಅನುಮೋದನೆ ಪಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ.

ಬುಧವಾರವೇ ತ್ರಿವಳಿ ತಲಾಖ್‌ ನಿಷೇಧ ಮಸೂದೆಯನ್ನು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಮಂಡಿಸಿತ್ತಾದರೂ, ಮಸೂದೆಯನ್ನು ಪರಿಷ್ಕರಿಸಲು ಪರಿಶೀಲನಾ ಸಮಿತಿಗೆ ಒಪ್ಪಿಸುವ ಪ್ರಸ್ತಾವವನ್ನು ಮತಕ್ಕೆ ಹಾಕಬೇಕು ಎಂಬ  ವಿರೋಧ ಪಕ್ಷಗಳ ಒತ್ತಾಯವನ್ನು ಸರ್ಕಾರ ತಿರಸ್ಕರಿಸಿತ್ತು. ಅಧಿವೇಶನದ ಕೊನೆಯ ದಿನವಾದ ಇಂದು ತ್ರಿವಳಿ ತಲಾಖ್ ಮಸೂದೆ ರಾಜ್ಯಸಭೆಯಲ್ಲಿ ಮಂಡನೆಯಾಗುವ ನಿರೀಕ್ಷೆ ಇತ್ತು. ಅದರಂತೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು  ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ತಮ್ಮ ತಮ್ಮ ಸದಸ್ಯರಿಗೆ ವಿಪ್ ಕೂಡ ಜಾರಿ ಮಾಡಿದ್ದವು. ಆದರೆ ಆಡಳಿತಾ ರೂಢ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಜಟಾಪಟಿಯಿಂದಾಗಿ ಚಳಿಗಾಲದ ಅಧಿವೇಶನದಲ್ಲಿ ತ್ರಿವಳಿ ತಲಾಖ್ ಗೆ ಅನುಮೋದನೆ ಪಡೆಯಲು ಸಾಧ್ಯವಾಗಿಲ್ಲ.

Leave a Reply

Your email address will not be published. Required fields are marked *

error: Content is protected !!