ಪೈಲಟ್ ಗಳ ನಡುವೆ ಕಲಹ: ಜೀವಭಯದಿಂದ ತತ್ತರಿಸಿದ ಪ್ರಯಾಣಿಕರು

ಹೊಸದಿಲ್ಲಿ: ಪೈಲಟ್‌ ಮತ್ತು ಮಹಿಳಾ ಸಹಪೈಲಟ್‌ಗಳ ನಡುವೆ ವಿಮಾನದ ಕಾಕ್‌ಪಿಟ್‌ನಲ್ಲೇ ನಡೆದ ಕಲಹದಿಂದ 324 ಪ್ರಯಾಣಿಕರು ಜೀವಭಯದಿಂದ ತತ್ತರಿಸಿದ ವಿದ್ಯಮಾನ ಹೊಸ ವರ್ಷದ ಮೊದಲ ದಿನ ನಡೆದಿದ್ದು,ತಡವಾಗಿ ಬೆಳಕಿಗೆ ಬಂದಿದೆ.

ಲಂಡನ್‌ನಿಂದ ಮುಂಬಯಿಗೆ ಬರುತ್ತಿದ್ದ ಜೆಟ್‌ ಏರ್‌ವೇಸ್‌ ವಿಮಾನದಲ್ಲಿ ಈ ಘಟನೆ ನಡೆದಿದೆ. ಆದರೆ, ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದ್ದರಿಂದ ನಿರುಮ್ಮಳವಾಯಿತು. ಕೊನೆಗೆ ವಿಮಾನ ಸುರಕ್ಷಿತವಾಗಿ ಇಳಿಯಿತಾದರೂ ಸಹ ಪೈಲಟ್‌ ಮೇಲೆ ಕ್ರಮಕ್ಕೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಸೂಚನೆ ನೀಡಿದೆ.

 ನಡೆದಿದ್ದೇನು?

ಜೆಟ್‌ ಏರ್‌ವೇಸ್‌ ಬೋಯಿಂಗ್‌ 777 ವಿಮಾನ ಮುಂಬಯಿಗೆ ಹೊರಟು ಸ್ವಲ್ಪ ಹೊತ್ತಾಗುತ್ತಿದ್ದಂತೆಯೇ ಪೈಲಟ್‌ ಮತ್ತು ಮಹಿಳಾ ಸಹಪೈಲಟ್‌ ಮಧ್ಯೆ ಕಲಹ ಉಂಟಾಗಿದೆ. ಏನೋ ಜಗಳವಾಗಿ ಪೈಲಟ್‌ ಆಕೆಗೆ ಹಲ್ಲೆ ಮಾಡಿದ್ದಾನೆ. ಆಕೆ ಕಣ್ಣೀರು ಹಾಕಿಕೊಂಡು ಕಾಕ್‌ಪಿಟ್‌ನಿಂದ ಕ್ಯಾಬಿನ್‌ಗೆ ಬಂದಿದ್ದಾಳೆ. ಇದನ್ನು ನೋಡಿ ಅಲ್ಲಿದ್ದ ಅಧಿಕಾರಿಗಳು ಭಯಗೊಂಡರು. ಯಾಕೆಂದರೆ, ಕಾಕ್‌ಪಿಟ್‌ನಲ್ಲಿ ಮಾರ್ಗದರ್ಶನ ನೀಡಲು ಸಹಪೈಲಟ್‌ ಬೇಕೇ ಬೇಕು. ಅಧಿಕಾರಿಗಳೆಲ್ಲ ಸೇರಿ ಆಕೆಯನ್ನು ಸಮಾಧಾನ ಮಾಡಿ ಮರಳಿ ಕಾಕ್‌ಪಿಟ್‌ಗೆ ಕಳುಹಿಸಿದರು. ಅತ್ತ ಪೈಲಟ್‌ ಕೂಡಾ ಆಕೆಯನ್ನು ಕಳುಹಿಸುವಂತೆ ಒತ್ತಾಯಿಸುತ್ತಿದ್ದ. ಕಾಕ್‌ಪಿಟ್‌ನಲ್ಲಿದ್ದ ಕಮಾಂಡರ್‌ ಕೂಡಾ ಆಕೆಯನ್ನು ಸಮಾಧಾನಪಡಿಸಲು ಕ್ಯಾಬಿನ್‌ಗೆ ಬಂದಿದ್ದರು. ಒಂದು ಹಂತದಲ್ಲಿ ಇತರ ಸಿಬ್ಬಂದಿಯ ಕೈಗೆ ವಿಮಾನ ಕೊಟ್ಟು ಪೈಲಟ್‌ ಕೂಡಾ ಕ್ಯಾಬಿನ್‌ಗೆ ಬಂದಿದ್ದು ಅತ್ಯಂತ ಭಯಾನಕ ಪರಿಸ್ಥಿತಿ ನಿರ್ಮಿಸಿತು. ಎಲ್ಲರ ಒತ್ತಾಯಕ್ಕೆ ಮಣಿದು ಆಕೆ ಕಾಕ್‌ಪಿಟ್‌ಗೆ ಹೋದರೂ ಮತ್ತೊಮ್ಮೆ ಜಗಳವಾಗಿ ಹೊರಗೋಡಿ ಬಂದಳೆನ್ನಲಾಗಿದೆ.

ಅಂತಿಮವಾಗಿ ಎಲ್ಲ ಪ್ರಯಾಣಿಕರು ಭಯಗೊಂಡಿರುವುದನ್ನು ಗಮನಿಸಿದ ಆಕೆ ಕಾಕ್‌ಪಿಟ್‌ಗೆ ತೆರಳಿದಳು. ಹೇಗೋ ವಿಮಾನ ಮುಂಬಯಿಯಲ್ಲಿ ಸುರಕ್ಷಿತವಾಗಿ ಇಳಿಯಿತು.

ಇಬ್ಬರು ಮಕ್ಕಳ ಸಹಿತ 324 ಪ್ರಯಾಣಿಕರು, 14 ಸಿಬ್ಬಂದಿಯ ಪ್ರಾಣದೊಂದಿಗೆ ಚೆಲ್ಲಾಟವಾಡಿದ ವಿದ್ಯಮಾನವನ್ನು ಜೆಟ್‌ ಏರ್‌ವೇಸ್‌ ಗಂಭೀರವಾಗಿ ಪರಿಗಣಿಸಿದ್ದು, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ)ಕ್ಕೂ ವರದಿ ಸಲ್ಲಿಸಿದೆ. ಡಿಜಿಸಿಎ ಇಡೀ ಪ್ರಕರಣದ ತನಿಖೆಗೆ ಆದೇಶಿಸಿದ್ದು, ಪೈಲಟ್‌ ಮತ್ತು ಸಹ ಪೈಲಟ್‌ನ ಲೈಸನ್ಸ್‌ನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.

Leave a Reply

Your email address will not be published. Required fields are marked *

error: Content is protected !!