ದೀಪಕ್ ಹತ್ಯೆಗೆ ಕಾರಣವಾದವರಿಗೆ ಕಠಿಣ ಶಿಕ್ಷೆಯಾಗಬೇಕು: ಅಂಗಡಿ ಮಾಲೀಕ ಮಜೀದ್ ಸಂತಾಪ

ಮಂಗಳೂರು: ‘ದೀಪಕ್ ಒಳ್ಳೆಯ ಹುಡುಗನಾಗಿದ್ದ. ಆತನ ಸಾವನ್ನು ಊಹಿಸಲು ಸಾಧ್ಯವಿಲ್ಲ ಹತ್ಯೆಗೆ ಕಾರಣವಾದವರಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ದೀಪಕ್‌ ಕೆಲಸ ಮಾಡುತ್ತಿದ್ದ ಅಂಗಡಿ ಮಾಲೀಕ ಮಜೀದ್ ಹೇಳಿದ್ದಾರೆ.

‘ನಮ್ಮ ನಡುವೆ ಯಾವುದೇ ಜಾತಿ ಭೇದಬಾವ ಇರಲಿಲ್ಲ. ಪ್ರಮಾಣಿಕತೆಗೆ ಮತ್ತೊಂದು ಹೆಸರೇ ದೀಪಕ್‌, ನಮ್ಮ ನಡುವೆ ಯಾವತ್ತೂ ಧರ್ಮ ಆಚಾರ ವಿಚಾರ ಅಡ್ಡ ಬರಲಿಲ್ಲ. ಸಂಸ್ಕಾರ, ಸಂಸ್ಕೃತಿ ಅಡ್ಡ ಬರಲಿಲ್ಲ. ಮಾನವೀಯತೆಯಿಂದ ನಾವು ಕೆಲಸ ಮಾಡುತ್ತಿದ್ದೆವು. 7 ವರ್ಷದಲ್ಲಿ ಒಂದು ದಿನವೂ ಕೂಡ ನಾನು ಮುಸ್ಲಿಂ, ನೀನು ಹಿಂದೂ ಎಂದೂ ಭೇದಭಾವ ಮಾಡಿರಲಿಲ್ಲ’ ಎಂದು ತಿಳಿಸಿದರು.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ಕಳೆದ 7 ವರ್ಷಗಳಿಂದ ಆತ ನನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅಂಗಡಿಯಲ್ಲಿ ನಮ್ಮ ಭಾಷೆ(ಬ್ಯಾರಿ) ಭಾಷೆಯಲ್ಲೇ ವ್ಯವಹರಿಸುತ್ತಿದ್ದ. ಎಲ್ಲರ ಜೊತೆ ಸ್ನೇಹ ಮನೋಭಾವ ಹೊಂದಿದ್ದ ಆತನ ಹತ್ಯೆಗೆ ಕಾರಣ ಏನು ಎನ್ನುವುದು ನನಗೆ ಗೊತ್ತಿಲ್ಲ’ ಎಂದರು.

‘ಯಾರ ಮೇಲೂ ದೀಪಕ್ ದ್ವೇಷ ಹೊಂದಿರಲಿಲ್ಲ. ನಮ್ಮೆಲ್ಲರ ಜೊತೆ ಚೆನ್ನಾಗಿ ವ್ಯವಹರಿಸುತ್ತಿದ್ದ ದೀಪಕ್ ಕೊಂದಿದ್ದು ಯಾಕೆ ಎನ್ನುವುದು ನನಗೆ ಇನ್ನು ತಿಳಿಯುತ್ತಿಲ್ಲ’ ಎಂದರು.

ಇದೇ ವೇಳೆ ದೀಪಕ್ ಕುಟುಂಬದ ಆಧಾರ ಸ್ತಂಭವಾಗಿದ್ದ, ಯಾವುದೇ ಸಮಾಜ ವಿರೋಧಿ ಚಟುವಟಿಕೆಯಲ್ಲಿ ಆತ ಭಾಗಿಯಾಗಿರಲಿಲ್ಲ ಎಂದು ಹೇಳಿ ಮಜೀದ್ ಕಣ್ಣೀರಿಟ್ಟಿದ್ದಾರೆ.

ದೀಪಕ್ ಅವರು ಅಬ್ದುಲ್‌ ಮಜೀದ್‌ ಅವರ ಮೊಬೈಲ್‌ ಮತ್ತು ಸಿಮ್‌ ವ್ಯಾಪಾರ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದರು. ಬುಧವಾರ ಮಧ್ಯಾಹ್ನ ಮಜೀದ್‌ ಅವರ ಮನೆಗೆ ಹೋಗಿ ಸಿಮ್‌ ವಿತರಣೆಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿಕೊಂಡು ಮರಳುತ್ತಿರುವಾಗ ಅವರನ್ನು ಅಡ್ಡಗಟ್ಟಿ ಹಂತಕರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.

Leave a Reply

Your email address will not be published. Required fields are marked *

error: Content is protected !!